Advertisement

34 ಸಾವಿರ ಹೆ. ಡೀಮ್ಡ್ ಅರಣ್ಯ ರದ್ದು: ಸಚಿವ ಸುನಿಲ್‌ ಕುಮಾರ್‌

12:45 AM Jan 27, 2022 | Team Udayavani |

ಮಂಗಳೂರು: ಜಿಲ್ಲೆಯ ಡೀಮ್ಡ್ ಅರಣ್ಯ ಪ್ರದೇಶದ ಸಮಸ್ಯೆಯ ಪರಿಹಾರಕ್ಕೆ ಸರಕಾರ ಕ್ರಮ ಕೈಗೊಂಡಿದೆ. ಜಿಲ್ಲೆಯಲ್ಲಿರುವ ಒಟ್ಟು 66,428 ಹೆಕ್ಟೇರ್‌ ಡೀಮ್ಡ್ ಅರಣ್ಯ ಪ್ರದೇಶದಲ್ಲಿ 34 ಸಾವಿರ ಹೆಕ್ಟೇರನ್ನು ಡೀಮ್ಡ್ ಅರಣ್ಯದಿಂದ ಕೈಬಿಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

Advertisement

ನೆಹರೂ ಮೈದಾನದಲ್ಲಿ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣಗೈದು ಅವರು ಸಂದೇಶ ನೀಡಿದರು.

15-20 ವರ್ಷಗಳಿಂದ ಡೀಮ್ಡ್ ಅರಣ್ಯ ಸಮಸ್ಯೆ ಗಂಭೀರವಾಗಿ ಕಾಡುತ್ತಿದ್ದು, ಅಲ್ಲಿ ವಾಸವಾಗಿರು ವವರಿಗೆ ಮೂಲಸೌಕರ್ಯ ಒದಗಿಸುವುದು ಸೇರಿದಂತೆ ಹಕ್ಕುಪತ್ರ ನೀಡಲೂ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆ ನಡೆದಿದೆ ಎಂದರು.

ಗೋಪ್ರೇಮಿ ಸರಕಾರ
ಅಂಬೇಡ್ಕರ್‌, ಆಶ್ರಯ ವಸತಿ ಯೋಜನೆಯಡಿ ಜಿಲ್ಲೆಯಲ್ಲಿ ಈ ವರ್ಷ ವಸತಿರಹಿತರಿಗೆ 8,000 ಮನೆಗಳನ್ನು ನೀಡಲಾಗುವುದು. ಕೊಣಾಜೆಯಲ್ಲಿ 13 ಎಕರೆ ಭೂಮಿ ಗುರುತಿಸಿ ವಸತಿ ಬಡಾವಣೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಬೆಳಕು ಯೋಜನೆಯಡಿ ಕಳೆದ 100 ದಿನಗಳಲ್ಲಿ 2,000ಕ್ಕೂ ಅಧಿಕ ಮನೆಗಳಿಗೆ ವಿದ್ಯುತ್‌ ಸೌಲಭ್ಯ ಒದಗಿಸಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನಗೊಂಡಿದೆ. ದ.ಕ. ಜಿಲ್ಲೆಯ ರಾಮಕುಂಜದಲ್ಲಿ 98 ಎಕರೆ ಭೂಮಿಯಲ್ಲಿ ಸರಕಾರಿ ಗೋಶಾಲೆ ಮಾಡಲು ತೀರ್ಮಾನಿಸಲಾಗಿದ್ದು ಈ ಮೂಲಕ ರಾಜ್ಯ ಸರಕಾರ ಗೋಪ್ರೇಮಿ ಎಂಬುದನ್ನು ಸಾಬೀತುಪಡಿಸಿದೆ ಎಂದರು.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ಮೇಯರ್‌ ಪ್ರೇಮಾನಂದ ಶೆಟ್ಟಿ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರಾದ ನಿತಿನ್‌ ಕುಮಾರ್‌, ಸಂತೋಷ್‌ ಕುಮಾರ್‌ ರೈ ಬೋಳಿಯಾರು, ರವೀಂದ್ರ ಶೆಟ್ಟಿ ಉಳಿದೊಟ್ಟು, ವಿವಿಧ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಕತ್ತಲಸಾರ್‌, ಡಾ| ಜಗದೀಶ್‌ ಪೈ, ರಹೀಂ ಉಚ್ಚಿಲ, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಪೊಲೀಸ್‌ ಆಯುಕ್ತ ಶಶಿಕುಮಾರ್‌, ಎಸ್‌ಪಿ ಹೃಷಿಕೇಷ್‌ ಸೋನಾವಣೆ, ಜಿ.ಪಂ. ಸಿಇಒ ಡಾ| ಕುಮಾರ್‌, ಡಿಸಿಪಿ ಹರಿರಾಂ ಶಂಕರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಜಿಲ್ಲೆಯಲ್ಲಿ ಸ್ವಾತಂತ್ರ್ಯಹಾಗೂ ಗಣರಾಜ್ಯೋತ್ಸವ ಸಂದೇಶದ ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಓದಿ ಹೇಳುವುದು ಇಲ್ಲಿಯವರೆಗಿನ ವಾಡಿಕೆ. ಆದರೆ ಈ ಬಾರಿ ಸಂದೇಶದ ಪ್ರತಿ ಇದ್ದರೂ ಅದನ್ನು ನೋಡದೆ ಸಚಿವ ಸುನಿಲ್‌ ಕುಮಾರ್‌ ಅವರು ನಿರರ್ಗಳವಾಗಿ ಮಾತನಾಡಿ ಗಮನ ಸೆಳೆದರು.

ಇದನ್ನೂ ಓದಿ:ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ದ.ಕ. ಅಭಿವೃದ್ಧಿಗೆ 4 “ಸ್ನೇಹಿ’ ಸೂತ್ರ!
ಕೃಷಿ, ಉದ್ಯಮ, ಪ್ರವಾಸೋದ್ಯಮ,ಸಂಸ್ಕೃತಿಸ್ನೇಹಿ ಎಂಬ ಸೂತ್ರಗಳಡಿ ಜಿಲ್ಲೆಯನ್ನು ಅಭಿವೃದ್ಧಿಪಡಿಸ ಲಾಗುವುದು. ಕೃಷಿ ವಿಸ್ತರಣೆಗೆ ಶೀಘ್ರವೇ ಚಾಲನೆ ನೀಡಲಾಗುವುದು. ತಣ್ಣೀರು ಬಾವಿ ಬೀಚ್‌ಗೆ ಬ್ಲೂéಫ್ಲ್ಯಾಗ್‌ ಪ್ರಮಾಣಪತ್ರ ಪಡೆ ಯಲು ಪ್ರಯತ್ನ ನಡೆದಿದೆ. ಒಂದೆಡೆ ಪಶ್ಚಿಮ ಘಟ್ಟ, ಇನ್ನೊಂದೆಡೆ ಸಮುದ್ರ ತೀರ ಇರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಗಮನ ನೀಡಲಾಗುವುದು. ಪ್ಲಾಸ್ಟಿಕ್‌ ಪಾರ್ಕ್‌ ನಿರ್ಮಿಸಲಿದ್ದು, ಇನ್ನಷ್ಟು ಉದ್ಯಮಗಳನ್ನು ಆಹ್ವಾನಿಸಲು ಎಲ್ಲ ತಾಲೂಕುಗಳಲ್ಲಿ ಕೆಐಎಡಿಬಿ ಮೂಲಕ ಜಾಗ ಗುರುತಿಸುವುದಾಗಿ ಸುನಿಲ್‌ ಕುಮಾರ್‌ ಹೇಳಿದರು.

ಮಹಾಲಿಂಗ ನಾಯ್ಕ ಅವರಿಗೆ ಸಮ್ಮಾನ
ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಕೇಪು ಗ್ರಾಮದ ಅಮೈ ಮಹಾಲಿಂಗ ನಾಯ್ಕ ಅವರನ್ನು ಉಸ್ತುವಾರಿ ಸಚಿವರು ಸಮ್ಮಾನಿಸಿದರು. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಮಹಾಲಿಂಗ, “ಪ್ರಶಸ್ತಿಗೆ ಆಯ್ಕೆಯಾಗಿರುವುದು ಖುಷಿಯಾಗಿದೆ. ಕೃಷಿ ಆರಂಭಿಸಿ ನೀರಿಗಾಗಿ ಸುರಂಗ ತೋಡಲು ಆರಂಭಿಸಿದಾಗ ಯಾರ ಬೆಂಬಲವೂ ಸಿಗಲಿಲ್ಲ. ಆ ಜಾಗದಲ್ಲಿ ನೀರು ಸಿಗುತ್ತದೋ ಇಲ್ಲವೋ ಎಂಬುದೇ ಗೊತ್ತಿರಲಿಲ್ಲ. ಆದರೆ ಯಶಸ್ಸು ಸಿಕ್ಕಿತು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next