Advertisement

77 ಸಾವಿರ ರೈತರ 331 ಕೋಟಿ ಸಾಲ ಮನ್ನಾ

09:48 AM Jun 14, 2019 | Suhan S |

ಮಂಡ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಘೋಷಿಸಿದ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ ಯೋಜನೆಯಡಿ ಜಿಲ್ಲೆಯ 77,024ತರ 331.01 ಕೋಟಿ ರೂ. ಸಾಲಮನ್ನಾ ಆಗಿದೆ. ಇನ್ನೂ 182.61 ಕೋಟಿ ರೂ. ಸಾಲ ಮನ್ನಾ ಬಾಕಿ ಪಾವತಿಯಾಗಬೇಕಿದೆ.

Advertisement

2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರ ಸಹಕಾರ ಬ್ಯಾಂಕುಗಳಲ್ಲಿ ರೈತರು ಪಡೆದ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಯೋಜನೆಯಿಂದ ಜಿಲ್ಲೆಯ 1,15,272 ರೈತರು ಪ್ರಯೋಜನ ಪಡೆದುಕೊಂಡಿದ್ದರು. ಒಟ್ಟು 462,07,14,035 ರೂ. ಸಾಲ ಮನ್ನಾ ಆಗಿತ್ತು. ಈ ಸಾಲದ ಬಡ್ಡಿ ಸಹಾಯಧನ 1.51 ಕೋಟಿ ರೂ. ಹಾಗೂ ಸಾಲ ಮನ್ನಾ ಯೋಜನೆಯ ಬಡ್ಡಿ ಹಣ 3.19 ಕೋಟಿ ರೂ. ಸರ್ಕಾರದಿಂದ ಬಾಕಿ ಬರಬೇಕಿದೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ 1 ಲಕ್ಷ ರೂ.ವರೆಗೆ ಸಹಕಾರ ಬ್ಯಾಂಕುಗಳ ಸಾಲ ಮನ್ನಾ ಘೋಷಣೆ ಮಾಡಿದ್ದರಿಂದ ಸಾಲದ ಮೊತ್ತ 513.62 ಕೋಟಿ ರೂ. ಆಗಿತ್ತು. ಈ ಸಾಲದ ಹಣದಲ್ಲಿ ಮೇ 31ರವರೆಗೆ ಜಿಲ್ಲೆಯ 77,024 ರೈತರ 331.01 ಕೋಟಿ ರೂ. ಹಣ ಮನ್ನಾ ಆಗಿದೆ. ಇದರಿಂದ ಸಾಲ ಪಡೆದ ರೈತರು ಋಣಮುಕ್ತರಾಗಿದ್ದಾರೆ.

ಸಾಲದ ಹಣ ಬಿಡುಗಡೆ: ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದಿದ್ದ ಬೆಳೆ ಸಾಲವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಆದರೆ, ಸಹಕಾರ ಬ್ಯಾಂಕುಗಳಲ್ಲಿರುವ ರೈತರ ಸಾಲದ ಹಣ ಬಿಡುಗಡೆ ಸಂಬಂಧ ನಿರ್ದಿಷ್ಟವಾಗಿ ಏನನ್ನೂ ಹೇಳಿಲ್ಲ.

ಹಾಲಿ ಬಿಡುಗಡೆಯಾಗಿರುವ 331.01 ಕೋಟಿ ರೂ. ಹಣವನ್ನು ಎಲ್ಲಾ ತಾಲೂಕುಗಳಿಗೆ ಹಂಚಿಕೆ ಮಾಡಲಾಗಿದೆ. ಸರ್ಕಾರ ಬಿಡುಗಡೆ ಮಾಡಿದ ಹಣದಿಂದ ಸಾಲ ಮನ್ನಾ ಆದವರು ಸಂತಸದಲ್ಲಿ ತೇಲಾಡುತ್ತಿದ್ದರೆ, ಸಾಲ ಮನ್ನಾ ಆಗದ ರೈತರು ನಾವು ಮಾಡಿರುವ ಬೆಳೆ ಸಾಲ ಯಾವಾಗ ಮನ್ನಾ ಆಗಲಿದೆ ಎಂಬ ನಿರೀಕ್ಷೆಯಲ್ಲೇ ಸಂಕಟ ಅನುಭವಿಸುತ್ತಿದ್ದಾರೆ. ಒಂದೇ ಕಂತಿನಲ್ಲಿ ಹಣ ಬಿಡುಗಡೆಯಾಗಿದ್ದರೆ ಎಲ್ಲಾ ರೈತರು ಸಾಲದ ಋಣದಿಂದ ಒಂದೇ ಬಾರಿಗೆ ಮುಕ್ತರಾಗುತ್ತಿದ್ದರು ಎಂಬ ಭಾವನೆ ರೈತರು ವ್ಯಕ್ತಪಡಿಸುತ್ತಿದ್ದಾರೆ.

Advertisement

ಜಿಲ್ಲೆಯಲ್ಲಿ ಮಂಡ್ಯ ತಾಲೂಕಿನ 17,887 ರೈತರ 70.85 ಕೋಟಿ ರೂ., ಮದ್ದೂರು ತಾಲೂಕಿನ 13,753 ರೈತರ 59.37 ಕೋಟಿ ರೂ., ಮಳವಳ್ಳಿ ತಾಲೂಕಿನ 11,461 ರೈತರ 51.69 ಕೋಟಿ ರೂ., ಪಾಂಡವಪುರ ತಾಲೂಕಿನ 6229 ರೈತರ 26.45 ಕೋಟಿ ರೂ., ಶ್ರೀರಂಗಪಟ್ಟಣ ತಾಲೂಕಿನ 7006 ರೈತರ 29.48 ಕೋಟಿ ರೂ. ಕೆ.ಆರ್‌.ಪೇಟೆ ತಾಲೂಕಿನ 12126 ರೈತರ 59.72 ಕೋಟಿ ರೂ. ಹಾಗೂ ನಾಗಮಂಗಲ ತಾಲೂಕಿನ 8562 ರೈತರ 33.42 ಕೋಟಿ ರೂ. ಹಣ ಸೇರಿ ಜಿಲ್ಲೆಯ ಒಟ್ಟು 77024 ರೈತರ 331.01 ಕೋಟಿ ರೂ. ಸಾಲ ಮನ್ನಾ ಆಗಿದೆ.

ಸಾಲ ಮನ್ನಾ ಹಣವನ್ನು ಸರ್ಕಾರ ಹಂತ ಹಂತವಾಗಿ ಬಿಡುಗಡೆಯಾಗುತ್ತಿದ್ದು, ಬಾಕಿ ಉಳಿದಿರುವ 182.61 ಕೋಟಿ ರೂ. ಹಣವನ್ನು ಸರ್ಕಾರ ಶೀಘ್ರ ಬಿಡುಗಡೆ ಮಾಡುವರೆಂಬ ನಿರೀಕ್ಷೆಯಲ್ಲಿ ಡಿಸಿಸಿ ಬ್ಯಾಂಕ್‌ ಅಧಿಕಾರಿಗಳಿದ್ದಾರೆ. ಇದರ ನಡುವೆಯೂ ರೈತರು ಬೆಳೆ ಬೆಳೆಯುವುದಕ್ಕೆ ಅನುಕೂಲವಾಗುವಂತೆ ಜಿಲ್ಲೆಯ 17 ಸಾವಿರ ರೈತರಿಗೆ 70 ಕೋಟಿ ರೂ.ವರೆಗೆ ಸಾಲ ನೀಡಿದ್ದಾರೆ. ಉತ್ತರ ಕರ್ನಾಟಕದ ಯಾದಗಿರಿಯಲ್ಲಿ ರೈತರ ಸಾಲ ಮನ್ನಾಗೆ ಬಂದ ಹಣ ವಾಪಸ್‌ ಹೋಗಿರುವ ಪ್ರಕರಣ ನಡೆದಿದ್ದು, ಆ ರೀತಿಯ ಯಾವುದೇ ಪ್ರಕರಣ ಈ ಭಾಗದಲ್ಲಿ ನಡೆದಿಲ್ಲ. ಸಾಲ ಮನ್ನಾ ವಿಚಾರದಲ್ಲಿ ಯಾವ ಗೊಂದಲಗಳೂ ಇಲ್ಲವೆಂದು ಬ್ಯಾಂಕ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ಕೆ.ನಿಖೀಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾರಣಕ್ಕೆ ಜಿಲ್ಲೆಯ ಜನರ ಮನವೊಲಿಸಿಕೊಳ್ಳಲು 331.01 ಕೋಟಿ ರೂ. ಸಾಲ ಮನ್ನಾ ಹಣ ಬಿಡುಗಡೆ ಮಾಡಿದ್ದರು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಅದರ ನಡುವೆಯೂ ರೈತರಿಗೆ ಪ್ರಯೋಜನವಾಗಿರುವುದು ಸಂತಸಪಡುವ ಸಂಗತಿಯಾಗಿದೆ.

● ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next