Advertisement

31 ಗ್ರಾಮಗಳಿಗೆ ಶುಕ್ರ ದೆಸೆ!

10:07 AM Feb 12, 2019 | Team Udayavani |

ಚಿತ್ರದುರ್ಗ: ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಜಿಲ್ಲೆಯ ಒಟ್ಟು 31 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರತಿ ಗ್ರಾಮದ ಅಭಿವೃದ್ಧಿಗೆ ತಲಾ ಒಂದು ಕೋಟಿ ರೂ. ಅನುದಾನ ದೊರೆಯಲಿದೆ.

Advertisement

ಈ ಯೋಜನೆಗೆ ಜಿಲ್ಲೆಯ ಆರು ತಾಲೂಕುಗಳಿಂದ ತಲಾ ಐದರಂತೆ ಮತ್ತು ಜಿಲ್ಲಾ ಕೇಂದ್ರವಾಗಿರುವ ಚಿತ್ರದುರ್ಗ ತಾಲೂಕಿನಲ್ಲಿ ಹೆಚ್ಚುವರಿಯಾಗಿ ಒಂದು ಗ್ರಾಮವನ್ನು ಆಯ್ಕೆ ಮಾಡಲಾಗಿದೆ. ಒಟ್ಟಾರೆ 31 ಗ್ರಾಮಗಳನ್ನು ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಗೆ ಆಯ್ಕೆ ಮಾಡಿ 31 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ಆ ಪೈಕಿ 12.06 ಕೋಟಿ ರೂ.ಗಳನ್ನು ಕಳೆದ ಜನವರಿ 19 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಬಿಡುಗಡೆ ಮಾಡಿ ಸಮಗ್ರವಾಗಿ ಅಭಿವೃದ್ಧಿಪಡಿಸುವಂತೆ ಸಿಇಒಗೆ ಸೂಚನೆ ನೀಡಲಾಗಿದೆ.

ಈ ಯೋಜನೆ ಅಡಿ ಗ್ರಾಮಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸುವರ್ಣ ಗ್ರಾಮ ಯೋಜನೆ ರೀತಿಯಲ್ಲಿಯೇ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯನ್ನೂ ಅನುಷ್ಠಾನ ಮಾಡಲಾಗುತ್ತಿದೆ. ಈ ಯೋಜನೆಯಡಿ ಒಂದು ಗ್ರಾಮಕ್ಕೆ ಒಂದು ಕೋಟಿ ರೂ. ಅನುದಾನ ನೀಡುವ ಜತೆಗೆ ನರೇಗಾ ಮೂಲಕವೂ ಹೆಚ್ಚುವರಿ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡಲಾಗಿದೆ. ಗ್ರಾಮ ಪಂಚಾಯತ್‌ಗಳ ಮೂಲಕ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.

ಯಾವ್ಯಾವ ಗ್ರಾಮಗಳು?: ಜಿಲ್ಲೆಯ ಆರು ತಾಲೂಕುಗಳಿಂದ ಒಟ್ಟು 31 ಗ್ರಾಮಗಳನ್ನು ಆಯಾ ಕ್ಷೇತ್ರದ ಶಾಸಕರ ಮೂಲಕ ಆಯ್ಕೆ ಮಾಡಲಾಗಿದೆ. ಅದರಂತೆ ಚಿತ್ರದುರ್ಗ ತಾಲೂಕಿನ ಗೂಳಯ್ಯನಹಟ್ಟಿ, ಮಠದ ಕುರುಬರಹಟ್ಟಿ, ಗೊಲ್ಲನಹಟ್ಟಿ, ಹಣಸೆಕಟ್ಟೆ ಗೊಲ್ಲರಹಟ್ಟಿ, ಗುತ್ತಿನಾಡು, ಆಲಘಟ್ಟ ಗ್ರಾಮಗಳಿಗೆ ತಲಾ ಒಂದು ಕೋಟಿ ರೂ.ಗಳಂತೆ ನಿಗದಿಪಡಿಸಲಾಗಿದೆ.

ಚಳ್ಳಕೆರೆ ತಾಲೂಕಿನ ಹರವಿಗೊಂಡನಹಳ್ಳಿ, ನಾಗಗೊಂಡನಹಳ್ಳಿ, ರಾಮಜೋಗಿಹಳ್ಳಿ, ಚಿಕ್ಕಗೊಂಡನಹಳ್ಳಿ, ಜೋಗಿಹಳ್ಳಿ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಳಿಕಟ್ಟೆ, ಅಂದನೂರು, ರಾಮಗಿರಿ, ಚಿಕ್ಕಂದವಾಡಿ, ಯಳಗೋಡು, ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆ.ಜಿ. ಹಳ್ಳಿ, ಆಲೂರು, ಆದಿವಾಲ, ಕೋವೇರಹಟ್ಟಿ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಸಗುಡ್ಡ (ರಾಮದುರ್ಗ), ಬೋಗನಹಳ್ಳಿ, ಕುಬೇರ ನಗರ(ಕೆರೆ ಕೊಂಡಾಪುರ), ವೆಂಕಟಾಪುರ, ವರವು, ಹೊಸದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಲ್ಲೋಡು, ಅರಳೀಕಟ್ಟೆ, ಮಾಡದಕೆರೆ, ಗರಗ, ಬೆಲಗೂರು, ಶ್ರೀರಾಂಪುರ ಗ್ರಾಮಗಳಿಗೆ ಅಭಿವೃದ್ಧಿ ಭಾಗ್ಯ ಒಲಿದು ಬಂದಿದೆ.

Advertisement

ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಹೆಚ್ಚಾಗಿ ವಾಸಿಸುವ ಗ್ರಾಮಗಳ ಆಯ್ಕೆಗೆ ಒತ್ತು ನೀಡಲಾಗಿದೆ. ಇದುವರೆಗೆ ಸರ್ಕಾರದ ಯಾವುದೇ ಯೋಜನೆಗೆ ಆಯ್ಕೆಯಾಗಿರದ ಗ್ರಾಮವನ್ನು ಮಾತ್ರ ಮುಖ್ಯಮಂತ್ರಿ ವಿಕಾಸ ಯೋಜನೆಗೆ ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜಿಪಂ ಸಿಇಒ ಅರ್ಹ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ ಶಾಸಕರ ಒಪ್ಪಿಗೆ ಪಡೆದ ನಂತರವೇ ಅರ್ಹ ಗ್ರಾಮಗಳ ಆಯ್ಕೆ ಮಾಡಲಾಗಿದೆ. ರಸ್ತೆ, ಚರಂಡಿ ಮತ್ತಿತರ ಕಾಮಗಾರಿ ಕೈಗೊಂಡು ಅಭಿವೃದ್ಧಿ ಮಾಡುವಂತೆ ತಿಳಿಸಲಾಗಿದೆ.

ಸತತ ಬರಕ್ಕೆ ತುತ್ತಾಗುತ್ತಲೇ ಇರುವ ಜಿಲ್ಲೆಯ ಮೇಲೆ ರಾಜ್ಯ ಸರ್ಕಾರ ಕೃಪೆ ತೋರಿದೆ. ಬರದ ಬವಣೆಯಿಂದ ಬಳಲಿ ಬೆಂಡಾದವರ ಬದುಕು ಈ ಮೂಲಕವಾದರೂ ಸುಧಾರಣೆಯಾಗಲಿ ಎಂಬುದು ಜಿಲ್ಲೆಯ ಜನರ ಅಪೇಕ್ಷೆ.

ಜಿಲ್ಲೆಯ ಆರು ತಾಲೂಕುಗಳಿಂದ ಒಟ್ಟು 31 ಗ್ರಾಮಗಳನ್ನು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಗೆ ಆಯ್ಕೆ ಮಾಡಲಾಗಿದೆ. ಪ್ರತಿ ಗ್ರಾಮಕ್ಕೆ ತಲಾ ಒಂದು ಕೋಟಿ ರೂ. ಅನುದಾನ ಸಿಗಲಿದೆ. ಶೀಘ್ರದಲ್ಲೇ ಆ ಗ್ರಾಮಗಳಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ.
•ಪಿ.ಎನ್‌. ರವೀಂದ್ರ, ಜಿಪಂ ಸಿಇಒ.

ಈಗಾಗಲೇ ಆಯ್ಕೆಯಾಗಿರುವ 31 ಗ್ರಾಮಗಳ ಪೈಕಿ ಕೆಲವು ಗ್ರಾಮಗಳಲ್ಲಿ ಎಸ್ಸಿಪಿ-ಟಿಎಸ್ಪಿ ಅನುದಾನ ಬಳಕೆಗೂ ಅವಕಾಶ ಕಲ್ಪಿಸಲಾಗಿದೆ. ಆ ಪೈಕಿ ಮಾಡದಕೆರೆ, ಗರಗ, ಹೊಸಗುಡ್ಡ, ಕುಬೇರನಗರ, ಆದಿವಾಲ, ಚಿಕ್ಕಂದವಾಡಿ, ರಾಮಗಿರಿ, ಗೂಳಯ್ಯನಹಟ್ಟಿ, ಮಠದ ಕುರುಬರಹಟ್ಟಿ, ಗುತ್ತಿನಾಡು, ಹುಣಸೇಕಟ್ಟೆ ಗೊಲ್ಲರಹಟ್ಟಿ ಗ್ರಾಮಗಳನ್ನು ಎಸ್ಸಿಪಿ, ಟಿಎಸ್ಪಿ ಯೋಜನೆ ಅಡಿ ಅಭಿವೃದ್ಧಿಪಡಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next