Advertisement

30 ಸೇವೆ ಗ್ರಾಪಂಗೆ ವರ್ಗಾವಣೆ: ಸಿಎಂ

06:17 PM Dec 07, 2021 | Team Udayavani |

ಹಾವೇರಿ: ಗ್ರಾಮಗಳ ಸಶಕ್ತೀಕರಣ ಹಾಗೂ ರೈತರ ಸಬಲೀಕರಣಕ್ಕಾಗಿ ಬಿಜೆಪಿ ಸರ್ಕಾರ ನಿರಂತರ ಕೆಲಸ ಮಾಡುತ್ತಿದ್ದು, ಬರುವ ದಿನಗಳಲ್ಲಿ 30 ಸೇವೆಗಳು ಗ್ರಾಪಂಗೆ ವರ್ಗಾವಣೆ ಮಾಡಿ ಇಂಟರ್‌ ನೆಟ್‌ನಲ್ಲಿ ಎಲ್ಲ ಸೇವೆಗಳನ್ನು ಗ್ರಾಪಂಗಳಿಗೆ ಕೊಡುವ ಕೆಲಸ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ನಗರದಲ್ಲಿ ಸೋಮವಾರ ನಡೆದ ವಿಧಾನ ಪರಿಷತ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ಪ್ರದೀಪ್‌ ಶೆಟ್ಟರ ಪರ ಮತಯಾಚಿಸಿ ಅವರು ಮಾತನಾಡಿದರು. ರೈತರ ಮಕ್ಕಳು ಮುಖ್ಯವಾಹಿನಿಗೆ ಬರಲು ವಿದ್ಯಾನಿಧಿ , ವಿವಿಧ ಸಹಾಯಧನ ಹೆಚ್ಚಳ ಮಾಡಿದ್ದು, ಬಡವರ ಪರ, ರೈತರ ಪರ ಸರ್ಕಾರವಿದೆ ಎನ್ನಲು ಇದೇ ಸಾಕ್ಷಿಯಾಗಿದೆ.

5 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದೇವೆ. ದೊಡ್ಡ ಗ್ರಾಪಂಗಳಿಗೆ 50ಕ್ಕಿಂತ ಹೆಚ್ಚು, ಮಧ್ಯಮ ಪಂಚಾಯಿತಿಗಳಿಗೆ 40, ಸಣ್ಣ ಪಂಚಾಯಿತಿಗಳಿಗೆ 30 ಮನೆಗಳನ್ನು ನೀಡುವ ಆದೇಶ ಮಾಡಲಾಗಿದೆ. ಬರುವ ದಿನಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಒಂದೂವರೆ ವರ್ಷಗಳಲ್ಲಿ 5 ಲಕ್ಷ ಮನೆ ಪೂರ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಮೆಡಿಕಲ್‌ ಕಾಲೇಜಿನ ಕೆಲಸ ಈಗಾಗಲೇ ನಡೆಯುತ್ತಿದ್ದು, ಒಂದು ವರ್ಷದಲ್ಲಿ ಮೊದಲ ಹಂತದ ಕಟ್ಟಡ ಉದ್ಘಾಟನೆ ಮಾಡುತ್ತೇವೆ. ಪ್ರತ್ಯೇಕ ಹಾಲು ಒಕ್ಕೂಟ ಮಾಡುತ್ತೇವೆ ಎಂದು ಭರವಸೆ ನೀಡಿದ್ದೆ. ವರ್ಷದೊಳಗೆ ಒಕ್ಕೂಟ ಕಾರ್ಯಗತಗೊಳಿಸಲಾಗುವುದು. ಹಾವೇರಿಯಲ್ಲಿ ಒಂದು ಸಾವಿರ ಎಕರೆ ಜಾಗದಲ್ಲಿ ಕೈಗಾರಿಕಾ ಟೌನ್‌ಶಿಪ್‌ ಮಾಡಲು  ಕ್ರಮ ಕೈಗೊಳ್ಳಲಾಗಿದೆ. ವಿಧಾನಸಭೆಯಲ್ಲಿ ಬಹುಮತ ಇರುವ ರೀತಿಯಲ್ಲಿ ವಿಧಾನ ಪರಿಷತ್ತಿನಲ್ಲೂ ಬಹುಮತ ಬರುವಂತೆ ಮಾಡಬೇಕು ಎಂದರು.

ಮಾಜಿ ಸಿಎಂ ಜಗದೀಶ ಶೆಟ್ಟರ ಮಾತನಾಡಿ, ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ 18ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿ ಸಿ ವಿಧಾನ ಪರಿಷತ್‌ನಲ್ಲಿ ಸ್ಪಷ್ಟ ಬಹುಮತ ಪಡೆಯುವ ವಿಶ್ವಾಸವಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದು ನಮಗೆ ಮತ್ತೂಷ್ಟು ಶಕ್ತಿ ನೀಡಿದೆ ಎಂದು ಹೇಳಿದರು.

Advertisement

ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿದರು. ಶಾಸಕ ನೆಹರು ಓಲೇಕಾರ, ಅಭ್ಯರ್ಥಿ ಪ್ರದೀಪ ಶೆಟ್ಟರ, ಮಾಜಿ ಶಾಸಕ ಶಿವರಾಜ ಸಜ್ಜನರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ ಇನ್ನಿತರರಿದ್ದರು.

ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, 12 ಕ್ಷೇತ್ರಗಳಲ್ಲಿ ಗೆಲುವು ಸಾ ಧಿಸಿದರೆ ಮೇಲ್ಮನೆಯಲ್ಲಿ ಬಹುಮತ ಬರಲಿದೆ. ಆಗ ಮೇಲ್ಮನೆಯಲ್ಲಿ ಒಳ್ಳೆಯ ಮಸೂದೆಗಳನ್ನು ತೆಗೆದುಕೊಂಡು ಬಂದರೆ ಪಾಸ್‌ ಮಾಡಿಕೊಳ್ಳಲು ಅನುಕೂಲ ಆಗಲಿದೆ. ಜನಪರ ಮಸೂದೆಗಳಿಗೆ ವಿಪಕ್ಷಗಳು ಅಡ್ಡಪಡಿಸುವುದು ತಪ್ಪಲಿದೆ.
ಶಿವಕುಮಾರ ಉದಾಸಿ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next