Advertisement

31ನೇ ವರ್ಷದ ಸಂಭ್ರಮದಲ್ಲಿ ಅಂಬಾಗಿಲು ಗಣೇಶೋತ್ಸವ

09:29 PM Aug 30, 2019 | Sriram |

ಉಡುಪಿ: ಅಂಬಾಗಿಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 31ನೇ ವರ್ಷದ ಗಣೇಶೋತ್ಸವ ಆಚರಣೆಗೆ ಸಿದ್ಧತೆ ನಡೆಯುತ್ತಿದೆ.

Advertisement

1988ರಲ್ಲಿ ಅಂಬಾಗಿಲು-ಪುತ್ತೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷ ಶಾಂತಕುಮಾರ್‌ ಅವರ ನೇತೃತ್ವದಲ್ಲಿ ಕೆಲವು ಉತ್ಸಾಹಿ ಯುವಕರ ತಂಡ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿತು. ಸಮಯ ಕಳೆದಂತೆ ಸಮಿತಿ ಸದಸ್ಯರ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಬಹಳ ಅದ್ದೂರಿಯಿಂದ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಪ್ರಸ್ತುತ ಗಣೇಶ್‌ ಕಲ್ಯಾಣಪುರ ಅವರು ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ಕೈಗೆತ್ತಿಕೊಂಡಿದ್ದಾರೆ.

ಸ್ವರ್ಣ ಕಿರೀಟ ರಾರಾಜಿತ ಶ್ರೀ ಗಣೇಶ
2017ರಲ್ಲಿ ಶಿರೂರು ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಶ್ರೀ ಗಣೇಶನ ಸ್ವರ್ಣ ಕಿರೀಟ ನಿರ್ಮಾಣಕ್ಕೆ ಚಾಲನೆ ನೀಡಿದ್ದು 2018ರಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವದಲ್ಲಿ ಸ್ವರ್ಣ ಕಿರೀಟವನ್ನು ಸಮರ್ಪಿಸಲಾಗಿತ್ತು. 25ನೇ ವರ್ಷದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು ಭಾಗವಹಿಸಿ ಆಶೀರ್ವಚಿಸಿದ್ದರು.

ಪರಿಸರ ಸ್ನೇಹಿ ಗಣಪತಿ
ಬ್ರಹ್ಮಾವರದ ವೆಂಕಟೇಶ್‌ ಅವರು ಈ ಗಣೇಶೋತ್ಸವ ಸಮಿತಿಗೆ ಸುಮಾರು ಐದು ಕಾಲು ಅಡಿ ಎತ್ತರದ ವಿನಾಯಕನ ವಿಗ್ರಹವನ್ನು ಆವೆ ಮಣ್ಣಿನಲ್ಲಿ ಸಿದ್ಧಪಡಿಸಿ ನೀಡುತ್ತಿದ್ದಾರೆ. ಪರಿಸರ ಸ್ನೇಹಿ ವಾಟರ್‌ ಕಲರ್‌ಗಳನ್ನು ಮಾತ್ರ ಬಳಸಿ ಗಣಪತಿ ಮೂರ್ತಿಗೆ ಬಣ್ಣ ಬಳಿಯುತ್ತಾರೆ.

ಯುವಶಕ್ತಿಯನ್ನು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ವಿವಿಧ ಕ್ರೀಡೆ ಹಾಗೂ ಕೌಶಲ ಸ್ಪರ್ಧೆ, ಶಾಲಾ ಮಕ್ಕಳಿಗಾಗಿ ಸಂಗೀತ, ಚಿತ್ರಕಲಾ, ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಗಣೇಶೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಅಂಬಾಗಿಲಿನ ಪುತ್ತೂರು ಪರಿಸರದಲ್ಲಿ ಹಬ್ಬದೋಪಾದಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.

Advertisement

ಸರ್ವ ಧರ್ಮೀಯರ ಸಹಭಾಗಿತ್ವ
ಈ ಸಮಿತಿ ತನ್ನದೇ ಆದ ವೈಶಿಷ್ಟéವನ್ನು ಹೊಂದಿದೆ. ಸರ್ವ ಧರ್ಮದ ಸಮನ್ವಯತೆಯ ಕೇಂದ್ರವಾಗಿ ಕೆಲಸ ಮಾಡುತ್ತಿದೆ. ಇಲ್ಲಿ ಜಾತಿ ಮತ ಭೇದವಿಲ್ಲದೇ ಎಲ್ಲ ಧರ್ಮೀಯರು ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಬಾಗಿಲು ಅಬ್ದುಲ್‌ ಖಾದರ್‌ ಅವರು ಸತತ 31 ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವಕ್ಕೆ ಗಣೇಶನ ಮೂರ್ತಿಯನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಅಂಬಾಗಿಲಿನಲ್ಲಿ ನಿರ್ಮಿಸಿಲಾದ ಶ್ರೀ ಗಣೇಶನ ವಿಗ್ರಹ ಇರಿಸಿ ಪೂಜಿಸುವ ಕಟ್ಟೆಯನ್ನು ಸ್ಥಳೀಯ ಕ್ರಿಶ್ಚಿಯನ್‌ ಸಮುದಾಯದವರು ನಿರ್ಮಿಸಿಕೊಟ್ಟಿದ್ದಾರೆ.

ಅಶಕ್ತರಿಗೆ ಆರ್ಥಿಕ ನೆರವು
ಸಾರ್ವಜನಿಕ ಗಣೇಶೋತ್ಸವ ಕೇವಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೀಮಿತವಾಗಿಲ್ಲ ಎಂಬುದನ್ನು ದೃಢಪಡಿಸಲು ಈ ಸಮಿತಿಯು ಸಾಮಾಜಿಕ ಸತ್ಕಾರ್ಯಗಳಾದ ಆರ್ಥಿಕವಾಗಿ ಹಿಂದುಳಿದವರಿಗೆ ಧನಸಹಾಯ, ಕನ್ನಡ ಮಾಧ್ಯಮದ ಎಸೆಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಿಸುವ ಸಾಮಾಜಿಕ ಕಾರ್ಯಕ್ರಮವನ್ನು ನಿರಂತವಾಗಿ ಹಮ್ಮಿಕೊಂಡು ಬಂದಿದೆ. ಅವರ ಸಾಮಾಜಿಕ ಕೈಂಕರ್ಯ ಈ ಬಾರಿಯೂ ಯಥಾಪ್ರಕಾರ ಮುಂದುವರಿಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next