ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಕಳಸದ ಹಿರೇಬೈಲ್‌ನ ಶ್ರೇಯಾಂಸ್ ಜೈನ್ ಅವರು ವಿಭಿನ್ನವಾಗಿ ತಮ್ಮ ಭಕ್ತಿ ಸ್ವರೂಪವನ್ನು ಅರ್ಪಿಸಿದ್ದಾರೆ.
ಜಾನುವಾರು ಪ್ರಿಯ ಶ್ರೇಯಾಂಸ್ ಜೈನ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ. ಕೋವಿಡ್ ಸಂದರ್ಭ
ಮನೆಯಲ್ಲಿ ಕರ್ತವ್ಯ ನಿರ್ವಹಿಸಿದ ವೇಳೆ ಹೈನುಗಾರಿಕೆಯತ್ತ ಆಸಕ್ತಿ ಬೆಳೆಸಿ ಕೊಂಡು ಗಿರ್ ತಳಿಯ ಹಸುವನ್ನು ಸಾಕಿದರು. ಇದರ ಮೊದಲ ಕರುವನ್ನು ಧರ್ಮಸ್ಥಳದ ಮಂಜುನಾಥ ಸನ್ನಿಧಿಗೆ ಅರ್ಪಿಸಲು ಅವರು ನಿಶ್ಚಯಿಸಿದ್ದರು. ಅದರಂತೆ ಕರು ಭೀಷ್ಮನೊಂದಿಗೆ ಜಿಗಣಿಯಿಂದ ಧರ್ಮಸ್ಥಳಕ್ಕೆ 36 ದಿನಗಳಲ್ಲಿ 360 ಕಿ.ಮೀ. ಕಾಲ್ನಡಿಗೆಯಲ್ಲೇ ಕ್ರಮಿಸಿ ಬಂದು ಅರ್ಪಿಸಿದ್ದಾರೆ.
ದಾರಿ ಮಧ್ಯೆ ತನ್ನ ಕಚೇರಿಗೆ ಶ್ರೇಯಾಂಸ್ ಒಂದು ದಿನವೂ ರಜೆ ಹಾಕಲಿಲ್ಲ. ಮುಂಜಾನೆ ನಡಿಗೆಯ ಅನಂತರ ವರ್ಕ್ ಫ್ರಂ ಹೋಮ್, ಮತ್ತೆ ನಡಿಗೆಯನ್ನು ಮುಂದುವರಿಸುತ್ತಿದ್ದರು. ಅವರ ಹಾಗೂ ಆಕಳಿಗೆ ದಾರಿ ಮಧ್ಯೆ ಸಿಕ್ಕ ಜನರ ಪ್ರೀತಿಯಿಂದಲೇ ಹೊಟ್ಟೆ ತುಂಬಿದೆ. ಹೀಗಾಗಿ ಅವರಿಗೆ ಕೇವಲ 1,000 ರೂ. ನಷ್ಟು ವೆಚ್ಚ ತಗಲಿದೆ. ಪ್ರತೀ ಊರಿನಲ್ಲೂ ಎತ್ತಿನ ಆರೋಗ್ಯ ತಪಾಸಣೆ ನಡೆಸುತ್ತ ಬಂದಿದ್ದೇನೆ ಎಂದು ಶ್ರೇಯಾಂಸ್ ಹೇಳಿದ್ದಾರೆ.
ಎಸ್‌ಡಿಎಂನ ಹಳೇ ವಿದ್ಯಾರ್ಥಿಯಾಗಿದ್ದು, ಸಿದ್ಧವನ ಗುರುಕುಲದಲ್ಲಿ ಶಿಕ್ಷಣ ಪಡೆದಿದ್ದರಿಂದ ಅವರ ಆಕಳು ಪ್ರೇಮ ಬಾಲ್ಯದಿಂದಲೇ ಚಿಗುರೊಡೆದಿತ್ತು.
Related Articles
ಡಾ| ಹೆಗ್ಗಡೆಯವರಿಂದ ಫಲ ಅರ್ಪಣೆ
ಗಿರ್ ಎತ್ತಿನೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ಶ್ರೇಯಾಂಸ್ ಅವರ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಆಶೀರ್ವದಿಸಿದರು. ಭೀಷ್ಮನೊಂದಿಗಿನ ಒಡನಾಟ ನೆನೆದು ಶ್ರೇಯಾಂಸ್ ಕಣ್ಣೀರಾದರು.