Advertisement

ಕರಾವಳಿಯ 39 ಗ್ರಾ.ಪಂ.ಗಳಿಗೆ “ಕ್ಷಯಮುಕ್ತ’ ಕಿರೀಟ

01:26 AM Feb 25, 2024 | Team Udayavani |

ಮಂಗಳೂರು: ಭಾರತದಲ್ಲಿ 2025ರ ವೇಳೆಗೆ ಕ್ಷಯರೋಗ (ಟಿಬಿ)ವನ್ನು ಇನ್ನಿಲ್ಲವಾಗಿಸುವ ಉದ್ದೇÍ ‌ದಿಂದ ವಿನೂತನ ಪ್ರಯತ್ನ ಗಳನ್ನು ಕೇಂದ್ರ ಸರಕಾರ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಕೈಗೊಳ್ಳುತ್ತಿದೆ. ಅದರ ಭಾಗವಾಗಿ ಕ್ಷಯ ಮುಕ್ತ ಕರ್ನಾಟಕವನ್ನಾಗಿಸಲು ರಾಷ್ಟ್ರೀಯ ಯೋಜನೆಗೆ ಅನುಗುಣ ವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಕೊಳ್ಳಲಾಗುತ್ತಿದೆ.

Advertisement

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಮನ್ವಯದಲ್ಲಿ ಗ್ರಾ.ಪಂ.ಗಳನ್ನು ಕ್ಷಯ ಮುಕ್ತಗೊಳಿಸಿ ಘೋಷಣೆ ಮಾಡಲು ಇಲಾಖೆ ಮುಂದಾಗಿದೆ.

ಅದರಂತೆ ಉಡುಪಿ ಜಿಲ್ಲೆಯ 30 ಮತ್ತು ದ.ಕ. ಜಿಲ್ಲೆಯ 9 ಗ್ರಾಪಂಗಳನ್ನು ಕ್ಷಯ ಮುಕ್ತ ಗ್ರಾ.ಪಂ.ಗಳೆಂದು ಜಿಲ್ಲಾ ಮಟ್ಟದಿಂದ ಆಯ್ಕೆ ಮಾಡಲಾಗಿದೆ. ಗ್ರಾಮದಲ್ಲಿರುವ ಜನರ ಆರೋಗ್ಯ ತಪಾಸಣೆ, ವರ್ಷದ ಅವಧಿಯಲ್ಲಿ ಪತ್ತೆಯಾದ ಕ್ಷಯರೋಗ ಪ್ರಕರಣಗಳು, ರೋಗದಿಂದ ಗುಣಮುಖರಾಗಿರುವ ಅಂಕಿ-ಅಂಶ ಇತ್ಯಾದಿಗಳ ಆಧಾರದ ಮೇಲೆ ಈ ಆಯ್ಕೆ ನಡೆದಿದೆ. ನಗರ ಪ್ರದೇಶಕ್ಕೆ ಹತ್ತಿರದ ಗ್ರಾ.ಪಂ.ಗಳು ಈ ಪಟ್ಟಿಯಿಂದ ಹೊರಗುಳಿದಿವೆ.
ಮುಂದಿನ ಹಂತದಲ್ಲಿ ಈ ಗ್ರಾ.ಪಂ.ಗಳಿಗೆ ರಾಜ್ಯದ ಆರೋಗ್ಯ ಇಲಾಖೆಯ ತಂಡಗಳು ಭೇಟಿ ನೀಡಲಿದ್ದು, ಇಲಾಖಾ ಮಾನದಂಡಗಳಂತೆ ಈ ಆಯ್ಕೆ ನಡೆದಿದೆಯೇ ಎಂದು ಪರಾಮರ್ಶಿಸಲಿದೆ. ಅದರಂತೆ ಪ್ರಸ್ತುತ ಆಯ್ಕೆಯಾಗಿರುವ ಎಲ್ಲ ಗ್ರಾ.ಪಂ.ಗಳು ಅಥವಾ ಬಹುತೇಕ ಗ್ರಾ.ಪಂ.ಗಳು ಕ್ಷಯ ಮುಕ್ತ ಎನ್ನುವ ಪ್ರಮಾಣಪತ್ರ ಪಡೆಯಲಿವೆ.

ಚುನಾಯಿತ ಸಂಸ್ಥೆಯಾದ ಗ್ರಾಮ ಪಂಚಾಯತ್‌ ಕ್ಷಯ ರೋಗದ ವಿರುದ್ಧದ ಹೋರಾಟದಲ್ಲಿ ಸ್ಥಳೀಯವಾಗಿ ನಿರ್ಣಾಯಕ ನಾಯಕತ್ವವನ್ನು ವಹಿಸಬೇಕಾಗಿದೆ. ಆದ್ದರಿಂದ ಪಂಚಾಯತ್‌ ಮಟ್ಟದಲ್ಲಿ ಕ್ಷಯ ರೋಗಕ್ಕೆ ಸಂಬಂಧಿಸಿದ ಉತ್ತೇಜಕ ಚಟುವಟಿಕೆಗಳನ್ನು ಪಂಚಾಯತ್‌ ಅಭಿವೃದ್ಧಿ ಯೋಜನೆಗಳಲ್ಲಿ ಅಳವಡಿಸುವಲ್ಲಿ ಪಂಚಾಯತ್‌ ಪ್ರಮುಖ ಪಾತ್ರ ವಹಿಸುತ್ತದೆ. ಕ್ಷಯ ರೋಗದ ಲಕ್ಷಣಗಳು, ಅದರ ತಡೆಗಟ್ಟುವಿಕೆ, ಅದರ ಕುರಿತಂತೆ ಇರುವ ಕಳಂಕವನ್ನು ತಗ್ಗಿಸುವುದು ಮತ್ತು ಕ್ಷಯ ರೋಗಿಗಳಿಗೆ ಬೆಂಬಲ ನೀಡುವ ಸಲುವಾಗಿ ಈ ವರ್ಷದಿಂದ ಕ್ಷಯ ಮುಕ್ತ ಗ್ರಾಪಂ ಯೋಜನೆಯನ್ನು ಜಾರಿಗೆ ತರಲಾಗಿದೆ.

ಒಂದು ವರ್ಷದ
ಅವಧಿಯ ಮಾನ್ಯತೆ
ಕ್ಷಯ ಮುಕ್ತ ಗ್ರಾ.ಪಂ. ಘೋಷಣೆ ಯಾಗಿರುವ ಗ್ರಾಪಂಗಳಿಗೆ ಈ ಮಾನ್ಯತೆ ಒಂದು ವರ್ಷಗಳ ಅವಧಿಗೆ ಇರಲಿದೆ. ಕ್ಷಯ ಮುಕ್ತ ಗ್ರಾಮ ಪಂಚಾಯತ್‌ ಪ್ರಮಾಣ ಪತ್ರದೊಂದಿಗೆ “ಆರೋಗ್ಯ ಕರ ಗ್ರಾಮದೆಡೆಗೆ ಪಂಚಾಯತ್‌ ಸಾಗುತ್ತಿದೆ’ ಎಂದು ದೃಢೀಕರಿಸಿ ಗಾಂಧೀಜಿಯವರ ಪ್ರತಿಮೆಯನ್ನು ನೀಡಲಾಗುತ್ತದೆ. ಒಂದು ವರ್ಷದ ಸಾಧನೆಗೆ ಕಂಚು, 2 ವರ್ಷಗಳ ಸತತ ಸಾಧನೆ ಮಾಡಿದರೆ ಬೆಳ್ಳಿ ಮತ್ತು ನಿರಂತರ ಮೂರು ವರ್ಷಗಳ ಸಾಧನೆಗೆ ಚಿನ್ನದ ಪ್ರತಿಮೆ ದೊರೆಯಲಿದೆ.

Advertisement

ದಕ್ಷಿಣ ಕನ್ನಡ: 9 ಗ್ರಾ.ಪಂ.
ಬೆಳ್ತಂಗಡಿಯಲ್ಲಿ ಕೊಕ್ಕಡ ಮತ್ತು ಹೊಸಂಗಡಿ, ಬಂಟ್ವಾಳ ಅಳಿಕೆ, ಅಮ್ಮುಂಜೆ, ಮಾಣಿಲ, ಪಿಲಾತಬೆಟ್ಟು, ಸುಳ್ಯದಲ್ಲಿ ಮಡಪ್ಪಾಡಿ, ಕಳಂಜ, ಕೊಲ್ಲಮೊಗ್ರು ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದೆ.

ಉಡುಪಿ: 30 ಗ್ರಾ.ಪಂ.
ಉಡುಪಿ ಜಿಲ್ಲೆಯಲ್ಲಿ ಬ್ರಹ್ಮಾವರ ಟಿ.ಬಿ.ಯುನಿಟ್‌ ವ್ಯಾಪ್ತಿಯ ಪಾಂಡೇಶ್ವರ, ಉಪ್ಪೂರು, ಹಾವಂಜೆ, ಚೇರ್ಕಾಡಿ, ನೀಲಾವರ, ಆರೂರು, ಕರ್ಜೆ, ಕಳತ್ತೂರು, ಕಾಪುವಿನ ಮಜೂರು, ಕೋಟೆ, ಪಲಿಮಾರು, ಕುತ್ಯಾರು, ಬಡಾ, ಉಡುಪಿಯ ಬೈರಂಪಳ್ಳಿ, ಬೆಳ್ಳೆ, ಮಣಿಪುರ, ಕಾರ್ಕಳದ ಮರ್ಣೆ, ಬೆಳ್ಮಣ್‌, ದುರ್ಗ, ಈದು, ರೆಂಜಾಳ, ನಂದಳಿಕೆ, ಮುದ್ರಾಡಿ, ಹೆಬ್ರಿ, ಕುಂದಾಪುರದ ಗಂಗೊಳ್ಳಿ, ಇಡೂರು ಕುಂಜಾಡಿ, ಶಂಕರನಾರಾಯಣ, ಎಡಮೊಗೆ, ಬೈಂದೂರಿನ ನಡಾ, ಹಳ್ಳಿಹೊಳೆ ಗ್ರಾ.ಪಂ.ಗಳನ್ನು ಜಿಲ್ಲೆಯಲ್ಲಿ ಕ್ಷಯಮುಕ್ತ ಎಂದು ಘೋಷಣೆ ಮಾಡಲಾಗಿದೆ.

ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಗ್ರಾ.ಪಂ.ಗಳ ಪಟ್ಟಿಯನ್ನು ಜಿ.ಪಂ. ಸಿಇಒ ಅವರ ಮೂಲಕ ರಾಜ್ಯಕ್ಕೆ ಕಳುಹಿಸಲಾಗಿದೆ. ಬಳಿಕ ರಾಜ್ಯ ತಂಡ ಭೇಟಿ ನೀಡಿ, ಜಿಲ್ಲಾ ಮಟ್ಟದಲ್ಲಿ ಮಾನದಂಡಗಳಿಗೆ ಅನುಸಾರವಾಗಿ ಘೊಷಣೆ ಮಾಡಲಾಗಿದೆಯೇ ಎಂದು ಪರಿಶೀಲಿಸಿ ಅಂತಿಮ ಘೋಷಣೆ ಮಾಡಲಿದೆ. ಆಯ್ಕೆಯಾಗುವ ಗ್ರಾ.ಪಂ.ಗಳಿಗೆ ಮಾ.24ರ ವಿಶ್ವ ಟಿ.ಬಿ. ದಿನದಂದು ಪ್ರಮಾಣಪತ್ರ ದೊರೆಯಲಿದೆ.
– ಡಾ| ಬದ್ರುದ್ದೀನ್‌,
ಡಾ| ಚಿದಾನಂದ ಸಂಜು,
ಕ್ಷಯ ರೋಗ ನಿರ್ಮೂಲನಾಧಿಕಾರಿಗಳು ದ.ಕ., ಉಡುಪಿ

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next