ವಿಧಾನಸಭೆ: ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಶೇ. 30ರಷ್ಟು ಮೊತ್ತವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೀಸಲಿಡಲು ತೀರ್ಮಾನಿಸಲಾಗಿದ್ದು, ಶೀಘ್ರವೇ ಸುತ್ತೋಲೆ ಹೊರಡಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.
ಅಲ್ಲದೆ, ಇದರೊಂದಿಗೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನೂ ಬಳಸಿ (ಸಿಎಸ್‌ಆರ್ ಫಂಡ್) ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸಲು ತೀರ್ಮಾನಿಸಲಾಗಿದೆ. ಆ ಮೂಲಕ ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಶಾಲಾ ಕೊಠಡಿಗಳನ್ನು ದುರಸ್ತಿ ಮಾಡುವುದು ಅಥವಾ ಶಿಥಿಲ ಕೊಠಡಿಗಳನ್ನು ತೆರವುಗೊಳಿಸಿ ಹೊಸ ಕೊಠಡಿಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬುಧವಾರ ಬಿಜೆಪಿಯ ಐಹೊಳೆ ಡಿ. ಮಹಾಲಿಂಗಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಶಾಸಕರ ನಿಧಿಯನ್ನು ಶಾಲೆಗಳಿಗೆ ಬಳಸಿಕೊಳ್ಳಲು ಅವಕಾಶವಿಲ್ಲ. ಹೀಗಾಗಿ ಈ ನಿಧಿಯ ಶೇ. 30ರಷ್ಟನ್ನು ಶಾಲೆಗಳ ಅಭಿವೃದ್ಧಿಗೆ ಬಳಸಿಕೊಳ್ಳುವ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಅವರೂ ಒಪ್ಪಿಗೆ ನೀಡಿದ್ದಾರೆ. ಶೀಘ್ರವೇ ಈ ಕುರಿತು ಸುತ್ತೋಲೆ ಹೊರಡಿಸಿ ಈ ವರ್ಷದಿಂದಲೇ ಕೆಲಸ ಆರಂಭಿಸಲಾಗುವುದು ಎಂದರು.
ರಾಜ್ಯದಲ್ಲಿ 43 ಸಾವಿರ ಪ್ರಾಥಮಿಕ ಶಾಲೆಗಳು ಮತ್ತು 5 ಸಾವಿರ ಪ್ರೌಢಶಾಲೆಗಳಿವೆ. ಈ ಶಾಲೆಗಳಲ್ಲಿ ಶಿಥಿಲಗೊಂಡಿರುವ 36 ಸಾವಿರ ಶಾಲಾ ಕೊಠಡಿಗಳನ್ನು ಕೆಡವಿ ಹೊಸ ಕೊಠಡಿಗಳ ನಿರ್ಮಾಣ, 31 ಸಾವಿರ ಕೊಠಡಿಗಳ ದುರಸ್ತಿ ಹಾಗೂ 19 ಸಾವಿರ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಯೋಚಿಸಲಾಗಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಇದಕ್ಕೆ ಹೆಚ್ಚಿನ ಹಣ ಬೇಕಾಗಿರುವುದರಿಂದ ಇಲಾಖೆಯ ಅನುದಾನದೊಂದಿಗೆ ಶಾಸಕರ ನಿಧಿ ಹಾಗೂ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನೂ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಪ್ರಸ್ತುತ ರಾಜ್ಯದಲ್ಲಿ 72 ಆದರ್ಶ ಸರ್ಕಾರಿ ಶಾಲೆಗಳಿದ್ದು, ಶೇ. 92.7ರಷ್ಟು ಫಲಿತಾಂಶ ಬಂದಿದೆ. ಈ ಶಾಲೆಗಳ ಪ್ರವೇಶಕ್ಕೆ ಭಾರೀ ಬೇಡಿಕೆ ಇದೆ. ಹೀಗಾಗಿ ಇದೇ ಮಾದರಿಯಲ್ಲಿ ಶಾಸಕರ ನಿಧಿ ಬಳಸಿಕೊಂಡು ತಾಲೂಕು ಅಥವಾ ಹೋಬಳಿಗೊಂದು ಶಾಲೆಗಳನ್ನು ಅಗತ್ಯ ಮೂಲ ಸೌಕರ್ಯ ಮತ್ತು ಶೈಕ್ಷಣಿಕ ಪ್ರಗತಿಯೊಂದಿಗೆ ಸ್ಥಾಪಿಸುವ ಉದ್ದೇಶವೂ ಇದೆ. ಇದರ ಜತೆಗೆ ಶಾಸಕರ ಮಾದರಿ ಶಾಲೆಯನ್ನು ಒಪ್ಪಂದದ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದರ ಜತೆಗೆ ಇನ್ನಷ್ಟು ಮಾದರಿ ಶಾಲೆಗಳನ್ನು ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ನಿರ್ವಹಣೆ ಸಮಸ್ಯೆ: ಈ ಹಿಂದೆ ಸರ್ವ ಶಿಕ್ಷಣ ಅಭಿಯಾನದಲ್ಲಿ 22 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ನಂತರ ಈ ಕಾರ್ಯಕ್ರಮ ಸ್ಥಗಿತಗೊಂಡು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಆರಂಭವಾಯಿತಾದರೂ ಇದರಡಿ ಕೇಂದ್ರದಿಂದ ನಿರೀಕ್ಷಿತ ಸಹಾಯ ಸಿಕ್ಕಿಲ್ಲ. ಹೀಗಾಗಿ ಶಾಲಾ ಕೊಠಡಿಗಳ ನಿರ್ವಹಣೆ ಸಮಸ್ಯೆಯಾಗಿದೆ ಎಂದು ಹೇಳಿದರು.
ಜೂ. 15ರೊಳಗೆ ಅತಿಥಿ ಶಿಕ್ಷಕರ ನೇಮಕ
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 14,729 ಶಿಕ್ಷಕರ ಕೊರತೆ ಇದೆ. ಈ ಸಮಸ್ಯೆ ಬಗೆಹರಿಸಲು ಕಳೆದ ವರ್ಷ ಆದ್ಯತೆ ಮೇಲೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿತ್ತು. ಆದರೆ, ಅದು ವಿಳಂಬವಾಗಿದ್ದರಿಂದ ಕೆಲವೆಡೆ ಸಮಸ್ಯೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜೂ. 15ರೊಳಗೆ ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ಮುಗಿಸಿ ಆರಂಭದಿಂದಲೇ ಪಠ್ಯ ಚಟುವಟಿಕೆ ಸುಗಮವಾಗಿ ನಡೆಸಲು ಅವಕಾಶ ಮಾಡಿಕೊಡಲಾಗುವುದು ಎಂದು ಸಚಿವ ತನ್ವೀರ್ ಸೇಠ್ ತಿಳಿಸಿದರು.