ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಜಿಧಿಧಿ-ಕೆಟಗರಿ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಕುರಿತು ವಿಚಾರಣೆ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಎ.ಎಂ. ಫರೂಕ್ ಅವರ ನೇತೃತ್ವದ ವಿಚಾರಣಾ ಸಮಿತಿ ಗುರುವಾರ 60 ಜಿ-ಕೆಟಗರಿ ನಿವೇಶನ ಕುರಿತು ಎರಡನೇ ಕಂತಿನ ವರದಿ ಸಲ್ಲಿಸಿದ್ದು, ಆ ಪೈಕಿ 39 ನಿವೇಶನಗಳ ಹಂಚಿಕೆ ಮಾತ್ರ ಸಕ್ರಮವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ಒಟ್ಟು 313 ಜಿ-ಕೆಟಗರಿ ನಿವೇಶನದ ಅಕ್ರಮ ಹಂಚಿಕೆ ಪೈಕಿ 60 ನಿವೇಶನಗಳ ಹಂಚಿಕೆ ಕುರಿತು ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಮತ್ತು ನ್ಯಾ ಆರ್.ಬಿ. ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠಕ್ಕೆ ಸರ್ಕಾರಿ ವಕೀಲ ಶ್ರೀನಿಧಿ ವಿಚಾರಣಾ ಸಮಿತಿಯ ಎರಡನೇ ಕಂತಿನ ವರದಿ ಸಲ್ಲಿಸಿದರು. ಈ 60ರ ಪೈಕಿ 39 ನಿವೇಶನದಾರರು ತಮಗೆ ಹಂಚಿಯಾದ ನಿವೇಶನಗಳನ್ನು ಉಳಿಸಿಕೊಳ್ಳಲು ಅರ್ಹರಾಗಿದ್ದಾರೆ. ಉಳಿದ 21 ನಿವೇಶನಗಳ ಹಂಚಿಕೆ ಕಾನೂನುಬದ್ಧವಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಿಚಾರಣಾ ಸಮಿತಿ 2016ರ ಡಿ. 8ರಂದು 56 ಜಿ ಕೆಟಗರಿ ನಿವೇಶನಗಳ ಹಂಚಿಕೆ ಕುರಿತು ಮೊದಲ ಕಂತಿನ ವರದಿ ಸಲ್ಲಿಸಿತ್ತು. ಅದರಲ್ಲಿ 53 ನಿವೇಶನಗಳ ಹಂಚಿಕೆ ಸಕ್ರಮವಾಗಿದ್ದು, ಉಳಿದ ಮೂರು ನಿವೇಶನಗಳ ಹಂಚಿಕೆ ಮಾತ್ರ ಕಾನೂನುಬದ್ಧವಾಗಿಲ್ಲ ಎಂದು ತಿಳಿಸಿತ್ತು. ಇದರೊಂದಿಗೆ ಸಮಿತಿಯು ಒಟ್ಟು 313ರ ಪೈಕಿ 116 ನಿವೇಶನಗಳ ಹಂಚಿಕೆ ಕುರಿತ ವಿಚಾರಣೆ ಪೂರ್ಣಗೊಳಿಸಿ ಹೈಕೋರ್ಟ್‌ಗೆ ವರದಿ ಸಲ್ಲಿಸಿದಂತಾಗಿದೆ.
ಗುರುವಾರ ಸಲ್ಲಿಸಿದ ವರದಿಯನ್ನು ದಾಖಲಿಸಿಕೊಂಡ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ನೇತೃತ್ವದ ವಿಭಾಗೀಯ ಪೀಠ, 39 ನಿವೇಶನಗಳಲ್ಲಿ ನಿವೇಶನದಾರರು ನಿರ್ಮಾಣ ಕಾಮಗಾರಿ ಮುಂದುವರಿಸಬಹುದು. ಈ 39ರಲ್ಲಿ ಹಂಚಿಕೆಯಾಗಿ 10 ವರ್ಷ ಪೂರ್ಣಗೊಂಡಿರುವ ನಿವೇಶನಗಳಿಗೆ ಬಿಡಿಎ ಒಂದು ತಿಂಗಳಲ್ಲಿ ಮಾರಾಟ/ಭೋಗ್ಯದ ಕ್ರಯ ಪತ್ರ ವಿತರಿಸಬೇಕು.
10 ವರ್ಷ ಪೂರ್ಣಗೊಳ್ಳದ ನಿವೇಶನದಾರರಿಗೆ 10 ವರ್ಷ ಪೂರ್ಣಗೊಂಡ ದಿನದಿಂದ ಒಂದು ತಿಂಗಳಲ್ಲಿ ಮಾರಾಟ/ಭೋಗ್ಯದ ಕ್ರಯ ಪತ್ರ ವಿತರಿಸಬೇಕು ಎಂದು ನಿರ್ದೇಶಿಸಿದೆ. ಅಲ್ಲದೆ, ಉಳಿದ 21 ನಿವೇಶನದಾರರು ತಮಗೆ ಹಂಚಿಕೆಯಾದ ನಿವೇಶನಗಳನ್ನು ಉಳಿಸಿಕೊಳ್ಳಲು ಸಮಿತಿಯು ಯಾವುದೇ ಶಿಫಾರಸು ಮಾಡಿಲ್ಲ. ಅದಕ್ಕೆ ವರದಿಯಲ್ಲಿ ಸಕಾರಣ ನೀಡಲಾಗಿದೆ.
ಇದರಿಂದ ಈ 21 ನಿವೇಶನಗಳ ಹಂಚಿಕೆಗಳ ಬಗ್ಗೆ ಮುಂದೆ ಪರಿಗಣಿಸಲಾಗುವುದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ಜತೆಗೆ, ಹೈಕೋರ್ಟ್ ರಿಜಿಸ್ಟ್ರಾರ್(ನ್ಯಾಯಾಂಗ) ಅವರು ಸಮಿತಿ ಸಲ್ಲಿಸಿದ ವರದಿಯನ್ನು ಸುರಕ್ಷಿತವಾಗಿ ತಮ್ಮ ವಶದಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಫೆ.13ಕ್ಕೆ ಮುಂದೂಡಿದೆ. ಅಂದು ಸಮಿತಿ ತನ್ನ ಮುಂದಿನ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.