ಹೊಸದಿಲ್ಲಿ: 3,300 ಕ್ಕೂ ಹೆಚ್ಚು ಸಿಐಎಸ್‌ಎಫ್ ಸಿಬಂದಿಗಳ ತುಕಡಿಗಳು ಸೋಮವಾರದಿಂದ(ಮೇ 20) ಸಂಸತ್ತಿನ ಸಂಕೀರ್ಣದಲ್ಲಿ ಸಂಪೂರ್ಣ ಉಗ್ರ ನಿಗ್ರಹ ಮತ್ತು ವಿಧ್ವಂಸಕ ವಿರೋಧಿ ಭದ್ರತಾ ಕರ್ತವ್ಯಗಳನ್ನು ವಹಿಸಿಕೊಳ್ಳಲಿದ್ದಾರೆ.
ಇದುವರೆಗೆ ಭದ್ರತೆ ನೋಡಿಕೊಳ್ಳುತ್ತಿದ್ದ 1,400 ಮಂದಿ ಸಿಆರ್‌ಪಿಎಫ್ ಸಿಬಂದಿಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಿಆರ್‌ಪಿಎಫ್‌ನ ಪಾರ್ಲಿಮೆಂಟ್ ಡ್ಯೂಟಿ ಗ್ರೂಪ್ (ಪಿಡಿಜಿ) ಶುಕ್ರವಾರ ಸಂಕೀರ್ಣದಿಂದ ಅದರ ಸಂಪೂರ್ಣ ಆಡಳಿತ ಮತ್ತು ಕಾರ್ಯಾಚರಣೆಯ ಸಾಮಗ್ರಿಗಳಾದ ವಾಹನಗಳು, ಶಸ್ತ್ರಾಸ್ತ್ರಗಳನ್ನು ಕಮಾಂಡೋಗಳು, ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಶ್ರೇಣಿಯ ಅಧಿಕಾರಿಗಳು ಎಲ್ಲವನ್ನು ಸಿಐಎಸ್ಎಫ್ ತಂಡಕ್ಕೆ ಹಸ್ತಾಂತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯ ಕೇಂದ್ರ ಭಾಗದಲ್ಲಿರುವ ಸಂಸತ ಹಳೆಯ ಮತ್ತು ಹೊಸ ಕಟ್ಟಡಗಳು ಮತ್ತು ಸಂಬಂಧಿತ ಇಲಾಖೆಗಳ ಭದ್ರತೆಗಾಗಿ ಒಟ್ಟು 3,317 ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF) ಸಿಬಂದಿಗಳು ಸಿಆರ್‌ಪಿಎಫ್‌ನಿಂದ ಕಾರ್ಯವನ್ನು ವಹಿಸಿಕೊಳ್ಳುವಂತೆ ಕೇಂದ್ರ ಸರಕಾರ ನಿರ್ದೇಶಿಸಿದ ನಂತರ ಬದಲಾವಣೆ ಮಾಡಲಾಗಿದೆ.
ಕಳೆದ ವರ್ಷದ ಡಿಸೆಂಬರ್ 13 ಭದ್ರತಾ ಉಲ್ಲಂಘನೆಯ ಘಟನೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
2001 ರ ಸಂಸತ್ತಿನ ಮೇಲೆ ನಡೆದಿದ್ದ ಉಗ್ರ ದಾಳಿಯ ಕರಾಳ ದಿನದಂದು ಡಿಸೆಂಬರ್ 13 ರಂದು ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಇಬ್ಬರು ಜಿಗಿದು, ಹೊಗೆ ಬಾಂಬ್ ಸಿಡಿಸಿ ಘೋಷಣೆಗಳನ್ನು ಕೂಗಿದ್ದರು. ಅದೇ ದಿನ ಅದೇ ಸಮಯದಲ್ಲಿ ಸಂಸತ್ತಿನ ಆವರಣದ ಹೊರಗೂ ಇಬ್ಬರು ಘೋಷಣೆಗಳನ್ನು ಕೂಗುತ್ತಾ ಹೊಗೆ ಬಾಂಬ್ ಸಿಡಿಸಿದ್ದರು.