Advertisement

ಮಂಜೇಶ್ವರ ತಾಲೂಕಿಗೆ 3 ವರುಷ; ಕಚೇರಿ ಹತ್ತಲು 40 ಮೆಟ್ಟಿಲು!

05:38 PM Mar 21, 2017 | Harsha Rao |

ಮಂಜೇಶ್ವರ: ಮಂಜೇಶ್ವರ ತಾಲೂಕು ಕಚೆೇರಿ ಪ್ರಾರಂಭಗೊಂಡು ಮಾ. 20ಕ್ಕೆ ಮೂರು ವರ್ಷ ಪೂರ್ಣಗೊಂಡಿದೆ. ಕಳೆದ ಯುಡಿಎಫ್‌ ಸರಕಾರ ಘೋಷಿಸಿದ ಮಂಜೇಶ್ವರ ತಾಲೂಕು ಪ್ರಾರಂಭದಲ್ಲಿ ಪ್ರಾದೇಶಿಕ ವಿವಾದಗಳಿಂದಾಗಿ ನಿತ್ಯ ಸುದ್ದಿಯಾಗಿತ್ತು. 

Advertisement

ತಾಲೂಕು ಕೇಂದ್ರವನ್ನು ಮಂಜೇಶ್ವರದಲ್ಲಿಯೇ ಪ್ರಾರಂಭಿಸಬೇಕೆಂಬ ನಾಗರಿಕರ ಹೋರಾಟದ ನಡುವೆಯೇ ತಾಲೂಕು ಕಚೇರಿ ಉಪ್ಪಳದ ಖಾಸಗೀ ಕಟ್ಟಡವೊಂದರ ಮೊದಲ ಮಹಡಿಯಲ್ಲಿ ತಾತ್ಕಾಲಿಕವೆಂಬಂತೆ ಪ್ರಾರಂಭಗೊಂಡಿತು. 
ಉದ್ಘಾಟನಾ ಸಮಾರಂಭವಿಲ್ಲದೇ ಸರಳ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡ ಕಚೇರಿ ಮೂಲ ಸೌಕರ್ಯಗಳಿಲ್ಲದೇ ನಿತ್ಯ ಸಮಸ್ಯೆಯ ಕೂಪವಾಗಿಯೇ ಮುಂದುವರಿದಿತ್ತು.  ಪ್ರಾರಂಭ ದಲ್ಲಿ ಸೂಕ್ತ ಸಿಬಂದಿಗಳಿಲ್ಲದೇ ಇಲ್ಲಗಳ ಆಗರವಾಗಿದ್ದ ತಾಲೂಕು ಕಚೇರಿ ಆ ಬಳಿಕ ಸಿಬಂದಿಗಳ ನೇಮಕಾತಿಯಾದಾಗ ಸಿಬಂದಿಗಳಿಗೇ ಸಮ ರ್ಪಕ ಸೌಕರ್ಯಗಳಿಲ್ಲದೇ ಆಗಿದ್ದು ಮಾತ್ರ  ವಿಪರ್ಯಾಸ.

ಮಂಜೇಶ್ವರ, ವರ್ಕಾಡಿ, ಮೀಂಜ, ಮಂಗಲ್ಪಾಡಿ, ಪೈವಳಿಕೆ, ಪುತ್ತಿಗೆ, ಎಣ್ಮಕಜೆ, ಕುಂಬಳೆ ಗ್ರಾಮ ಪಂಚಾಯತ್‌ಗಳನ್ನೊಳಗೊಂಡ ಮಂಜೇಶ್ವರ ತಾಲೂಕು ಕಚೇರಿಗೆ  ಸೂಕ್ತ ಹಾಗೂ ಕೇಂದ್ರ ಸ್ಥಳವಾಗಿ ಉಪ್ಪಳ ಗೋಚರಿಸಿದ ಹಿನ್ನೆಲೆಯಲ್ಲಿ  ಹಾಗೂ ಕೇರಳ ಉಚ್ಚ ನ್ಯಾಯಾಲಯದ ಆದೇಶದಂತೆ ಉಪ್ಪಳದಲ್ಲಿ ಪ್ರಾರಂಭಿಸಲಾಯಿತು ಎಂಬುದು ಅಧಿಕಾರಿಗಳ, ಜನಪ್ರತಿನಿಧಿಗಳ ಹೇಳಿಕೆಯಾಗಿದೆ.

2ನೇ ಮಹಡಿಯಿಂದ 3ನೇ ಮಹಡಿಗೆ ಭಡ್ತಿ
ತಾಲೂಕು ಕೇಂದ್ರ ವಿವಾದಗಳ ನಡುವೆಯೇ ಉಪ್ಪಳದ ಸಿಟಿ ಸೆಂಟರ್‌ ಎಂಬ ಖಾಸಗೀ ಕಮರ್ಶಿ ಯಲ್‌ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ತಾತ್ಕಾಲಿಕವಾಗಿ ಪ್ರಾರಂಭಗೊಂಡ ತಾಲೂಕು ಕಚೇರಿಗೆ ವೃದ್ಧರು, ಮಹಿಳೆಯರು ಹಾಗೂ ವಿಕಲಾಂಗರು ಹತ್ತಿ ಹೋಗುವುದೇ ಕಷ್ಟಸಾಧ್ಯ ವಾಯಿತು. ಸೂಕ್ತ ಲಿಫ್ಟ್‌ ಸೌಲಭ್ಯವಿಲ್ಲದೇ ರೋಗಿಗಳು, ವೃದ್ಧರು, ವಿಕಲಚೇತನರು ಮೆಟ್ಟಿಲು ಹತ್ತಿ ಹೋಗಲು ಸಾಧ್ಯವಾಗದೇ ಹಿಡಿಶಾಪ ಹಾಕುವ ದೃಶ್ಯ ನಿತ್ಯ ಕಂಡು ಬಂದುವು.

ಜನರು 40 ಮೆಟ್ಟಿಲು ಹತ್ತಬೇಕು
ಈ ಎಲ್ಲ ಸಮಸ್ಯೆಗಳ ನಡುವೆಯೇ  ಎರಡು ತಿಂಗಳ ಹಿಂದೆ ತಾಲೂಕು ಕಚೇರಿಯನ್ನು ಅದೇ ಕಟ್ಟಡದ ಮೊದಲ ಮಹಡಿಯಿಂದ ದ್ವಿತೀಯ ಮಹಡಿಗೆ ವರ್ಗಾಯಿಸಿದ್ದು ನಾಗರಿಕರು ತೀವ್ರ ಆಕ್ರೋಷಕ್ಕೊಳಗಾಗಿದ್ದಾರೆ. ಇದೀಗ ಮಂಜೇಶ್ವರ ತಾಲೂಕು ಕಚೇರಿಗೆ ಜನಸಾಮಾನ್ಯರು ತಲುಪಬೇಕಾದರೆ ಬರೋಬ್ಬರಿ 40 ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಾಗಿದೆ. 

Advertisement

ರೋಗಿಗಳು, ಅಶಕ್ತರು, ವಿಕಲಚೇತನರು, ವೃದ್ಧರು, ಮಹಿಳೆಯರು ಕಚೇರಿಗೆ ಹತ್ತಿ ಹೋಗಲು ಸಾಧ್ಯವಾಗದೇ ಪರದಾಡುವ ಸ್ಥಿತಿ ಇದ್ದರೂ ಸೂಕ್ತ ವ್ಯವಸ್ಥೆಯನ್ನು ಮಾಡುವಲ್ಲಿ ಕಂದಾಯ ಇಲಾಖೆ ವಿಫಲಗೊಂಡಿದೆ. ಸಿಬಂದಿಗಳು ಕೂಡಾ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. 

ಲಿಫ್ಟ್‌ ವ್ಯವಸ್ಥೆಯನ್ನು ಅಳವಡಿಸಿದ್ದರೆ ಇದಕ್ಕೆ ತಾತ್ಕಾಲಿಕ ಪರಿಹಾರ ಕಾಣಬಹುದಾಗಿತ್ತು. ಆದರೆ 3 ವರ್ಷಗಳಲ್ಲಿ ಕಚೇರಿಯ ಬಾಡಿಗೆಯನ್ನು  ಕಟ್ಟಡದ ಮಾಲಕನಿಗೆ ಕಂದಾಯ ಇಲಾಖೆ  ನೀಡಲಿಲ್ಲವೆಂಬುದು  ನಿಜಕ್ಕೂ ದುರಂತವೇ ಸರಿ.

ಮೂಲ ಸೌಕರ್ಯಗಳಿಲ್ಲ: ಉಪ್ಪಳದಲ್ಲಿ ಕಾರ್ಯಾ ಚರಿಸುತ್ತಿರುವ ತಾಲೂಕು ಕಚೆೇರಿಯಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ಜನಸಾಮಾನ್ಯರಿಗೆ ಕುಳಿತು ಕೊಳ್ಳಲು ಆಸನದ ವ್ಯವಸ್ಥೆಯಿಲ್ಲ. ವಿದ್ಯುತ್‌ ಹೋದರೆ ಇಡೀ ಕಚೇರಿ ಕಗ್ಗತ್ತಲಿನಲ್ಲಿ ಮುಳುಗು ತ್ತದೆ.  ಜನರೇಟರ್‌ ವ್ಯವಸ್ಥೆಯಿಲ್ಲ.  ನೀರಿನ ಸಮಸ್ಯೆಯಿಂ ದಲೂ ಈ ಕಚೇರಿ ಹೊರತಾಗಿಲ್ಲ. ಜನಸಾಮಾ ನ್ಯರಂತೆ  ಸಿಬಂದಿಗಳೂ ಇಲ್ಲಿ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ.

ತಾಲೂಕಿಗೆ ಸ್ವಂತ ಸ್ಥಳವಿಲ್ಲ
ತಾಲೂಕು  ಕಚೆೇರಿ ಪ್ರಾರಂಭಗೊಂಡ  ವರುಷ ಮೂರು ಕಳೆದರೂ ತಾಲೂಕಿಗೆ ಸ್ವಂತ ಸ್ಥಳವನ್ನು ಕಂಡು ಹಿಡಿಯಲು ಕಂದಾಯ ಇಲಾಖೆಗೆ ಸಾಧ್ಯವಾಗಿಲ್ಲ. ಉಪ್ಪಳ ಪಂಚಾಯತ್‌ ಕಚೇರಿ ಸಮೀಪ ಪ್ರಾರಂಭಿಸುವ ಇರಾದೆಯಿದ್ದರೂ ಅಲ್ಲಿ ಸ್ಥಳವಿವಾದ ಅಸ್ಥಿತ್ವದಲ್ಲಿರುವುದರಿಂದ ಸಾಧ್ಯ ವಾಗುತ್ತಿಲ್ಲ. ವಿಶಾಲವಾದ ವಿಸ್ತಿರ್ಣದ ಸ್ಥಳ ಅಗತ್ಯವಿರುವುದರಿಂದ ಈ ತನಕವೂ ಸೂಕ್ತ ಸ್ಥಳ ಕಂಡುಹಿಡಿಯಲು ಸಾಧ್ಯವಾಗಿಲ್ಲವೆಂದು ಕಂದಾಯ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದಾಗಿ ಕಳೆದ ಮೂರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಜನಸಾಮಾನ್ಯರ ಬಹು ನಿರೀಕ್ಷೆಯಾದ ಮಂಜೇಶ್ವರ ತಾಲೂಕು ಸಮಸ್ಯೆಗಳ ಆಗರವಾಗಿಯೇ ಉಳಿದಿದೆ. ರಾಜ್ಯದ ಕಂದಾಯ ಸಚಿವರಾದ ಇ. ಚಂದ್ರಶೇಖರನ್‌ ಕಾಸರಗೋಡು ಜಿಲ್ಲೆಯವರಾಗಿದ್ದೂ  ಮಂಜೇಶ್ವರ ತಾಲೂಕಿಗೆ ಕಾಯಕಲ್ಪ ಸಿಗದಿರುವುದು ಖೇದಕರ.

– ಹರ್ಷಾದ್‌ ವರ್ಕಾಡಿ

Advertisement

Udayavani is now on Telegram. Click here to join our channel and stay updated with the latest news.

Next