ಪಣಜಿ: ಈ ವರ್ಷದ 37ನೇ ರಾಷ್ಟ್ರೀಯ ಕ್ರೀಡಾ ಸ್ಪರ್ಧೆ ಗೋವಾದಲ್ಲಿ ನಡೆಯುತ್ತಿದೆ. ಆ ಹಿನ್ನೆಲೆ ಕಳೆದ ಕೆಲ ದಿನಗಳಿಂದ ಗೋವಾ ಟೂರ್ನಿಗೆ ಸಿದ್ಧತೆ ನಡೆಸಿದೆ. ಆ.12ರ ಗುರುವಾರ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಕಾಂಪಾಲ್‍ನ ಮನೋಹರ್ ಪರಿಕ್ಕರ್ ಸಂಕೀರ್ಣದಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಈ ಸಂಕೀರ್ಣದಲ್ಲಿನ ಸ್ಪರ್ಧೆಯ ದೃಷ್ಟಿಯಿಂದ ಅವರು ವಿವಿಧ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿದರು. ಈ ವೇಳೆ ವಿವಿಧ ಇಲಾಖೆ ಅಧಿಕಾರಿಗಳು ಜೊತೆಗಿದ್ದರು. ಪಂದ್ಯಾವಳಿಯ ತಯಾರಿಯಲ್ಲಿ ಅನೇಕ ಕೆಲಸಗಳು ಪೂರ್ಣಗೊಂಡಿವೆ. ಅನೇಕ ಕೆಲಸಗಳು ಅಂತಿಮಗೊಳ್ಳುತ್ತಿವೆ.
ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್, ಕ್ರೀಡಾ ಸಚಿವ ಗೋವಿಂದ್ ಗಾವಡೆ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿಗಳು ರಾಷ್ಟ್ರೀಯ ಪಂದ್ಯಾವಳಿಯ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ.
ಬುಧವಾರ ಮುಖ್ಯಮಂತ್ರಿ ಕ್ರೀಡಾ ಸಚಿವ ಗೋವಿಂದ್ ಗಾವ್ಡೆ ಅವರೊಂದಿಗೆ ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣವನ್ನು ಪರಿಶೀಲಿಸಿದ್ದರು. ಅಲ್ಲಿನ ಸೌಲಭ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದರು.
ರಾಷ್ಟ್ರೀಯ ಪಂದ್ಯಾವಳಿಯು ಅಕ್ಟೋಬರ್ 19 ರಂದು ಪ್ರಾರಂಭವಾಗುತ್ತದೆ. ಅಕ್ಟೋಬರ್ 26 ರಂದು ಪ್ರಧಾನಿ ನರೇಂದ್ರ ಮೋದಿ ಪಂದ್ಯಾವಳಿ ಉದ್ಘಾಟಿಸಲಿದ್ದು, ಉದ್ಘಾಟನಾ ಸಮಾರಂಭ ಮಡಗಾಂವ ಫಟೋರ್ಡಾದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ.
ಪ್ರಧಾನಮಂತ್ರಿಯವರ ಹೆಲಿಕಾಪ್ಟರ್ ಗಾಗಿ ಹೆಲಿಪ್ಯಾಡ್ ನಿರ್ಮಾಣಕ್ಕಾಗಿ ಕ್ರೀಡಾಂಗಣದ ಒಳಗಿನ ಸಿದ್ಧತೆ ಹಾಗೂ ಕ್ರೀಡಾಂಗಣದ ಸಮೀಪ ಎರಡು ಸ್ಥಳಗಳನ್ನು ಕ್ರೀಡಾ ಸಚಿವ ಗೋವಿಂದ ಗಾವಡೆ ಇತ್ತೀಚೆಗೆ ಪರಿಶೀಲಿಸಿದ್ದರು.