ಮಥುರಾ:1985ರಲ್ಲಿ ರಾಜಸ್ಥಾನದಲ್ಲಿ ನಡೆದಿದ್ದ ರಾಜಾ ಮನ್ ಸಿಂಗ್ ಹತ್ಯೆ ಪ್ರಕರಣದ ಕುರಿತು ಸುದೀರ್ಘ 35 ವರ್ಷಗಳ ಕಾಲ ವಿಚಾರಣೆ ನಡೆಸಿದ ಕೋರ್ಟ್ ಮಂಗಳವಾರ ಹನ್ನೊಂದು ಮಂದಿ ಪೊಲೀಸರು ದೋಷಿ ಎಂದು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ನಾಳೆ ಘೋಷಿಸುವುದಾಗಿ ತಿಳಿಸಿದೆ. ರಾಜಾ ಮನ್ ಸಿಂಗ್ ಕೊಲೆ ಪ್ರಕರಣದಲ್ಲಿ 11 ಮಂದಿ ಪೊಲೀಸರು ದೋಷಿ ಎಂದು ಉತ್ತರಪ್ರದೇಶದ ಮಥುರಾ ಕೋರ್ಟ್ ತೀರ್ಪು ನೀಡಿದೆ.
ಏನಿದು ಘಟನೆ; ರಾಜಕೀಯ ತಲ್ಲಣ, ಕೈ ಸಿಎಂ ರಾಜೀನಾಮೆ!
1985ರ ಫೆಬ್ರುವರಿ 21ರಂದು ರಾಜಸ್ಥಾನದ ನಾಮಕಾವಸ್ತೆ ನಾಯಕನಂತಿದ್ದ ರಾಜಾ ಮನ್ ಸಿಂಗ್ ಎಂಬಾತನ ಹತ್ಯೆ ನಡೆದಿತ್ತು. ಈ ಘಟನೆ ರಾಜಸ್ಥಾನದ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಅಷ್ಟೇ ಅಲ್ಲ ಘಟನೆ ನಡೆದ ಎರಡು ದಿನದ ಬಳಿಕ ಕಾಂಗ್ರೆಸ್ ಮುಖ್ಯಮಂತ್ರಿ ಶಿವ್ ಚರಣ್ ಮಥುರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು!
ರಾಜ್ ಮನ್ ಸಿಂಗ್ ಮೊಮ್ಮಗ ದುಶ್ಯಂತ್ ಸಿಂಗ್ ಅವರು, ಕೊಲೆ ಹೇಗೆ ನಡೆಯಿತು ಎಂಬ ಬಗ್ಗೆ ವಿವರಣೆ ನೀಡಿದ್ದಾರೆ. 1985ರಲ್ಲಿ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಯ ಅಬ್ಬರ. ಅಂದು ಕಾಂಗ್ರೆಸ್ ನಿವೃತ್ತ ಐಎಎಸ್ ಅಧಿಕಾಇ ಬ್ರಿಜೇಂದರ್ ಸಿಂಗ್ ಅವರನ್ನು ಡೀಗ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ರಾಜಾ ಮನ್ ಸಿಂಗ್ ಅವರ ಪ್ರತಿಸ್ಪರ್ಧಿಯನ್ನಾಗಿ ಅಖಾಡಕ್ಕೆ ಇಳಿಸಿತ್ತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾರತ್ ಪುರ್ ಬಾವುಟಕ್ಕೆ ಅವಮಾನ ಮಾಡಿದ್ದರು. ಇದರಿಂದ ರಾಜಾ ಮಾನ್ ಸಿಂಗ್ ಆಕ್ರೋಶಕ್ಕೆ ಒಳಗಾಗಿದ್ದರು. ಬಳಿಕ ರಾಜಾ ಸಿಂಗ್ ತನ್ನ ಜೀಪ್ ಅನ್ನು ಮುಖ್ಯಮಂತ್ರಿ ರಾಲಿ ನಡೆಸಲು ಉದ್ದೇಶಿಸಿದ್ದ ಸ್ಟೇಜ್ ಮೇಲೆ ನುಗ್ಗಿಸಿ ಹಾನಿಗೊಳಿಸಿದ್ದರು ಎಂದು ವರದಿ ತಿಳಿಸಿದೆ.
ಈ ಎಲ್ಲಾ ಘಟನೆ ನಡೆದದ್ದು ಫೆಬ್ರುವರಿ 20ರಂದು. ಮರುದಿನ ರಾಜಾ ಮನ್ ಸಿಂಗ್ ಮತ್ತು ಇಬ್ಬರು ಆತನ ಸಹಚರರಿ ಸ್ಥಳೀಯ ಪೊಲೀಸ್ ಠಾಣೆಗೆ ಶರಣಾಗಲು ತೆರಳಿದ್ದರು. ಈ ವೇಳೆ ಡೆಪ್ಯುಟಿ ಪೊಲೀಸ್ ಸೂಪರಿಟೆಂಡೆಂಟ್ ಕಾನ್ ಸಿಂಗ್ ಭಾಟಿ ನೇತೃತ್ವದ ಪೊಲೀಸ್ ಪಡೆ ಗುಂಡು ಹೊಡೆದು ಸಾಯಿಸಿಬಿಟ್ಟಿದ್ದರು. ರಾಜಾ ಮನ್ ಸಿಂಗ್ ಮತ್ತು ಸಹಚರರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.
ಈ ಪ್ರಕರಣದ ಬಗ್ಗೆ ಮದಲು ವಿಚಾರಣೆ ನಡೆಸಿದ್ದು ರಾಜಸ್ಥಾನ್ ಕೋರ್ಟ್, ಆದರೆ ಸುಪ್ರೀಂಕೋರ್ಟ್ ಸೂಚನೆ ಯಂತೆ ಪ್ರಕರಣ ಮಥುರಾಕ್ಕೆ ವರ್ಗಾವಣೆಯಾಗಿತ್ತು. ಇದು ಬರೋಬ್ಬರಿ 1,700 ಬಾರಿಗಿಂತಲೂ ಅಧಿಕ ವಿಚಾರಣೆ, 35ವರ್ಷದ ತೀರ್ಪು ಹೊರಬಿದ್ದಿತ್ತು ಎಂದು ವರದಿ ತಿಳಿಸಿದೆ.
ಇದೀಗ ಕಾಕತಾಳೀಯ ಎಂಬಂತೆ ರಾಜಸ್ಥಾನ ಕಾಂಗ್ರೆಸ್ ರಾಜಕೀಯದಲ್ಲಿ ಎದ್ದಿರುವ ಬಿಕ್ಕಟ್ಟಿನಲ್ಲಿಯೂ 18ಮಂದಿ ಬಂಡಾಯ ಶಾಸಕರಲ್ಲಿ ವಿಶ್ವೇಂದ್ರ ಸಿಂಗ್ ರಾಜಾ ಮನ್ ಸಿಂಗ್ ಅವರ ಸಂಬಂಧಿಯಾಗಿದ್ದಾರೆ. ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಬಂಡೆದ್ದಿರುವ ಸಚಿನ್ ಪೈಲಟ್ ಪಾಳಯದಲ್ಲಿ ಇರುವ ಭಾನ್ವರ್ ಲಾಲ್ ಶರ್ಮಾ ಕೂಡಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಿತೂರಿ ನಡೆಸಿದ ಆರೋಪದಲ್ಲಿ ಅಮಾನತುಗೊಂಡಿದ್ದಾರೆ.