Advertisement

ತೃತೀಯ ಏಕದಿನ: ಲಂಕಾ ವಿರುದ್ಧ ಆರು ವಿಕೆಟ್‌ ಗೆಲುವು; ಭಾರತಕ್ಕೆ ಸರಣಿ

11:15 AM Aug 28, 2017 | Team Udayavani |

ಪಲ್ಲೆಕಿಲೆ: ಆರಂಭಿಕ ರೋಹಿತ್‌ ಶರ್ಮ ಅವರ ಶತಕ ಮತ್ತು ಧೋನಿ ಜತೆ ಮುರಿಯದ ಐದನೇ ವಿಕೆಟಿಗೆ ಸೇರಿಸಿದ 157 ರನ್ನುಗಳ ಜತೆಯಾಟದಿಂದಾಗಿ ಭಾರತವು ರವಿವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾವನ್ನು ಆರು ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ. ಈ ಗೆಲುವಿನಿಂದ ಭಾರತ ಐದು ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿದೆ. ಟೆಸ್ಟ್‌ ಸರಣಿಯನ್ನು ಕ್ಲೀನ್‌ಸ್ವೀಪ್‌ ಮೂಲಕ ಗೆದ್ದಿರುವ ಭಾರತ ಇದೀಗ ಏಕದಿನ ಸರಣಿಯನ್ನೂ ಕ್ಲೀನ್‌ಸ್ವೀಪ್‌ಗೈಯುವತ್ತ ಹೊರಟಿದೆ.

Advertisement

ಜಸ್‌ಪ್ರೀತ್‌ ಬುಮ್ರಾ ದಾಳಿಗೆ ಕುಸಿದ ಶ್ರೀಲಂಕಾ 9 ವಿಕೆಟಿಗೆ 217 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕುತ್ತರವಾಗಿ ಭಾರತ 61 ರನ್ನಿಗೆ 4 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿದ್ದರೂ ರೋಹಿತ್‌ ಮತ್ತು ಧೋನಿ ಅವರ ಸಾಹಸದ ಬ್ಯಾಟಿಂಗ್‌ನಿಂದಾಗಿ ಸುಲಭ ಗೆಲುವು ಒಲಿಸಿಕೊಂಡಿತು. ಏಕದಿನ ಕ್ರಿಕೆಟ್‌ನಲ್ಲಿ 12ನೇ ಶತಕ ಬಾರಿಸಿದ ರೋಹಿತ್‌ 124 ರನ್‌ ಗಳಿಸಿ ಔಟಾಗದೆ ಉಳಿದರು. 145 ಎಸೆತ ಎದುರಿಸಿದ ಅವರು 16 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದರೆ ಧೋನಿ 67 ರನ್‌ ಗಳಿಸಿ ಔಟಾಗದೆ ಉಳಿದರು.

ಗೆಲ್ಲಲು 8 ರನ್‌ಗಳಿರುವಾಗ ಶ್ರೀಲಂಕಾದ ಅಭಿಮಾನಿಗಳು ಮೈದಾನಕ್ಕೆ ನೀರಿನ ಬಾಟಲಿ ಎಸೆದ ಕಾರಣ ಕೆಲವು ಸಮಯ ಪಂದ್ಯ ಸ್ಥಗಿತಗೊಂಡಿತ್ತು. ಸತತ ಸೋಲಿನಿಂದ ಬೇಸರಗೊಂಡ ಅಭಿಮಾನಿಗಳು ಈ ಮೊದಲು ಶ್ರೀಲಂಕಾ ಕ್ರಿಕೆಟಿಗರು ಪ್ರಯಾಣಿಸುತ್ತಿದ್ದ ಬಸ್‌ ಅನ್ನು ತಡೆದು ಪ್ರತಿಭಟಿಸಿದ್ದರು. ಇದೀಗ ಮೈದಾನಕ್ಕೆ ಬಾಟಲಿ ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮೊದಲು ನಿಷೇಧಗೊಂಡ ಉಪುಲ್‌ ತರಂಗ ಮತ್ತು ಗಾಯಗೊಂಡ ದನುಷ್ಕ ಗುಣತಿಲಕ ಬದಲಿಗೆ ತಂಡಕ್ಕೆ ಮರಳಿದ್ದ ದಿನೇಶ್‌ ಚಂಡಿಮಾಲ್‌ ಮತ್ತು ಲಹಿರು ತಿರಿಮನ್ನೆ ಅವರನ್ನು ಹೊರತುಪಡಿಸಿ ಆತಿಥೇಯ ತಂಡದ ಉಳಿದ ಯಾವುದೇ ಆಟಗಾರ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಲು ವಿಫ‌ಲರಾಗಿದ್ದಾರೆ. ಈಗಾಗಲೇ ಸರಣಿಯಲ್ಲಿ 0-2 ಹಿನ್ನಡೆಯಲ್ಲಿರುವ ಶ್ರೀಲಂಕಾ ವೈಟ್‌ವಾಶ್‌ಗೆ ಗುರಿಯಾಗುವ ಸಾಧ್ಯತೆಯನ್ನು ತೆರೆದಿಟ್ಟಿದೆ.

ತಂಡಕ್ಕೆ ಮರಳಿದ್ದ ಚಂಡಿಮಾಲ್‌ ಮತ್ತು ತಿರಿಮನ್ನೆ ಮಾತ್ರ ಭಾರತೀಯ ದಾಳಿಯನ್ನು ದಿಟ್ಟವಾಗಿ ಎದುರಿಸಿದ್ದರು. ಅವರಿಬ್ಬರು ಮೂರನೇ ವಿಕೆಟಿಗೆ 72 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡ ಕಾರಣ ತಂಡ ಸಾಧಾರಣ ಮೊತ್ತ ಗಳಿಸುವಂತಾಯಿತು. ಉತ್ತಮವಾಗಿ ಆಡುತ್ತಿದ್ದ ಚಂಡಿಮಾಲ್‌ 36 ರನ್ನಿಗೆ ಔಟಾದರೆ ತಿರಿಮನ್ನೆ 105 ಎಸೆತ ಎದುರಿಸಿ 80 ರನ್‌ ಹೊಡೆದರು. 5 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದ ಅವರು ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡರು.

Advertisement


ಸರಣಿಯಲ್ಲಿ ಇದೇ ಮೊದಲ ಬಾರಿ ಟಾಸ್‌ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿತು. ನಿರೋಷನ್‌ ಡಿಕ್ವೆಲ್ಲ ಜತೆ ಚಂಡಿಮಾಲ್‌ ಇನ್ನಿಂಗ್ಸ್‌ ಆರಂಭಿಸಿದರು. ಚಂಡಿಮಾಲ್‌ ಈ ಹಿಂದೆ ಕೇವಲ ಎರಡು ಬಾರಿ ಇನ್ನಿಂಗ್ಸ್‌ ಆರಂಭಿಸಿದ್ದರು. ನಾಲ್ಕನೇ ಓವರಿನಲ್ಲಿ ಎಲ್‌ಬಿಡಬ್ಲ್ಯು ಔಟ್‌ನಿಂದ ಡಿಆರ್‌ಎಸ್‌ ಮೂಲಕ ಪಾರಾದ ಡಿಕ್ವೆಲ್ಲ ನಾಲ್ಕು ಎಸೆತಗಳ ಬಳಿಕ ಮತ್ತೆ ಎಲ್‌ಬಿಗೆ ಬಲಿಯಾದರು. ಇದರಿಂದಾಗಿ ಶ್ರೀಲಂಕಾ ಬಿರುಸಿನ ಆಟ ಆರಂಭಿಸಲು ವಿಫ‌ಲವಾಯಿತು. ಸರಣಿಯ ಈ ಹಿಂದಿನ ಎರಡು ಪಂದ್ಯಗಳಲ್ಲಿ ಡಿಕ್ವೆಲ್ಲ ತಂಡಕ್ಕೆ ಬಿರುಸಿನ ಆರಂಭ ಒದಗಿಸಿದ್ದರು. ಈ ಪಂದ್ಯದಲ್ಲಿ ಭಾರತದ ಫೀಲ್ಡಿಂಗ್‌ ಅತ್ಯಂತ ಕಳಪೆ ಮಟ್ಟದಲ್ಲಿತ್ತು. ರೋಹಿತ್‌ ಅದ್ಭುತ ಕ್ಯಾಚೊಂದನ್ನು ಪಡೆದುದನ್ನು ಬಿಟ್ಟರೆ ಉಳಿದ ಆಟಗಾರರು ಕೆಲವೊಂದು ಅವಕಾಶವನ್ನು ಕೈಚೆಲ್ಲಿದ್ದರು.

ಬುಮ್ರಾ ಮಾರಕ: ಇನ್ನಿಂಗ್ಸ್‌ನ ಆರಂಭದಲ್ಲಿ ಮತ್ತೆ ಕೊನೆ ಹಂತದಲ್ಲಿ ಮಾರಕ ದಾಳಿ ಸಂಘಟಿಸಿದ ಬುಮ್ರಾ ತನ್ನ 10 ಓವರ್‌ಗಳ ದಾಳಿಯಲ್ಲಿ ಕೇವಲ 27 ರನ್‌ ನೀಡಿ ಐದು ವಿಕೆಟ್‌ ಕಿತ್ತರು. ಅವರು ಐದು ವಿಕೆಟ್‌ಗಳ ಗೊಂಚಲನ್ನು ಪಡೆದಿರುವುದು ಇದೇ ಮೊದಲ ಸಲವಾಗಿದೆ. 22 ರನ್ನಿಗೆ 4 ವಿಕೆಟ್‌ ಕಿತ್ತಿರುವುದು ಅವರ ಈ ಹಿಂದಿನ ಶ್ರೇಷ್ಠ ನಿರ್ವಹಣೆಯಾಗಿತ್ತು. ಬುಮ್ರಾ ಈ ಸರಣಿಯ ದ್ವಿತೀಯ ಪಂದ್ಯದಲ್ಲಿ 4 ವಿಕೆಟ್‌ ಪಡೆದಿದ್ದರು.


ಸ್ಕೋರುಪಟ್ಟಿ
ಶ್ರೀಲಂಕಾ

ನಿರೋಷನ್‌ ಡಿಕ್ವೆಲ್ಲ    ಎಲ್‌ಬಿಡಬ್ಲ್ಯು ಬಿ ಬುಮ್ರಾ    13
ದಿನೇಶ್‌ ಚಂಡಿಮಾಲ್‌    ಸಿ ಬುಮ್ರಾ ಬಿ ಪಾಂಡ್ಯ    36
ಕುಸಲ್‌ ಮೆಂಡಿಸ್‌    ಸಿ ಶರ್ಮ ಬಿ ಬುಮ್ರಾ    1
ಲಹಿರು ತಿರಿಮನ್ನೆ    ಸಿ ಜಾಧವ್‌ ಬಿ ಬುಮ್ರಾ    80
ಏಂಜೆಲೊ ಮ್ಯಾಥ್ಯೂಸ್‌    ಎಲ್‌ಬಿಡಬ್ಲ್ಯು ಬಿ ಜಾಧವ್‌    11
ಚಮರ ಕಪುಗೆಡೆರ    ಬಿ ಪಟೇಲ್‌    14
ಮಲಿಂದ ಸಿರಿವರ್ಧನ    ಬಿ ಬುಮ್ರಾ    29
ಅಖೀಲ ಧನಂಜಯ    ಬಿ ಬುಮ್ರಾ    2
ದುಷ್ಮಂತ ಚಮೀರ    ರನೌಟ್‌    6
ವಿಶ್ವ ಫೆರ್ನಾಂಡೊ    ಔಟಾಗದೆ    5
ಲಸಿತ ಮಾಲಿಂಗ    ಔಟಾಗದೆ    1

ಇತರ:        19
ಒಟ್ಟು (50 ಓವರ್‌ಗಳಲ್ಲಿ 9 ವಿಕೆಟಿಗೆ)    217

ವಿಕೆಟ್‌ ಪತನ: 1-18, 2-28, 3-100, 4-138, 5-159, 6-181, 7-191, 8-201, 9-210

ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌    9-2-41-0
ಜಸ್‌ಪ್ರೀತ್‌ ಬುಮ್ರಾ    10-2-27-5
ಯುಜ್ವೇಂದ್ರ ಚಾಹಲ್‌    10-0-49-0
ಹಾರ್ದಿಕ್‌ ಪಾಂಡ್ಯ        8-0-42-1
ಅಕ್ಷರ್‌ ಪಟೇಲ್‌        10-1-35-1
ಕೇದಾರ್‌ ಜಾಧವ್‌        3-0-12-1

ಭಾರತ
ರೋಹಿತ್‌ ಶರ್ಮ    ಔಟಾಗದೆ    124
ಶಿಖರ್‌ ಧವನ್‌    ಬಿ ಮಾಲಿಂಗ    5
ವಿರಾಟ್‌ ಕೊಹ್ಲಿ    ಸಿ ಚಮೀರ ಬಿ ಫೆರ್ನಾಂಡೊ    3
ಕೆಎಲ್‌ ರಾಹುಲ್‌    ಸಿ ತಿರಿಮನ್ನೆ ಬಿ ಧನಂಜಯ    17
ಕೇದಾರ್‌ ಜಾಧವ್‌    ಎಲ್‌ಬಿಡಬ್ಲ್ಯು ಬಿ ಧನಂಜಯ    0
ಎಂಎಸ್‌ ಧೋನಿ    ಔಟಾಗದೆ    67

ಇತರ:        2
ಒಟ್ಟು  (45.1 ಓವರ್‌ಗಳಲ್ಲಿ 4 ವಿಕೆಟಿಗೆ)    218

ವಿಕೆಟ್‌ ಪತನ: 1-9, 2-19, 3-61, 4-61

ಬೌಲಿಂಗ್‌:
ಲಸಿತ ಮಾಲಿಂಗ        5-0-25-1
ವಿಶ್ವ ಫೆರ್ನಾಂಡೊ        8.1-2-35-1
ದುಷ್ಮಂತ ಚಮೀರ        10-1-59-0
ಏಂಜೆಲೊ ಮ್ಯಾಥ್ಯೂಸ್‌    3-0-17-0
ಅಖೀಲ ಧನಂಜಯ    10-0-38-2
ಮಿಲಿಂದ ಸಿರಿವರ್ಧನ    9-0-43-0

Advertisement

Udayavani is now on Telegram. Click here to join our channel and stay updated with the latest news.

Next