Advertisement

ತಿರುಪತಿಯಲ್ಲಿ ರಾಜ್ಯದ ಯಾತ್ರಾರ್ಥಿಗಳಿಗೆ 346 ಕೊಠಡಿ ಲಭ್ಯ: ಎಸ್.ಆರ್.ವಿಶ್ವನಾಥ್

09:48 AM Jul 12, 2022 | Team Udayavani |

ತಿರುಪತಿ: ತಿರುಪತಿ ತಿರುಮಲದಲ್ಲಿ ರಾಜ್ಯದ ಯಾತ್ರಾರ್ಥಿಗಳಿಗೆ ಶೀಘ್ರವೇ 346 ಸುಸಜ್ಜಿತ ವಸತಿ ಕೊಠಡಿಗಳು ಸಿದ್ಧವಾಗಲಿವೆ ಎಂದು ಬಿಡಿಎ ಅಧ್ಯಕ್ಷ, ತಿರುಪತಿ ತಿರುಮಲ ಮಂಡಳಿ ಸದಸ್ಯ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.

Advertisement

ತಿರುಪತಿ ತಿರುಮಲದಲ್ಲಿ ರಾಜ್ಯ ಸರ್ಕಾರದಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ತಿರುಮಲದಲ್ಲಿ ಕರ್ನಾಟಕದ ಯಾತ್ರಾರ್ಥಿಗಳು ಬಂದು ವಾಸ್ತವ್ಯ ಹೂಡಲು ಸೌಲಭ್ಯಗಳು ಅಷ್ಟಾಗಿ ಇರಲಿಲ್ಲ. ಜೊತೆಗೆ ರಾಜ್ಯಕ್ಕೆ ಸೇರಿದ ಸುಮಾರು ಏಳು ಎಕರೆ ಜಾಗ ಕೂಡ ನ್ಯಾಯಾಲಯದಲ್ಲಿತ್ತು. ಅದೆಲ್ಲವನ್ನೂ ಈಗ ಸರಿಪಡಿಸಿ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಸುಸಜ್ಜಿತ ಕೊಠಡಿಗಳು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಭವನ ನವೀಕರಣ ವಸತಿಗೃಹಗಳ ನಿರ್ಮಾಣ ಸೇರಿದಂತೆ ಒಟ್ಟಾರೆ ಸುಮಾರು 236 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಒಟ್ಟು 346 ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ವಿವಿಧ ಕಾರಣಗಳಿಂದ ಇಲ್ಲಿ ಅಭಿವೃದ್ಧಿ ಕೆಲಸಗಳನ್ನು ನಡೆಸಲು ಆಗುತ್ತಿರಲಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನೀಡಿದ್ದ ಅನುದಾನ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲೆ ನೀಡಿದ ಸಹಕಾರದಿಂದ ಈಗ ಶೀಘ್ರಗತಿಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಮುಖ್ಯಮಂತ್ರಿಯವರು ಇತ್ತೀಚೆಗೆ ತಿರುಮಲಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದ್ದರು. ಹೀಗಾಗಿ ಮುಂದಿನ ಫೆಬ್ರವರಿ ವೇಳೆಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ ಎಂದು ವಿಶ್ವನಾಥ್ ವಿವರಣೆ ನೀಡಿದರು.

ಇದನ್ನೂ ಓದಿ:ಮಳೆಯಿಂದ ಹಾನಿಯಾದವರಿಗೆ ಐದು ಲಕ್ಷ ರೂ. ಪರಿಹಾರ: ಆರ್.ಅಶೋಕ್

Advertisement

ತಿರುಪತಿಗೆ ನಿತ್ಯ ಲಕ್ಷಾಂತರ ಯಾತ್ರಾರ್ಥಿಗಳು ಬರುತ್ತಿದ್ದು ಇವರ ಪೈಕಿ ರಾಜ್ಯದಿಂದ ಬರುವ ಸುಮಾರು ಏಕಕಾಲಕ್ಕೆ ಒಂದೂವರೆ ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ವಸತಿ ಸೌಲಭ್ಯ ಕಲ್ಪಿಸಬಹುದು. ಹೀಗಾಗಿ ರಾಜ್ಯ ಸರ್ಕಾರ ಈಗ ತಕ್ಷಣಕ್ಕೆ 100 ಕೋಟಿ ರೂ ಬಿಡುಗಡೆ ಮಾಡುತ್ತಿದ್ದು ಉಳಿದ ಅನುದಾನವನ್ನು ಹಂತ ಹಂತವಾಗಿ ಕೊಡಲಿದೆ. ಹೀಗಾಗಿ ತಿರುಮಲದಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.

ತಿರುಪತಿ ಬೆಟ್ಟದ ಕೆಳಗೆ ರಾಜ್ಯ ಸರ್ಕಾರದ ಆಸ್ತಿ ಇದೆ. ಅದನ್ನು ಕೂಡ ಅಭಿವೃದ್ಧಿಪಡಿಸಿ ಅದರಿಂದ ಬರುವ ಆದಾಯವನ್ನು ತಿರುಮಲದಲ್ಲಿರುವ ಕರ್ನಾಟಕ ಭವನ ನಿರ್ವಹಣೆಗೆ ಬಳಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ವಿಶ್ವನಾಥ್ ತಿಳಿಸಿದರು.

ಈ ಎಲ್ಲಾ ಕಾಮಗಾರಿಗಳನ್ನು ಮುಜರಾಯಿ ಇಲಾಖೆ ವತಿಯಿಂದ ನಡೆಸಲಾಗುತ್ತಿದ್ದು ಇಲಾಖೆಯಿಂದ ಈಗಾಗಲೇ ಸಾಕಷ್ಟು ಸಹಕಾರ ಸಿಕ್ಕಿದೆ ಇನ್ನೂ ಹೆಚ್ಚಿನ ಸಹಕಾರ ನೀಡಬೇಕೆಂದು ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ವಿನಂತಿಸಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯಗಳು ಸಿಗಲಿದೆ ಎಂದರು.

ತಿರುಮಲದಲ್ಲಿ ಬೇರೆ ರಾಜ್ಯಗಳು ಹೊಂದಿರುವ ಆಸ್ತಿಗಳಿಗೆ ಹೋಲಿಸಿದರೆ ಕರ್ನಾಟಕ ಅತಿ ಹೆಚ್ಚಿನ ಆಸ್ತಿ ಅಂದರೆ ಸುಮಾರು ಏಳು ಎಕರೆ ಜಾಗ ಹೊಂದಿದೆ ಇದನ್ನು ಯಾತ್ರಾರ್ಥಿಗಳ ಸೌಲಭ್ಯ ಹಾಗೂ ಅನುಕೂಲಕ್ಕೆ ಬಳಸಿಕೊಳ್ಳಬೇಕೆನ್ನುವ ನಿಟ್ಟಿನಲ್ಲಿ ಇನ್ನೂ ಅನೇಕ ಕ್ರಮ ಕೈಗೊಳ್ಳುವ ಆಲೋಚನೆ ಇದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next