Advertisement

ಕರಾವಳಿ ಅಭಿವೃದ್ಧಿಗಾಗಿ 35 ಕೋ.ರೂ. ಮೀಸಲು: ಮಟ್ಟಾರು ರತ್ನಾಕರ ಹೆಗ್ಡೆ

01:15 AM Jul 21, 2022 | Team Udayavani |

ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ತನ್ನ ಕಾರ್ಯವ್ಯಾಪ್ತಿಯ 3 ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಈ ಸಾಲಿನ ಆಯವ್ಯಯದಲ್ಲಿ ಪ್ರಾಧಿಕಾರದ ಇತಿಹಾಸದಲ್ಲೇ ಮೊದಲ ಬಾರಿಗೆ ಗರಿಷ್ಠ 35 ಕೋ.ರೂ.ಗಳನ್ನು ಕಾದಿರಿಸಿದೆ ಹಾಗೂ 10 ಕೋ.ರೂ. ಹೆಚ್ಚುವರಿಯಾಗಿ ಸರಕಾರದಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2021-22ರಲ್ಲಿ 229 ಕಾಮಗಾರಿ ಕೈಗೊಂಡಿದ್ದು, ಈ ಪೈಕಿ 151 ಪೂರ್ಣವಾಗಿವೆ, 78 ಪ್ರಗತಿಯಲ್ಲಿವೆ. 2022-23ರಲ್ಲಿ 104 ರಸ್ತೆ ನಿರ್ಮಾಣ/ಅಭಿವೃದ್ಧಿ, 12 ಕಾಲುಸಂಕ/ಕಿರು ಸೇತುವೆ, 12 ಸಮುದಾಯ ಭವನ, 25 ಕಟ್ಟಡ ನಿರ್ಮಾಣ/ಅಭಿವೃದ್ಧಿ, 11 ಶಾಲಾ ಕಟ್ಟಡ ಅಭಿವೃದ್ಧಿ ಸಹಿತ 207 ಕಾಮಗಾರಿಯನ್ನು ಒಟ್ಟು 2,433.50 ಲಕ್ಷ ರೂ.ಗಳಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.

1 ಕೋ.ರೂ. ವೆಚ್ಚದಲ್ಲಿ ಶಾಂಭವಿ ನದಿಗೆ ತೂಗುಸೇತುವೆ, ಭಟ್ಕಳದ ಆಳ್ವೆಕೋಡಿ ತೆಂಗಿನಗುಂಡಿ ತೂಗು ಸೇತುವೆ, ಪುತ್ತೂರಿನ ಬೆಟ್ಟಂಪಾಡಿಯಲ್ಲಿ ಹಾಗೂ ಸುಳ್ಯದ ಪಾಲ್ತಾಡಿ ಗ್ರಾಮದಲ್ಲಿ ಗೌರಿಹೊಳೆಗೆ ಪ್ರತ್ಯೇಕ ತೂಗು ಸೇತುವೆ ಕಾಮಗಾರಿ ಕೈಗೊಳ್ಳಲಾಗಿದೆ. ಕಾರ್ಕಳದ ಬೈಲೂರಿನಲ್ಲಿ ಪರಶುರಾಮ ಥೀಂ ಪಾರ್ಕ್‌ ಅಭಿವೃದ್ಧಿಗೆ 1 ಕೋ.ರೂ., ಬೆಳ್ತಂಗಡಿ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ 1 ಕೋ.ರೂ. ಸಹಿತ ಕಾಮ ಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

ಮಳೆಯಿಂದಾಗಿ ಮೂರು ಜಿಲ್ಲೆಗಳಲ್ಲಿ ವಿವಿಧ ರಸ್ತೆ, ಕಾಲುಸಂಕ ಸಹಿತ ವಿವಿಧ ಸಮಸ್ಯೆ ಎದುರಾಗಿದೆ. ಜತೆಗೆ ಕೆಲವು ಕಡೆ ಮೀನು ಮಾರುಕಟ್ಟೆ ನಾದುರಸ್ತಿಯಲ್ಲಿದೆ ಹಾಗೂ ಕೆಲವು ಕಡೆಯಲ್ಲಿ ಇನ್ನೂ ಆಗಿಲ್ಲ. ಇಂತಹ ಸ್ಥಳಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ತಂಡ ಭೇಟಿ ನೀಡಿ ಪರಿಶೀಲಿಸಲಿದೆ ಎಂದರು.

ಕರಾವಳಿ ಜಿಲ್ಲೆಯ 32 ಸಮುದ್ರ ಪ್ರದೇಶದಲ್ಲಿ ನೀರಿನ ಗುಣಮಟ್ಟ ಪರೀಕ್ಷಿಸಲು ನೀರಿನ ಮಾದರಿ ಸಂಗ್ರಹದ ಮೂಲಕ ಸಮೀಕ್ಷೆ ಕೈಗೊಳ್ಳಲು ನಿರ್ಧರಿಸಲಾಗಿದೆ. ಗೋವಾದ ಸಂಸ್ಥೆಯವರು 80 ಲಕ್ಷ ರೂ. ದರಪಟ್ಟಿ ಪಡೆದಿದ್ದಾರೆ. ಇದಕ್ಕೆ ಸರಕಾರದಿಂದ ಅನುಮತಿ ಕೋರಲಾಗಿದೆ ಎಂದರು.

Advertisement

ಪ್ರಾಧಿ ಕಾರದ ಕಾರ್ಯದರ್ಶಿ ಪ್ರದೀಪ್‌ ಡಿ’ಸೋಜಾ, ಸದಸ್ಯೆ ಕೇಸರಿ ಯುವರಾಜ್‌, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಂಜುನಾಥ್‌ ಶೆಟ್ಟಿ, ವಿಶೇಷ ಕರ್ತವ್ಯಾಧಿಕಾರಿ ಪವನ್‌ ಶೆಟ್ಟಿ, ವಲಯಾಧಿಕಾರಿ ಹರಿಕಾಂತ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಸಸಿಹಿತ್ಲು ಮೀನುಗಾರಿಕೆ ಗ್ರಾಮಕ್ಕೆ ಸ್ಥಳದ ಸಮಸ್ಯೆ
ಪ್ರಧಾನಮಂತ್ರಿಗಳ ಮತ್ಸ éಸಂಪದ ಯೋಜನೆಯಡಿ ಮಂಗಳೂರಿನ ಸಸಿಹಿತ್ಲು ಗ್ರಾಮದಲ್ಲಿ 7.50 ಕೋ.ರೂ ವೆಚ್ಚದಲ್ಲಿ ಮೀನುಗಾರಿಕೆ ಗ್ರಾಮವನ್ನು ನಿರ್ಮಿಸಲು ಅನುಮೋದನೆ ಪಡೆಯಲಾಗಿದೆ. ಇದರ ಡಿಪಿಆರ್‌ಗಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಅನುಷ್ಠಾನ ಸಂಸ್ಥೆಯಾಗಿ ನೇಮಿಸಲಾಗಿದೆ. ಆದರೆ ಅಲ್ಲಿ ಜಂಗಲ್‌ ಲಾಡ್ಜ್ನ ಸ್ಥಳದ ಸಮಸ್ಯೆ ಕಾರಣದಿಂದ ವರದಿ ತಯಾರಿಸಲು ವಿಳಂಬವಾಗಿದೆ. ಈ ವಿಚಾರ ಈಗಾಗಲೇ ಮಾತುಕತೆ ಹಂತದಲ್ಲಿದೆ. ಇದು ಇತ್ಯರ್ಥವಾದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಇತ್ಯರ್ಥವಾಗದಿದ್ದರೆ ಪ್ರತ್ಯೇಕ ಸ್ಥಳ ಪರಿಶೀಲಿಸಲು ಸರಕಾರವನ್ನು ಕೋರಲಾಗುವುದು ಎಂದು ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next