Advertisement

ದೆಹಲಿ ಮಸೀದಿಗೆ ಹೋದವ್ರು 37 ಜನ?

02:58 PM Apr 06, 2020 | Suhan S |

ಕಲಬುರಗಿ: ದೇಶದಲ್ಲಿ ಮಹಾಮಾರಿ ಕೋವಿಡ್‌ -19 ಸೋಂಕಿನ ಆತಂಕ ಹೆಚ್ಚಿಸುವಲ್ಲಿ ಕಾರಣವಾಗಿರುವ ದೆಹಲಿಯ ನಿಜಾಮುದ್ದೀನ್‌ ಮಸೀದಿಯಲ್ಲಿ ನಡೆದ ತಬ್ಲಿಫ್‌-ಎ-ಜಮಾತ್‌ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯಿಂದ 37 ಜನ ಭಾಗವಹಿಸಿದ್ದಾರೆ ಎನ್ನುವ ಮಾತು ಅಧಿಕಾರಿಗಳ ವಲಯದಲ್ಲಿ ಕೇಳಿ ಬರುತ್ತಿದೆ.

Advertisement

ದೆಹಲಿಯಿಂದ ಜಿಲ್ಲೆಗೆ ಈಗಾಗಲೇ ಮರಳಿ ಬಂದಿರುವ 26 ಜನರಿಗೆ ಕೋವಿಡ್‌ -19  ಸೋಂಕಿಲ್ಲ ಎಂದು ಖಚಿತ ಪಟ್ಟಿದ್ದರೂ, ಶಹಾಬಾದ ಪಟ್ಟಣದ ವ್ಯಕ್ತಿಯ ಪತ್ನಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಆತಂಕದ ಕರಿಛಾಯೆ ಮನೆ ಮಾಡಿದೆ. ಆದರೆ, ಇದೀಗ ಜಿಲ್ಲೆಯಿಂದ ದೆಹಲಿಗೆ ಹೋದವರು 26 ಜನರಲ್ಲ, 37 ಮಂದಿ ಎನ್ನಲಾಗುತ್ತಿದೆ. ಇದು ಜಿಲ್ಲಾಡಳಿತಕ್ಕೆ ಹೊಸ ಸವಾಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆತಂಕ ಏಕೆ?: ದೇಶದಲ್ಲೇ ಮೊದಲು ನಗರದ 76 ವರ್ಷದ ವೃದ್ಧನನ್ನು ಬಲಿ ಪಡೆದ ಕೊರೊನಾ ಸೋಂಕು ಎಲ್ಲೆಡೆ ಸಂಚಲನ ಸೃಷ್ಟಿಸಿತ್ತು. ವೃದ್ಧನ ಮೂಲಕ ಆತನ ಮಗಳು ಮತ್ತು ಚಿಕಿತ್ಸೆ ನೀಡಿದ್ದ ವೈದ್ಯನಿಗೆ ಸೋಂಕು ಹರಡಿ ತಲ್ಲಣ ಉಂಟು ಮಾಡಿತ್ತು. ಮಹಿಳೆ ಮತ್ತು ವೈದ್ಯ ಇಬ್ಬರೂ ಗುಣಮುಖವಾಗಿ ಮನೆ ಸೇರುವ ಹೊತ್ತಿನಲ್ಲೇ ವೈದ್ಯನ ಪತ್ನಿಗೆ ಸೋಂಕು ಕಾಣಿಸಿಕೊಂಡಿತ್ತು. ಇದರ ನಡುವೆಯೂ ವೃದ್ಧನೊಂದಿಗೆ 99 ಜನರು ನೇರ ಸಂಪರ್ಕ ಮತ್ತು 390 ಜನರು ದ್ವಿತೀಯ ಸಂಪರ್ಕ ಹೊಂದಿದವರನ್ನು ಜಿಲ್ಲಾಡಳಿತ ಪತ್ತೆ ಹಚ್ಚಿ, ಸೋಂಕು ಹರಡುವಿಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ವಿವಿಧ ದೇಶಗಳಿಂದ ಜಿಲ್ಲೆಯಲ್ಲಿ 487 ಜನ ಮರಳಿ ಬಂದಿದ್ದಾರೆ. ಇವರಲ್ಲಿ ಯಾರಿಗೂ ಸೋಂಕು ಕಾಣಿಸಿಕೊಂಡಿರಲಿಲ್ಲ. ಮೂರನೇ ಪ್ರಕರಣ ಕಾಣಿಸಿಕೊಂಡ ಎರಡು ವಾರಗಳ ಕಾಲ ಯಾವುದೇ ಹೊಸ ಪ್ರಕರಣ ಪತ್ತೆಯಾಗಿರಲಿಲ್ಲ. ಆದರೆ, ವೈದ್ಯನ ಪತ್ನಿಗೆ ಕೊರೊನಾ ಪಾಸಿಟಿವ್‌ ಎಂದು ದೃಢಪಟ್ಟ ಬೆನ್ನಲ್ಲೇ ದೆಹಲಿ ಮಸೀದಿಯ ಸಭೆಯಲ್ಲಿ ಜಿಲ್ಲೆಯ ಜನರೂ ಪಾಲ್ಗೊಂಡಿರುವ ಬಗ್ಗೆ ಮಾ.31ರಂದು ಹೊರಬಿದ್ದ ಮಾಹಿತಿ ಜನರಲ್ಲಿ ಮತ್ತೆ ಆತಂಕ ಸೃಷ್ಟಿಸಲು ಕಾರಣವಾಗಿತ್ತು.

ಮಾಹಿತಿ ಕೊರತೆ?: ಆರಂಭದಲ್ಲಿ ದೆಹಲಿ ಮಸೀದಿಯಲ್ಲಿ 19 ಜನರು ಮಾತ್ರವೇ ಪಾಲ್ಗೊಂಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿತ್ತು. ಮರುದಿನ 26 ಜನರು ಭಾಗವಹಿಸಿರುವುದಾಗಿ ಜಿಲ್ಲಾಡಳಿತ ಖಚಿತ ಪಡಿಸಿತ್ತು. 26 ಜನರಲ್ಲಿ ಜಿಲ್ಲೆಗೆ 14 ಜನ ಮರಳಿ ಬಂದಿದ್ದು, ಅವರನ್ನು ಪತ್ತೆ ಹೆಚ್ಚಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಆರು ಜನ ಕರ್ನಾಟಕಕ್ಕೆ ಇನ್ನೂ ಹಿಂದಿರುಗಿಲ್ಲ. ಮೂವರು ರಾಜ್ಯದ ಇತರಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಉಳಿದವರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ತಿಳಿಸಿದ್ದರು.

ಎರಡು ದಿನಗಳ ನಂತರ ದೆಹಲಿ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಜಿಲ್ಲೆಗೆ ಮರಳಿದ ವ್ಯಕ್ತಿಯ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಗ್ರಾಮೀಣದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿತು. ಏ.3ರಂದು ದಿಢೀರ್‌ ಆಗಿ ಎಲ್ಲ 26 ಜನರು ಪತ್ತೆಯಾಗಿದ್ದಾರೆ. ಎಲ್ಲರ ಗಂಟಲು ದ್ರಾವಣ ಮಾದರಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, 26 ಜನರಿಗೂ ಕೋವಿಡ್‌-19 ನೆಗೆಟಿವ್‌ ಎಂದು ವರದಿ ಬಂದಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿತ್ತು. 26 ಜನರ ಪೈಕಿ 14 ಮಂದಿ ಕಲಬುರಗಿ ನಗರ ಪ್ರದೇಶಕ್ಕೆ ಸೇರಿದ್ದು, 12 ಜನ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮೀಣ ಪ್ರದೇಶದವರಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ಹೇಳುತ್ತಿವೆ.

Advertisement

ಆದರೆ, ಇದೀಗ 37 ಜನರು ಜಿಲ್ಲೆಯಿಂದ ದೆಹಲಿಗೆ ಹೋಗಿರುವುದಾಗಿ ಅಧಿಕಾರಿಗಳ ವಲಯದಲ್ಲಿ ಚರ್ಚೆಯಾಗುತ್ತಿದ್ದು, ರಾಜ್ಯಕ್ಕೆ ಬಾರದಿರುವ ಆರು ಜನರು, ಇತರ ಜಿಲ್ಲೆಗಳಲ್ಲಿ ಉಳಿದಿರುವ ಮೂವರು ಇನ್ನೂ ಜಿಲ್ಲೆಗೆ ಮರಳಿ ಬಂದಿಲ್ಲ. ಉಳಿದವರು ಜಾಡು ಪತ್ತೆಯಾಗಿಲ್ಲ ಎಂದು ವಿಶ್ವಾಸರ್ಹ ಮೂಲಗಳು ತಿಳಿಸಿವೆ

ನಾಲ್ವರ ವರದಿ ಬಾಕಿ? :  ಕಲಬುರಗಿ ಜಿಲ್ಲೆಯಲ್ಲಿ ಒಟ್ಟಾರೆ ಕೋವಿಡ್‌ -19 ಪೀಡಿತರ ಸಂಖ್ಯೆ ಐದು. ಸೌದಿ ಅರೇಬಿಯಾದಿಂದ ಮರಳಿದ್ದ 76 ವರ್ಷದ ಮೃತ ವೃದ್ಧ ಪ್ರಥಮ ಕೊರೊನಾ ಸೋಂಕಿತ ಆಗಿದ್ದಾರೆ. ಶಹಾಬಾದ ಪಟ್ಟಣದ ಮಹಿಳೆ ಎರಡನೇ ಮೂಲದ ಸೋಂಕಿತೆ. ಉಳಿದಂತೆ ವೃದ್ಧನೊಂದಿಗೆ ನೇರ ಸಂಪರ್ಕದಲ್ಲಿ ಆತನ ಪುತ್ರಿ ಹಾಗೂ ವೈದ್ಯ ಸೋಂಕಿತರಾಗಿದ್ದರೂ ಈಗ ಗುಣಮುಖರಾಗಿದ್ದಾರೆ. ವೈದ್ಯನ ಪತ್ನಿ ಸೋಂಕಿತಳಾಗಿದ್ದು, ಈಕೆ ಮತ್ತು ಶಹಾಬಾದ ಪಟ್ಟಣದ ಮಹಿಳೆ ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಹಾಬಾದ ಪಟ್ಟಣದ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ ಒಟ್ಟು ಎಂಟು ಜನರ ಗಂಟಲು ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ನಾಲ್ವರ ವರದಿ ನೆಗೆಟಿವ್‌ ಬಂದಿದೆ. ಇದರಲ್ಲಿ ಮಹಿಳೆಗೆ ಕೋವಿಡ್‌-19  ಸೋಂಕು ಕಾಣಿಸಿಕೊಳ್ಳುವ ಮುನ್ನ ಚಿಕಿತ್ಸೆ ನೀಡಿದ್ದ ವೈದ್ಯನೂ ಸೇರಿದ್ದಾನೆ. ಉಳಿದ ನಾಲ್ವರ ಪ್ರಯೋಗಾಲಯದ ವರದಿ ಬಾಕಿ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

 

-ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next