ಲಕ್ನೋ: ಅದೃಷ್ಟ ಗಟ್ಟಿಯಾಗಿದ್ದರೆ ಸಾವಿನ ದವಡೆಯಿಂದ ಬೇಕಾದರೂ ಬದುಕಿಬರಬಹುದು. ಈ ಮಾತಿಗೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಫರೂಕಾಬಾದ್ ನಲ್ಲಿ ಒಂದು ಘಟನೆ ನಡೆದಿದೆ.
ಅಕ್ಷಯ್ ಎಂಬ ಮೂರು ವರ್ಷದ ಮಗು ತನ್ನ ಮನೆಯ ಅಂಗಳದಲ್ಲಿ ಆಡುತ್ತಿದ್ದ. ಈ ವೇಳೆ ಪೊದೆವೊಂದರಿಂದ ಪುಟ್ಟ ಹಾವೊಂದು ಅಂಗಳಕ್ಕೆ ಬಂದಿದೆ. ಇದನ್ನು ನೋಡಿದ ಮಗು ಹಾವನ್ನು ಕೈಯಲ್ಲಿ ಹಿಡಿದು, ಅದನ್ನು ಬಾಯಿಯೊಳಗೆ ಹಾಕಿ ಜಗಿಯಲು ಶುರು ಮಾಡಿದ್ದಾನೆ. ಪರಿಣಾಮ ಹಾವು ಸತ್ತು ಹೋಗಿದೆ. ಇದಾದ ಕೆಲ ಸಮಯದ ಬಳಿಕ ಅಕ್ಷಯ್ ಕಿರುಚಾಡಲು ಶುರು ಮಾಡಿದ್ದಾನೆ. ಕೂಡಲೇ ಮಗುವಿನ ಅಜ್ಜಿ ಬಂದು ಬಾಯಿಯೊಳಗಿದ್ದ ಹಾವನ್ನು ಹೊರಕ್ಕೆ ತೆಗೆದಿದ್ದಾರೆ.
ಮನೆಯವರು ಹೆದರಿ ಮಗುವನ್ನು ಕೂಡಲೇ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಮಗುವನ್ನು ಪರೀಕ್ಷೆ ಮಾಡಿದ್ದಾರೆ. ಮಗುವಿನ ಪ್ರಾಣಕ್ಕೆ ಏನು ಅಪಾಯವಿಲ್ಲದ ಕಾರಣ ಮಗುವನ್ನು ಮನೆಗೆ ಕಳುಹಿಸಿದ್ದಾರೆ.