ಶ್ರೀನಗರ: ಪ್ರಯಾಣಿಕರನ್ನು ಹೊತ್ತ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ 300 ಅಡಿ ಆಳದ ಕಂದಕಕ್ಕೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವತ್ತು ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಇಂದು ಬೆಳಿಗ್ಗೆ ದೋಡಾ ಜಿಲ್ಲೆಯ ಅಸ್ಸಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
JK02CN-6555 ನೋಂದಣಿ ಸಂಖ್ಯೆ ಹೊಂದಿರುವ ಬಸ್ಸಿನಲ್ಲಿ ಸುಮಾರು 40 ಮಂದಿ ಪ್ರಯಾಣಿಕರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಬಸ್ಸು ಬಟೋಟ್-ಕಿಶ್ತ್ವಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರುಂಗಲ್-ಅಸ್ಸಾರ್ ಬಳಿ ಸಂಚರಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸುಮಾರು 300 ಅಡಿ ಆಳದ ಕಂದಕಕ್ಕೆ ಬಿದ್ದು ಅವಘಡ ಸಂಭವಿಸಿದೆ.
ಘಟನೆಯಲ್ಲಿ ಮೂವತ್ತು ಮಂದಿ ಮೃತಪಟ್ಟಿದ್ದು ಹತ್ತು ಮಂದಿ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ದೋಡಾ ಜಿಲ್ಲೆಯಲ್ಲಿ ಒಂದು ವಾರದಲ್ಲಿ ನಡೆದ ಎರಡನೇ ರಸ್ತೆ ಅಪಘಾತ ಇದಾಗಿದೆ.
ಇದನ್ನೂ ಓದಿ: World Cup 2023: ಇಂಡೋ – ಕಿವೀಸ್ ಸೆಮಿ ಕದನ; ಟಾಸ್ ಗೆದ್ದ ಭಾರತ