Advertisement

ಜಿಪಂ ಕಾರ್ಯಕ್ರಮಗಳಿಗೆ 368 ಕೋಟಿ ಅನುದಾನ

12:20 PM Apr 26, 2017 | Team Udayavani |

ಮೈಸೂರು: ಜಿಪಂನ ವಿವಿಧ ಕಾರ್ಯಕ್ರಮಗಳಿಗೆ ಸರ್ಕಾರವೇ ಲಿಂಕ್‌ ಡಾಕ್ಯುಮೆಂಟ್‌ನಲ್ಲಿ ನಿಗದಿಪಡಿಸಿದ 368 ಕೋಟಿ ಅನುದಾನಕ್ಕೆ ಸಂಬಂಧಿಸಿದ 2017-18ನೇ ಸಾಲಿನ ಆಯವ್ಯಯವನ್ನು ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ ಮಂಡಿಸಿದರು. ಜಿಪಂನ ಅಬ್ದುಲ್‌ ನಜೀರ್‌ ಸಾಬ್‌ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ 2017-18ನೇ ಸಾಲಿನ ಮೈಸೂರು ಜಿಪಂನ ವೇತನ ಮತ್ತು ವೇತನೇತರ ಬಾಬ್ತುಗಳ ಆಯವ್ಯಯ ಸಭೆಯ ಮುಂದಿಟ್ಟರು.

Advertisement

55 ಪುಟಗಳ ಆಯವ್ಯಯ ಪುಸ್ತಕವನ್ನು ಅಧ್ಯಕ್ಷೆ ನಯೀಮಾ ಸುಲ್ತಾನ, ಒಂದು ಗಂಟೆ ನಲವತ್ತು ನಿಮಿಷಗಳಲ್ಲಿ ಓದಿ ಮುಗಿಸಿದರು. ಜಿಪಂ ನಿಂದ ಪ್ರಸಕ್ತ ಸಾಲಿಗೆ 450.59 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಸರ್ಕಾರ ಅನುಮೋದನೆ ನೀಡಿರುವುದು 368 ಕೋಟಿ ರೂ.ಗಳಿಗೆ, ಹೀಗಾಗಿ ಜಿಪಂ ನಿರೀಕ್ಷೆಯಲ್ಲಿ 82 ಕೋಟಿ ರೂ. ಖೋತಾ ಆಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಏಳು ವರ್ಷಗಳಿಂದ ಅಸ್ತಿತ್ವದಲ್ಲಿರುವ ಖಾಸಗಿ ಪ್ರೌಢಶಾಲೆಗಳಿಗೆ ಸಹಾಯ ಅನುದಾನ, ಆಂಗ್ಲೋ ಇಂಡಿಯನ್‌ ವಿದ್ಯಾರ್ಥಿ ಗಳನ್ನೊಳಗೊಂಡಂತೆ ಧನ ಸಹಾಯ ಮತ್ತು ಶುಲ್ಕದ ಮರು ಪಾವತಿ ಮತ್ತು ವಿದ್ಯಾವಿಕಾಸ, ಸೇರ್ಪಡೆ ಮತ್ತು ಮಾರ್ಪಾಡು, ಸಾಮಗ್ರಿಗಳ ಸರಬರಾಜು, ಶಾಲಾ ಮಾತೆಯರ ನೇಮಕಾತಿ, ನಿರ್ವಹಣೆ ಮತ್ತು ಸಹಾಯಾನುದಾನ, ವಯಸ್ಕರ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ, ಕನ್ನಡ ಮತ್ತು ಸಂಸ್ಕೃತಿ, ಜಿಲ್ಲಾ ಆರೋಗ್ಯ, ಆಯುಷ್‌ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ.

ಶಿಕ್ಷಣ ಅಭಿವೃದ್ಧಿ ಕಾರ್ಯಕ್ರಮಗಳು, ಅಂತರ್‌ಜಾತಿ ವಿವಾಹ ಪೋತ್ಸಾಹ ಮಂಜೂರಾತಿ, ಶ್ರೇಷ್ಠತೆ ಪಡೆದ ಮೆಟ್ರಿಕ್‌ ನಂತರದ ಪ.ಜಾತಿ ವಿದ್ಯಾರ್ಥಿಗಳಿಗೆ ಪೋತ್ಸಾಹ, ಪ.ಜಾತಿ ಮೆಟ್ರಿಕ್‌ ಪೂರ್ವ, ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯಕ್ರಮಗಳು ಸೇರಿದಂತೆ ಜಿಪಂ ವ್ಯಾಪ್ತಿಗೆ ಬರುವ ಇಲಾಖೆಗಳ 33 ಯೋಜನೆಗಳಿಗೆ ಹಂಚಿಕೆ ಮಾಡಲಾಗಿರುವ ಅನುದಾನ ಹಾಗೂ ಕಾರ್ಯಕ್ರಮಗಳ ಮಾಹಿತಿ ನೀಡಿದರು.

2017-18ನೇ ಸಾಲಿನಲ್ಲಿ ಮೈಸೂರು ಜಿಲ್ಲೆಗೆ ವಿವಿಧ ಕಾರ್ಯಕ್ರಮಗಳಡಿ ಜಿಪಂ, ತಾಪಂ ಮತ್ತು ಗ್ರಾಪಂಗಳಿಗೆ ಒಟ್ಟಾರೆಯಾಗಿ 1095 ಕೋಟಿ ಅನುದಾನ ಒದಗಿಸಿದ್ದು, ಪ್ರಸಕ್ತ ಆರ್ಥಿಕ ವರ್ಷದಿಂದ ಯೋಜನೆ ಮತ್ತು ಯೋಜನೇತರ ವೆಚ್ಚಗಳ ನಡುವಿನ ಭಿನ್ನತೆ ಸರ್ಕಾರ ತೆಗೆದು ಹಾಕಿದ್ದು, 368.19 ಕೋಟಿ ಜಿಪಂ ಕಾರ್ಯಕ್ರಮಗಳಿಗೆ, 697.54 ಕೋಟಿ ತಾಪಂ ಕಾರ್ಯಕ್ರಮಗಳಿಗೆ ಹಾಗೂ ಗ್ರಾಪಂ ಕಾರ್ಯಕ್ರಮಗಳಿಗೆ 30 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ.

Advertisement

2016-17ನೇ ಸಾಲಿನಲ್ಲಿ ಜಿಪಂ ಕಾರ್ಯಕ್ರಮಗಳಿಗೆ 350 ಕೋಟಿ ಅನುದಾನ ಒದಗಿಸಿದ್ದ ಸರ್ಕಾರ, ಈ ಬಾರಿ ಶೇ.5.19ರಷ್ಟು ಅನುದಾನ ಹೆಚ್ಚಳ ಮಾಡಿ 368.19 ಕೋಟಿ ಅನುದಾನ ಒದಗಿಸಿದೆ. 2017-18ನೇ ಸಾಲಿನಲ್ಲಿ ಜಿಪಂಗೆ ಒದಗಿಸಿರುವ ವೇತನ ಹಾಗೂ ವೇತನೇತರ ಬಾಬ್ತು 368.19 ಕೋಟಿಗಳಲ್ಲಿ ವೇತನಕ್ಕೆ 114.32 ಕೋಟಿ ಹಾಗೂ ವೇತನೇತರಕ್ಕೆ 253.87 ಕೋಟಿ ವ್ಯಯವಾಗಲಿದೆ ಎಂದು ನಯೀಮಾ ಸುಲ್ತಾನ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next