Advertisement

ಅಂಬೇಡ್ಕರ್‌ ಭವನಕ್ಕೆ  3.10 ಕೋ.ರೂ.

10:22 AM Jul 30, 2018 | |

ಸುಳ್ಯ : ಜಿಲ್ಲೆಯ ಏಕೈಕ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಅಪೂರ್ಣ ಸ್ಥಿತಿಯಲ್ಲಿ ಇರುವ ಅಂಬೇಡ್ಕರ್‌ ಭವನಕ್ಕೆ 2ನೇ ಹಂತದ 50 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದೆ. 3.10 ಕೋಟಿ ರೂ. ಪ್ರಸ್ತಾವನೆಯಲ್ಲಿ ಈ ಅನುದಾನ ಬಿಡುಗಡೆಗೊಂಡಿರುವ ಪತ್ರ ಕೈ ಸೇರಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾಮಗಾರಿ ಆರಂಭದ ಬಗ್ಗೆ ರಾಜ್ಯ ಅಥವಾ ಜಿಲ್ಲಾಡ ಳಿತ ಮುಂದಿನ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದೆ.

Advertisement

ಯಡಿಯೂರಪ್ಪ ಸರಕಾರದ ಕೊನೆ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆ 1 ಕೋಟಿ ರೂ. ಅನುದಾನದಲ್ಲಿ ತಾಲೂಕು ಅಂಬೇಡ್ಕರ್‌ ಭವನ ನಿರ್ಮಿಸುವ ಪ್ರಸ್ತಾವ ಸಲ್ಲಿಸಿತ್ತು. ಮೊದಲ ಹಂತದಲ್ಲಿ 50 ಲಕ್ಷ ರೂ. ಬಿಡುಗಡೆಗೊಂಡಿತ್ತು. ಕೃಷಿ ಇಲಾಖೆ ಸನಿಹದಲ್ಲಿ ಕಾಮಗಾರಿ ಆರಂಭಿಸಲಾಯಿತು. ತಳಪಾಯ, ಪಿಲ್ಲರ್‌ ನಿರ್ಮಾಣ ಕೆಲಸ ನಡೆದು, ಅನುದಾನ ಬರಲಿಲ್ಲ ಎನ್ನುವ ಕಾರಣಕ್ಕೆ ಸ್ಥಗಿತಗೊಂಡಿತ್ತು. ಬರೋಬ್ಬರಿ ನಾಲ್ಕು ವರ್ಷ ಕೆಲಸ ಸ್ಥಗಿತವಾಗಿ ಪಿಲ್ಲರ್‌ನ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ. ಅಡಿಪಾಯದಲ್ಲಿ ಪೊದೆ ತುಂಬಿ ಭೂತ ಬಂಗಲೆಯಂತೆ ಗೋಚರಿಸಿದೆ.

ಅನುದಾನ ಯಾವುದು?
ಈ ಹಿಂದೆ 1 ಕೋಟಿ ರೂ. ಮಂಜೂರಾತಿಯಲ್ಲಿ ಮಾಡಿದ ಅಡಿಪಾಯ ಕಾಮಗಾರಿಗೆ 50 ಲಕ್ಷ ರೂ. ಖರ್ಚಾಗಿದ್ದು, ಆ ಹಣವೇ ಬಂದಿಲ್ಲ ಎಂದು ಶಾಸಕ ರಾದಿಯಾಗಿ ಅನೇಕ ಆರೋಪ ಕೇಳಿ ಬಂದಿತ್ತು. ಆದರೆ ಸಮಾಜ ಕಲ್ಯಾಣ ಇಲಾಖೆ ಹೇಳುವ ಪ್ರಕಾರ, 1 ಕೋಟಿ ರೂ. ಪ್ರಸ್ತಾವನೆ ಬದಲಾಯಿಸಿ, 3.10 ಕೋಟಿ ರೂ.ಗೆ ಏರಿಸಲಾಗಿತ್ತು. ಅದರಲ್ಲಿ ಮೊದಲ ಹಂತದಲ್ಲಿ 75 ಲಕ್ಷ ರೂ. ಬಿಡುಗಡೆಯಾಗಿದೆ. ನಿರ್ಮಿತಿ ಕೇಂದ್ರ ಕಾಮಗಾರಿ ಉಸ್ತುವಾರಿ ವಹಿಸಿತ್ತು. ಆದರೆ ಹಣ ಬಿಡುಗಡೆಯಾಗಿದ್ದರೆ ಅದು ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಸಂಸ್ಥೆಗೆ ಸಿಗಬೇಕಿತ್ತು. ಆದರೆ ಸಿಕ್ಕಿಲ್ಲ ಎನ್ನುವ ಆರೋಪ ಇದ್ದು, ಗೊಂದಲ ಮೂಡಿದೆ. ಇಲ್ಲಿ 1 ಕೋಟಿ ರೂ. ಮತ್ತು 3.10 ಕೋಟಿ ರೂ. – ಎರಡೂ ಪ್ರಸ್ತಾವನೆಗಳಿಗೆ ಮಂಜೂರಾತಿ ಸಿಗಲು ಸಾಧ್ಯವಿಲ್ಲ. 50 ಲಕ್ಷ ರೂ. ಎರಡನೆ ಹಂತದ್ದು, ಮೊದಲ ಹಂತದ 75 ಲಕ್ಷ ರೂ. ಯಾರಿಗೆ ಪಾವತಿ ಆಗಿದೆ ಎನ್ನುವ ಜಿಜ್ಞಾಸೆ ಮೂಡಿದೆ.

ಚರ್ಚಾ ವಸ್ತು 
ವಿಧಾನಸಭಾ ಚುನಾವಣೆಯಲ್ಲಿ ಅಂಬೇಡ್ಕರ್‌ ಭವನ ನನೆಗುದಿಗೆ ಬಿದ್ದಿರುವ ವಿಚಾರ, ಆಡಳಿತ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ಮಧ್ಯೆ ಆರೋಪ- ಪ್ರತ್ಯಾರೋಪಕ್ಕೆ ವೇದಿಕೆ ಕಲ್ಪಿಸಿತ್ತು. ಬಿಜೆಪಿ ಸರಕಾರ ಮಂಜೂರು ಮಾಡಿದ ಅನುದಾನವನ್ನು ಕಾಂಗ್ರೆಸ್‌ ಸರಕಾರ ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿ ಆರೋಪಿಸಿದರೆ, 25 ವರ್ಷ ಅಧಿಕಾರದಲ್ಲಿದ್ದು, ಅನುದಾನ ತರಿಸಲು ಆಗದಿರುವುದು ಶಾಸಕರ ವೈಫಲ್ಯ ಎಂದು ಕಾಂಗ್ರೆಸ್‌ ಪ್ರತ್ಯಾರೋಪ ಮಾಡಿತ್ತು.

 ಪತ್ರ ಬಂದಿದೆ
50 ಲಕ್ಷ ರೂ. ಅನುದಾನ ಬಿಡುಗಡೆಯಾಗಿರುವ ಕುರಿತು ಪತ್ರ ಬಂದಿದೆ. ಈ ಹಿಂದೆ 75 ಲಕ್ಷ ರೂ. ಬಿಡುಗಡೆ ಆಗಿತ್ತು. ಇದು 2ನೇ ಹಂತದ ಅನುದಾನ. 50 ಲಕ್ಷ ರೂ. ಅನುದಾನ ಕಾಮಗಾರಿ ಅನುಷ್ಠಾನದ ಬಗ್ಗೆ ರಾಜ್ಯ ಅಥವಾ ಜಿಲಾಮಟ್ಟದಲ್ಲಿ ತೀರ್ಮಾನವಾಗುತ್ತದೆ.
– ಚಂದ್ರಶೇಖರ ಪೇರಾಲು
ಸಮಾಜ ಕಲ್ಯಾಣ ಇಲಾಖಾಧಿಕಾರಿ (ಪ್ರಭಾರ) ಸುಳ್ಯ 

Advertisement

ಕಿರಣ್‌ ಪ್ರಸಾದ್‌ ಕುಂಡಡ್ಕ 

Advertisement

Udayavani is now on Telegram. Click here to join our channel and stay updated with the latest news.

Next