Advertisement

‘4.30-6.00 ಮುಹೂರ್ತ, ನಾಲ್ಕು ಜನ ಕಾಣಿಸ್ತಿಲ್ಲ’ಹೀಗೊಂದು ಕನ್ನಡ ಸಿನಿಮಾ

02:41 PM Jan 31, 2023 | Team Udayavani |

ಕೆಲವೊಂದು ಸಿನಿಮಾಗಳು ತನ್ನ ಸ್ಟಾರ್‌ ಕಾಸ್ಟಿಂಗ್‌ ಮತ್ತು ಸಬ್ಜೆಕ್ಟ್ ನಿಂದ ಗಮನ ಸೆಳೆದರೆ, ಇನ್ನು ಕೆಲವು ಸಿನಿಮಾಗಳು ತನ್ನ ಟೈಟಲ್‌ನಿಂದಲೇ ಗಮನ ಸೆಳೆಯುತ್ತವೆ. ಈಗ ಅಂಥದ್ದೇ ಒಂದು ಟೈಟಲ್‌ನಿಂದ ಗಮನ ಸೆಳೆಯುತ್ತಿರುವ ಸಿನಿಮಾ “4.30-6.00 ಮುಹೂರ್ತ, ನಾಲ್ಕು ಜನ ಕಾಣಿಸ್ತಿಲ್ಲ’. ಇದೇನು ಸಿನಿಮಾದ ಟೈಟಲ್‌ ಈ ಥರ ಇದೆಯಲ್ಲ? ಎಂಬ ಪ್ರಶ್ನೆಗೆ ಚಿತ್ರತಂಡದ ಉತ್ತರ ಹೀಗಿದೆ, “ಸಿನಿಮಾದ ಟೈಟಲ್ಲೇ ಹೇಳುವಂತೆ, ಇದು ಮದುವೆಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ನಡೆಯುವ ಸಿನಿಮಾ. ಮದುವೆ ಮುಹೂರ್ತದ ಸಮಯದಲ್ಲಿ ಮದುವೆಯಾಗಬೇಕಾದ ನಾಲ್ಕು ಜನ ನಾಪತ್ತೆಯಾಗುತ್ತಾರೆ. ಇದ್ದಕ್ಕಿದ್ದಂತೆ ಹೀಗೆ ನಾಪತ್ತೆಯಾಗಲು ಕಾರಣವೇನು? ನಾಪತ್ತೆಯಾದವರು ಏನಾದರು? ಎಂಬುದೇ ಸಿನಿಮಾದ ಕಥಾಹಂದರ’ ಎಂದು ವಿವರಣೆ ಕೊಡುತ್ತದೆ ಚಿತ್ರತಂಡ.

Advertisement

“90ರ ದಶಕದಲ್ಲಿ ನಡೆಯುವ ರೆಟ್ರೊ ಕಥೆಯು ಕಲ್ಯಾಣ ಮಂಟಪದಲ್ಲಿ ಒಂದು ದಿನದಲ್ಲಿ ನಡೆಯುವ ಘಟನೆಗಳನ್ನು ಹಾಸ್ಯದ ಮೂಲಕ ಈ ಸಿನಿಮಾದಲ್ಲಿ ತೆರೆಮೇಲೆ ತರಲಾಗುತ್ತಿದೆ. ವಿವಾಹಕ್ಕೆ ಹೋದ ಸಂದರ್ಭದಲ್ಲಿ ನೋಡಿದಂತ ನೈಜ ಅಂಶಗಳನ್ನು ಚಿತ್ರಣ ಸಿನಿಮಾದಲ್ಲಿದೆ. ಮದುವೆ ಅಂದರೆ ಎಷ್ಟೆಲ್ಲಾ ಪ್ರಶ್ನೆಗಳು ಉದ್ಭವವಾಗುತ್ತದೆ. ವರದಕ್ಷಿಣೆ, ಕುಡಿದು ಬಂದು ಗಲಾಟೆ ಮಾಡುವುದು, ಅಡುಗೆ ಸರಿಯಿಲ್ಲವೆಂದು ಮೂಗು ತೂರಿಸುವುದು. ಹೆಣ್ಣು ಓಡಿ ಹೋಗುವುದು, ಮತ್ತೂಂದು ಕಡೆ ಗಂಡು ವಿರೋಧ ವ್ಯಕ್ತಪಡಿಸುವುದು… ಇನ್ನು ಮುಂತಾದವು ಆ ಜಾಗದಲ್ಲಿ ನಡೆಯುತ್ತದೆ. ಅಂತಿಮವಾಗಿ ಶುಭ ಮುಹೂರ್ತ ನಡೆಯುತ್ತದಾ? ಇಲ್ಲವಾ? ಎಂಬುದು ಕಥೆಯ ಒಂದು ಎಳೆಯಾಗಿದೆ’ ಎನ್ನುತ್ತದೆ ಚಿತ್ರತಂಡ.

ಇನ್ನು “4.30-6.00 ಮುಹೂರ್ತ, ನಾಲ್ಕು ಜನ ಕಾಣಿಸ್ತಿಲ್ಲ’ ಸಿನಿಮಾದಲ್ಲಿ “ರಥಾವರ’ ನಿರ್ಮಾಪಕ ಧರ್ಮಶ್ರೀ ಮಂಜುನಾಥ್‌ ಪುತ್ರ ಗೋವಿಂದ್‌ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಜಾನ್ವಿ ಶರ್ಮ, ಸುರಕ್ಷಿತಾ ನಾಯಕಿಯರಾಗಿದ್ದು ಉಳಿದಂತೆ ಬಲರಾಜವಾಡಿ, ಬ್ಯಾಂಕ್‌ ಜನಾರ್ಧನ್‌, ಟೆನ್ನಿಸ್‌ ಕೃಷ್ಣ, ಕಮಲಾ, ತನುಜಾ, ಮಮತಾ, ಸವಿತಾ, ಅರವಿಂದ್‌, ಸುಜಿತ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಪೂವೈ ಸುರೇಶ್‌ ಮತ್ತು ಶಿವರಾಜ್‌ ಜಂಟಿಯಾಗಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. “ನೀಲಕಂಠ ಫಿಲಿಂಸ್‌’ ಬ್ಯಾನರಿನಲ್ಲಿ ಡಿ. ಯೋಗರಾಜ್‌ – ಮಹೇಂದ್ರನ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಗ್ನಿ ಗಣೇಶ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

ಇತ್ತೀಚೆಗೆ “4.30-6.00 ಮುಹೂರ್ತ, ನಾಲ್ಕು ಜನ ಕಾಣಿಸ್ತಿಲ್ಲ’ ಚಿತ್ರದ ಮುಹೂರ್ತ ನಡೆಸಿರುವ ಚಿತ್ರತಂಡ ಚನ್ನಪಟ್ಟಣ, ಮಂಡ್ಯ, ಚಿಕ್ಕಮಗಳೂರು, ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸುವ ಯೋಚನೆಯಲ್ಲಿದೆ. ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಜನೆಯಿದೆ ಎಂಬುದು ಚಿತ್ರತಂಡದ ಮಾಹಿತಿ.

Advertisement

Udayavani is now on Telegram. Click here to join our channel and stay updated with the latest news.

Next