Advertisement

OBC ಗೆ ಶೇ.33 ಮೀಸಲು- ನ್ಯಾ. ಭಕ್ತವತ್ಸಲಂ ವರದಿ ಜಾರಿಗೆ ರಾಜ್ಯ ಸಚಿವ ಸಂಪುಟ ಅಸ್ತು

10:15 PM Oct 05, 2023 | Team Udayavani |

ಬೆಂಗಳೂರು: ಬಿಹಾರ ಸರ್ಕಾರ ಬಿಡುಗಡೆ ಮಾಡಿದ ಜಾತಿಗಣತಿ ವರದಿ ಬೆನ್ನಲ್ಲೇ ದೇಶಾದ್ಯಂತ “ಒಬಿಸಿ’ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಚರ್ಚೆ ತೀವ್ರಗೊಂಡಿರುವುದರಿಂದ ರಾಜ್ಯ ಸರ್ಕಾರ ಚಾಣಾಕ್ಷ ಹೆಜ್ಜೆ ಇಡಲು ಮುಂದಾಗಿದೆ. ಪಂಚಾಯತ್‌ ರಾಜ್‌ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಕ್ಕೆ ಶೇ.33ರಷ್ಟು ರಾಜಕೀಯ ಮೀಸಲು ನೀಡುವ ನ್ಯಾ.ಭಕ್ತವತ್ಸಲಂ ವರದಿ ಜಾರಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.

Advertisement

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ‌ ಚರ್ಚೆಯ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕುತೂಹಲಕಾರಿ ಸಂಗತಿ ಎಂದರೆ ಈ ಹಿಂದೆ ನಡೆದ ಮೂರ್‍ನಾಲ್ಕು ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾದರೂ ಯಾವುದೇ ನಿರ್ಣಯ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿರಲಿಲ್ಲ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಪ್ರಯೋಗಿಸಿದ “ಮಹಿಳಾ ಮೀಸಲು’ ಅಸ್ತ್ರ ಹಾಗೂ ಬಿಹಾರ ಸರ್ಕಾರದ ಜಾತಿ ಗಣತಿ ವರದಿ ಸ್ವೀಕಾರದ ಬಳಿಕ ರಾಜ್ಯ ಸರ್ಕಾರ “ಒಬಿಸಿ” ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಸದ್ಯದಲ್ಲೇ ಎದುರಾಗುವ ಬಿಬಿಎಂಪಿ ಹಾಗೂ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್‌ ರಾಜ್‌ ಸಂಸ್ಥೆಗಳ ಚುನಾವಣೆಯಲ್ಲಿ ಈ ಮೀಸಲು ಸೂತ್ರ ಅನ್ವಯವಾಗಲಿದೆ.
ಸಂಪುಟ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ.ಪಾಟೀಲ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಭಕ್ತವತ್ಸಲಂ ಸಮಿತಿ ನೀಡಿದ್ದ ಒಟ್ಟು ಐದು ಶಿಫಾರಸುಗಳ ಪೈಕಿ ಮೂರಕ್ಕೆ ಮಾತ್ರ ಸಂಪುಟ ಒಪ್ಪಿಗೆ ನೀಡಿದ್ದು, ಎರಡನ್ನು ತಿರಸ್ಕರಿಸಲಾಗಿದೆ.

ಒಪ್ಪಿಗೆ ಯಾವುದಕ್ಕೆ?
– ಮುಂಬರುವ ನಗರ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯತ್‌ ರಾಜ್‌ ಚುನಾವಣೆಯಲ್ಲಿ ಒಟ್ಟಾರೆ ಮೀಸಲಾತಿಯ ಶೇ.50ರ ಗಡಿ ಮೀರದಂತೆ ಹಿಂದುಳಿದ ವರ್ಗದವರಿಗೆ ಶೇ.33ರಷ್ಟು ರಾಜಕೀಯ ಮೀಸಲು ನೀಡುವುದು.
– ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಗಳಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲು.
– ಎಲ್ಲ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣಾ ಶಾಖೆಗಳನ್ನು ಡಿಪಿಎಆರ್‌ ವ್ಯಾಪ್ತಿಗೆ ನೀಡಬೇಕೆಂದು ಸಮಿತಿ ನೀಡಿದ್ದ ಶಿಫಾರಸಿಗೆ ಸಂಪುಟದ ಒಪ್ಪಿಗೆ.

ಯಾವುದಕ್ಕೆ ನಿರಾಕರಣೆ?
– ಬಿಬಿಎಂಪಿ ಕಾಯ್ದೆ 2020ರ ಅನ್ವಯ ಮೇಯರ್‌, ಉಪಮೇಯರ್‌ ಸ್ಥಾನಗಳನ್ನು ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸುವ ಪ್ರಸ್ತಾಪ.
– 2027-28ರಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಹಿಂದುಳಿದ ವರ್ಗಗಳ ಕೆಟಗರಿ ಎ ಮತ್ತು ಬಿ ಜತೆಗೆ ಅಲ್ಪಸಂಖ್ಯಾತರು ಸೇರಿದಂತೆ ಇತರೆ ಹಿಂದುಳಿದ ವರ್ಗದವರಿಗಾಗಿ ಪರಿಣಾಮಕಾರಿಯಾದ ರಾಜಕೀಯ ಮೀಸಲು ವ್ಯವಸ್ಥೆ ಕಲ್ಪಿಸಲು ಎರಡು ಹೆಚ್ಚುವರಿ ಕೆಟಗರಿ ಸೇರಿಸಿ ಹಿಂದುಳಿದ ವರ್ಗಗಳ ಮರು ವರ್ಗೀಕರಣ ಮಾಡುವ ಶಿಫಾರಸಿಗೆ ಒಪ್ಪಿಗೆ ನೀಡಿಲ್ಲ.

ಜಾತಿ ಗಣತಿ ವರದಿ ಬಗ್ಗೆ ಚರ್ಚೆ
ಭಕ್ತವತ್ಸಲಂ ವರದಿ ಜಾರಿ ಹಾಗೂ ಜಾತಿ ಗಣತಿ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘ‌ ಚರ್ಚೆಯಾಗಿದೆ. ಜಾತಿಗಣತಿ ವರದಿಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆಗೆ ಸಭೆಯ ಹೆಚ್ಚಿನ ಸಮಯ ವಿನಿಯೋಗವಾಗಿದೆ. ಮೂಲಗಳ ಪ್ರಕಾರ ಈ ವರದಿಯಲ್ಲಿ ಸೋರಿಕೆಯಾದ ಜಾತಿವಾರು ಸಂಖ್ಯೆಯ ಬಗ್ಗೆ ಕೆಲ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ವರದಿ ಸಲ್ಲಿಕೆಯಾದ ಬಳಿಕ ಜಾರಿ ಮಾಡಬೇಕೋ, ಬೇಡವೋ ಎಂಬುದನ್ನು ನಿರ್ಧರಿಸೋಣ ಎಂಬ ಅಭಿಪ್ರಾಯಕ್ಕೆ ಸಂಪುಟ ಸಭೆ ಬಂದಿದೆ. ಅದೇ ರೀತಿ ನಗರ ಹಾಗೂ ಪಂಚಾಯತ್‌ ರಾಜ್‌ ಸಂಸ್ಥೆಗಳ ಚುನಾವಣಾ ಶಾಖೆಗಳನ್ನು ಡಿಪಿಎಆರ್‌ಗೆ ಒಪ್ಪಿಸುವುದರಿಂದ ರಾಜ್ಯ ಚುನಾವಣಾ ಆಯೋಗವನ್ನು ನಿಷ್ಕ್ರಿಯಗೊಳಿಸಿದಂತಾಗುತ್ತದೆ ಎಂಬ ಅಭಿಪ್ರಾಯವನ್ನು ಕೆಲ ಸಚಿವರು ವ್ಯಕ್ತಪಡಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next