Advertisement

“ಉದಯವಾಣಿ’ಬೆಂಗಳೂರು ಆವೃತ್ತಿಗೆ ಮೂವತ್ತರ ಸಂಭ್ರಮ

11:10 PM Jan 03, 2022 | Team Udayavani |

ಬೆಂಗಳೂರು: ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋ ಗಗಳಿಗೆ ಹೆಸರಾಗಿರುವ ಜನಮನದ ಜೀವನಾಡಿ “ಉದಯವಾಣಿ’ ಬೆಂಗಳೂರು ಕಚೇರಿಯಲ್ಲಿ ಸೋಮವಾರ ಹಬ್ಬದ ಸಂಭ್ರಮ.

Advertisement

ಐವತ್ತು ವಸಂತ ಪೂರೈಸಿ ಸುವರ್ಣ ಮಹೋತ್ಸವದಲ್ಲಿರುವ “ಉದಯವಾಣಿ’ಯ ಬೆಂಗಳೂರು ಆವೃತ್ತಿ ಪ್ರಾರಂಭಗೊಂಡು ಮೂವತ್ತು ವರ್ಷವಾಗಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ| ಪಿ.ಎಸ್‌. ಹರ್ಷ ಅವರು ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ನ‌ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿನೋದ್‌ ಕುಮಾರ್‌ ಜತೆಗೂಡಿ ಜ್ಯೋತಿ ಬೆಳಗಿಸಿದರು. ಜತೆಗೆ, 30ರ ಸಂಭ್ರಮದ ಕೇಕ್‌ ಕತ್ತರಿಸಿದರು.

ಬಿಡಿಸಲಾಗದ ಕೊಂಡಿ
ಡಾ| ಪಿ.ಎಸ್‌. ಹರ್ಷ ಮಾತನಾಡಿ, ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ರೀತಿಯ ಛಾಪು ಮೂಡಿಸಿರುವ “ಉದಯವಾಣಿ’ ಪತ್ರಿಕೆ ಕನ್ನಡಿಗರ ಮನದಲ್ಲಿ ಬಿಡಿಸಲಾಗದ ಕೊಂಡಿಯಂತಿದೆ. ಕನ್ನಡ ಪತ್ರಿಕೋದ್ಯಮದಲ್ಲಿ “ಉದಯವಾಣಿ’ ಇದೀಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದು ಖುಷಿ ಪಡುವ ಸಂಗತಿಯಾಗಿದೆ. ಮಣಿಪಾಲ್‌ ಸಮೂಹ ಸಂಸ್ಥೆ ಗಟ್ಟಿಯಾದ ನೈತಿಕ ನೆಲೆಯಲ್ಲಿ ಕಟ್ಟಲಾದ ಸಂಸ್ಥೆಯಾಗಿದೆ ಎಂದು ಹೇಳಿದರು.

ವಿಶ್ವಾಸಾರ್ಹತೆ ಉಳಿಸಿಕೊಂಡಿದೆ
ಸಿನೆಮಾ ಸುದ್ದಿಗಳು ಎಂದರೆ ಅದು “ಉದಯವಾಣಿ’ ಎಂಬ ರೀತಿಯಲ್ಲಿ ಛಾಪು ಮೂಡಿಸಿದೆ. ಅಭಿವೃದ್ಧಿಪರ, ಜನಪರ, ಸಮಾಜಮುಖಿ, ಮಾನವೀಯ ಮೌಲ್ಯಗಳ ವರದಿಗಳ ವಿಚಾರದಲ್ಲಿ “ಉದಯವಾಣಿ’ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದು ಹರ್ಷ ತಿಳಿಸಿದರು.

Advertisement

ಮಂಗಳೂರಿನಲ್ಲಿ ನಾನು ಕಾರ್ಯ ನಿರ್ವಹಿಸುತ್ತಿರುವ ವೇಳೆ ಬೆಳಗ್ಗೆ ಎದ್ದ ತತ್‌ಕ್ಷಣ “ಉದಯವಾಣಿ’ ಪತ್ರಿಕೆೆ ಓದುತ್ತಿದ್ದೆ. ಈ ಪತ್ರಿಕೆ ಓದಿ ಮುಂದಿನ ಕೆಲಸಗಳಿಗೆ ಅಣಿಯಾಗುತ್ತಿದ್ದೆ. ಕರಾವಳಿ ಭಾಗದಲ್ಲಂತೂ ಪತ್ರಿಕೆ ಜನರ ಜೀವನಾಡಿಯಾಗಿರುವ ಜತೆಗೆ ರಾಜ್ಯವ್ಯಾಪಿ ಅದೇ ವಿಶ್ವಾಸರ್ಹತೆ ಯನ್ನು ಉಳಿಸಿಕೊಂಡಿದೆ ಎಂದು ಹರ್ಷ ಅವರು ಹೇಳಿದರು.

ಸವಾಲು ಎದುರಿಸಿದ್ದೇವೆ- ವಿನೋದ್‌ ಕುಮಾರ್‌
ವಿನೋದ್‌ ಕುಮಾರ್‌ ಅವರು ಮಾತನಾಡಿ, ಐವತ್ತು ವರ್ಷದ ಹಿಂದೆ ಕರಾವಳಿ ಭಾಗದಲ್ಲಿ ಪತ್ರಿಕೆಯೇ ಇಲ್ಲದ ಸಂದರ್ಭ ಮೋಹನ್‌ದಾಸ್‌ ಪೈ ಹಾಗೂ ಸತೀಶ್‌ ಪೈ ಅವರು “ಉದಯವಾಣಿ’ ಆರಂಭಿಸಿದ್ದರು. 1993ರಲ್ಲಿ ಬೆಂಗಳೂರು ಆವೃತ್ತಿ ಆರಂಭಿಸಲಾಯಿತು. ಬೆಂಗಳೂರು ಆವೃತ್ತಿಗೆ ಇದೀಗ ಮೂವತ್ತರ ಸಂಭ್ರಮ. ಈ 3 ದಶಕಗಳಲ್ಲಿ ಪತ್ರಿಕೆ ಹಲವು ರೀತಿಯ ಸವಾಲುಗಳನ್ನು ಮೆಟ್ಟಿನಿಂತಿದೆ ಎಂದರು.

ಮೌಲ್ವಿಕ ವಿಚಾರಣೆಗಳಿಗೆ ಹೆಚ್ಚಿನ ಮನ್ನಣೆ ನೀಡುತ್ತಾ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಾ ಜನ ಮಾನಸದಲ್ಲಿ ನೆಲೆ ನಿಂತಿದೆ. ಕರಾವಳಿ ಭಾಗದಲ್ಲಿ “ಉದಯವಾಣಿ’ ಜನರ ಜೀವನಾಡಿಯಾಗಿ ಬೆಳೆದು ನಿಂತಿದೆ ಎಂದು ಹೇಳಿದರು.

“ಉದಯವಾಣಿ’ ಹುಬ್ಬಳ್ಳಿ ಆವೃತ್ತಿಯ ಸಂಪಾದಕ ವೆಂಕಟೇಶ ಪ್ರಭು, ಬೆಂಗಳೂರು ಆವೃತ್ತಿಯ ಹಂಗಾಮಿ ಸಂಪಾದಕ ಬಿ.ಕೆ. ಗಣೇಶ್‌, ಮಾರುಕಟ್ಟೆ ವಿಭಾಗದ ಡಿಜಿಎಂ ಸತೀಶ್‌ ಶಣೈ, ಉಪ ಮುಖ್ಯ ವರದಿಗಾರ ಎಸ್‌. ಲಕ್ಷ್ಮೀನಾರಾಯಣ, ಮಾರುಕಟ್ಟೆ ವ್ಯವಸ್ಥಾಪಕ ಬಿ.ಕೆ. ಕೃಷ್ಣಪ್ಪ ಹಾಗೂ ಸಿಬಂದಿ 30ರ ಸಂಭ್ರಮಕ್ಕೆ ಸಾಕ್ಷಿಯಾದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next