Advertisement

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ

12:28 AM Jun 02, 2023 | Team Udayavani |

ಮಂಗಳೂರು: ದೇಶದಲ್ಲಿ 2014ರ ಬಳಿಕ ಪರಿವರ್ತನೆಯ ಯುಗ ಆರಂಭವಾಗಿದೆ. ಕಳೆದ 9 ವರ್ಷಗಳಲ್ಲಿ ಜಿಲ್ಲೆಗೆ ಕೇಂದ್ರ ಸರಕಾರದಿಂದ 38,661.96 ಕೋಟಿ ರೂ. ಅನುದಾನ ವಿವಿಧ ಕ್ಷೇತ್ರಗಳಿಗೆ ಹರಿದುಬಂದಿದೆ, 16 ಸಾವಿರ ಕೋಟಿ ರೂ.ನಷ್ಟು ಮೊತ್ತದ ಅನುದಾನಕ್ಕೆ ಪ್ರಸ್ತಾವನೆ ಹೋಗಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ರಾ.ಹೆ. ಕಾಮಗಾರಿಗಳಿಗೆ 3,289 ಕೋಟಿ ರೂ., ನವಮಂಗಳೂರು ಬಂದರು ಅಭಿವೃದ್ಧಿಗೆ 1,081 ಕೋಟಿ ರೂ. ಸಾಗರಮಾಲಾ ಯೋಜನೆಯಡಿ 465 ಕೋಟಿ ರೂ. ಕೆಐಒಸಿಎಲ್‌ಗೆ 1,081 ಕೋಟಿ ರೂ., ಎಂಆರ್‌ಪಿಎಲ್‌ ಅಭಿವೃದ್ಧಿಗೆ 2,506 ಕೋಟಿ, ಎಂಆರ್‌ಪಿಎಲ್‌ 4ನೇ ಹಂತ ಅಭಿವೃದ್ಧಿಗೆ 15 ಸಾವಿರ ಕೋಟಿ ರೂ., ರಾ.ಹೆ. ಮಂಗಳೂರು ವಿಭಾಗಕ್ಕೆ 1,036 ಕೋಟಿ ನೀಡಲಾಗಿದೆ ಎಂದರು.

2023-24ನೇ ಸಾಲಿನಲ್ಲಿ ಮಂಗಳೂರು ಸೆಂಟ್ರಲ್‌, ಜಂಕ್ಷನ್‌, ಬಂಟ್ವಾಳ, ಸುಬ್ರಹ್ಮಣ್ಯ ರೈಲು ನಿಲ್ದಾಣಗಳನ್ನು ಅಮೃತ್‌ ಭಾರತ್‌ ಯೋಜನೆಯಡಿ ಅಭಿವೃದ್ಧಿಪಡಿಸ ಲಾಗುವುದು ಎಂದರು.

60 ಕಡೆ ಬಿಎಸ್ಸೆನ್ನೆಲ್‌ ಟವರ್‌
ಮೊಬೈಲ್‌ ಸಿಗ್ನಲ್‌ ದೊರೆಯದ ಹಳ್ಳಿಗಳಿಗೆ 4ಜಿ ಸಂಪರ್ಕ ಕಲ್ಪಿಸುವ ಯೋಜನೆಯಡಿ ಜಿಲ್ಲೆಯ 90 ಹಳ್ಳಿಗಳಿಗೆ ತಲಾ 1.5 ಕೋಟಿ ರೂ. ವೆಚ್ಚದಲ್ಲಿ 4ಜಿ ಟವರ್‌ ಸಲ್ಲಿಸಲು ಕೇಂದ್ರದ ದೂರಸಂಪರ್ಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ 60 ಕಡೆ ಮೊಬೈಲ್‌ ಟವರ್‌ ಸ್ಥಾಪನೆಗೆ ಆದೇಶವಾಗಿದ್ದು ಸ್ಥಳ ಗುರುತಿಸುವ ಕಾರ್ಯ ನಡೆದಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌, ಶಾಸಕ ವೇದವ್ಯಾಸ ಕಾಮತ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಮೋನಪ್ಪ ಭಂಡಾರಿ, ಮುಖಂಡರಾದ ರವಿಶಂಕರ್‌ ಮಿಜಾರ್‌, ರಾಧಾಕೃಷ್ಣ, ರಾಮದಾಸ್‌ ಬಂಟ್ವಾಳ, ಸುಧೀರ್‌ ಶೆಟ್ಟಿ ಕಣ್ಣೂರು, ಸಂದೇಶ್‌ ಶೆಟ್ಟಿ ಇದ್ದರು.

ಸುರಂಗ ಮಾರ್ಗ ಖಚಿತ
ಶಿರಾಡಿ ಘಾಟಿಯಲ್ಲಿ ದೀರ್ಘ‌ ಸುರಂಗ ಮಾರ್ಗ ನಿರ್ಮಾಣದ ಪ್ರಸ್ತಾವ ಕೈಬಿಟ್ಟು ಫ್ಲೆಓವರ್‌ ಸಹಿತವಾದ ಸುರಂಗ ಮಾರ್ಗಕ್ಕೆ ಕೇಂದ್ರ ಭೂಸಾರಿಗೆ, ಹೆದ್ದಾರಿ ಸಚಿವಾಲಯದಿಂದ ಅನುಮೋದನೆ ಸಿಗುವುದು ಖಚಿತಗೊಂಡಿದೆ ಎಂದು ನಳಿನ್‌ ತಿಳಿಸಿದರು.

Advertisement

ನೇರ ಸುರಂಗ ಮಾರ್ಗ ರಚಿಸಲು 12 ಸಾವಿರ ಕೋಟಿ ರೂ. ಬೇಕು. ಬದಲು ಹಾಲಿ ಹೆದ್ದಾರಿಯನ್ನು ಚತುಷ್ಪಥಕ್ಕೆ ಪರಿವರ್ತಿಸುವಾಗ 3 ಸುರಂಗವನ್ನು ಹಾದುಹೋಗಲಿದೆ. ಉಳಿದ ಕಡೆಗಳಲ್ಲಿ ಮೇಲ್ಸೇತುವೆ ಬರಲಿದೆ. ಈ ಯೋಜನೆಯನ್ನು 2,500 ಕೋಟಿ. ರೂ.ಗಳಲ್ಲಿ ಪೂರ್ಣ ಗೊಳಿಸಲಾಗುವುದು ಎಂದು ನಳಿನ್‌ ಕುಮಾರ್‌ ಹೇಳಿದರು.

ಗ್ಯಾರಂಟಿಗಾಗಿ ಹೋರಾಟ
ಕಾಂಗ್ರೆಸ್‌ ಪಕ್ಷ ಘೋಷಿಸಿರುವ ಗ್ಯಾರಂಟಿಗಳನ್ನು ಷರತ್ತು ರಹಿತವಾಗಿ ಜಾರಿಗೊಳಿಸದೇ ಹೋದರೆ ಬಿಜೆಪಿ ಬೀದಿಗಳಿದು ಜನರ ಪರವಾಗಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ನಳಿನ್‌ ತಿಳಿಸಿದರು.

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಇವರೆಲ್ಲರೂ ಚುನಾವಣೆಗೆ ಮುನ್ನವೇ ಗ್ಯಾರಂಟಿಗಳನ್ನು ಪ್ರಕಟಿಸಿದ್ದಲ್ಲದೆ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಅವುಗಳೆಲ್ಲವೂ ಜಾರಿಯಾಗಲಿವೆ ಎಂದು ಬಹಿರಂಗವಾಗಿ ಘೋಷಿಸಿದ್ದರು. ಆದರೆ ಈಗ ಅಧಿಕಾರಕ್ಕೆ ಬಂದು 20 ದಿನಗಳಾದರೂ ಯಾವುದೂ ಜಾರಿಗೊಂಡಿಲ್ಲ, ಕಾಂಗ್ರೆಸ್‌ ಜನರನ್ನು ವಂಚಿಸಿದ್ದು, ಅದು ಸುಳ್ಳುಗಾರ ಪಕ್ಷ ಎನ್ನುವುದು ಜನರಿಗೆ ಸ್ಪಷ್ಟವಾಗಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next