Advertisement

“ಬಂದರು ಅಧ್ಯಯನಕ್ಕೆ 3 ರಾಜ್ಯಗಳಿಗೆ ತಂಡ’

11:11 PM Sep 16, 2019 | Team Udayavani |

ಮಂಗಳೂರು: ಬಂದರು, ಒಳನಾಡು ಮತ್ತು ಮೀನುಗಾರಿಕೆ ಯೋಜನೆ ಅನುಷ್ಠಾನ ಅಧ್ಯಯನಕ್ಕೆ ರಾಜ್ಯದ ತಜ್ಞರ ತಂಡವನ್ನು ಶೀಘ್ರದಲ್ಲೇ ಗುಜರಾತ್‌, ತ.ನಾಡು ಮತ್ತು ಕೇರಳಕ್ಕೆ ಕಳುಹಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Advertisement

ಸೋಮವಾರ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು. ತಂಡದ ವರದಿ ಆಧಾರದಲ್ಲಿ ರಾಜ್ಯ ಕರಾವಳಿ ಅಭಿ ವೃದ್ಧಿಗೆ ಉದ್ದೇಶಿಸಲಾಗಿದೆ ಎಂದರು. ರಾಜ್ಯದಲ್ಲಿ ಮೆರಿಟೈಂ ಬೋರ್ಡ್‌ ಅಸ್ತಿತ್ವಕ್ಕೆ ಬಂದಿದ್ದು, ಶೀಘ್ರವೇ ಅಧ್ಯಕ್ಷರು, ಅಧಿಕಾರಿಗಳನ್ನು ನೇಮಿಸ ಲಾಗುವುದು. ಕೇಂದ್ರ ನೆರವು ಮತ್ತು ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ ಬಂದರುಗಳನ್ನು ಅಭಿವೃದ್ಧಿ ಪಡಿಸ ಲಾಗುವುದು ಎಂದರು.

ಬಂದರು ವಿಸ್ತರಣೆಗೆ ಹೆಚ್ಚುವರಿ ಅಗತ್ಯ
ಮಂಗಳೂರು ಮೀನುಗಾರಿಕೆ ಬಂದರಿನ 3ನೇ ಹಂತದ ವಿಸ್ತರಣೆ ಪೂರ್ಣಗೊಳಿಸಲು ಇನ್ನೂ 28 ಕೋ. ರೂ. ಅಗತ್ಯವಿದೆ ಎಂದು ಅಧಿಕಾರಿ ಗಳು ತಿಳಿಸಿದರು. 1 ಮತ್ತು 2ನೇ ಹಂತದ ಜೆಟ್ಟಿಯಲ್ಲಿ ಹೂಳು ತುಂಬಿ ದೋಣಿ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಈ ಕಾಮಗಾರಿ ತುರ್ತಾಗಿ ಆಗಬೇಕಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ತುರ್ತು ಕಾಮಗಾರಿಗಳಿಗೆ ಪ್ರಸ್ತಾಪನೆ ಸಲ್ಲಿಸಿ; ಅನುದಾನ ಬಿಡುಗಡೆಗೆ ಪ್ರಯತ್ನಿಸುವೆ ಎಂದರು.

ಬಂದರು ಇಲಾಖೆಯ ಸ.ಕಾ.ಪಾ. ಎಂಜಿನಿಯರ್‌ ಸುಜನ್‌ ರಾವ್‌ ಮಾತನಾಡಿ, ಸಾಗರಮಾಲಾ ಅಡಿ ಬೆಂಗ್ರೆಯಲ್ಲಿ 350 ಮೀ. ಉದ್ದದ ಬರ್ತ್‌ ನಿರ್ಮಾಣಕ್ಕೆ ಉದ್ದೇಶಿಸ ಲಾಗಿದೆ. ಒಟ್ಟು 65 ಕೋ. ರೂ.ಗಳಲ್ಲಿ 25 ಕೋ.ರೂ. ಕೇಂದ್ರ, 40 ಕೋ. ರೂ. ರಾಜ್ಯ ಸರಕಾರ ನೀಡಲಿದೆ. ಈಗಾಗಲೇ 25 ಕೋ. ರೂ. ಬಿಡುಗಡೆ ಆಗಿದೆ ಎಂದರು. ಬೆಂಗ್ರೆಯಲ್ಲಿ ಕೃತಕ ರೇವು ನಿರ್ಮಾಣಕ್ಕೆ 3.4 ಕೋ.ರೂ. ವೆಚ್ಚದ ಕಾಮಗಾರಿ ತಾಂತ್ರಿಕ ಮಂಜೂರಾತಿ ಹಂತದಲ್ಲಿದೆ. ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಿಸ ಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಶಾಸಕರಾದ ಸಂಜೀವ ಮಠಂದೂರು, ರಾಜೇಶ್‌ ನಾಯ್ಕ, ಡಿಸಿ ಸಿಂಧೂ ಬಿ. ರೂಪೇಶ್‌ ಉಪಸ್ಥಿತರಿದ್ದರು.

ಕುಕ್ಕೆ ಕ್ಷೇತ್ರ: ಪ್ರಾಧಿಕಾರಕ್ಕೆ ಒಲವು
ಅಪರ ಜಿಲ್ಲಾಧಿಕಾರಿ ರೂಪಾ ಮಾತನಾಡಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರಾಧಿಕಾರ ರಚಿಸುವುದು ಉತ್ತಮ. ಮುಖ್ಯಮಂತ್ರಿಯೇ ಅಧ್ಯಕ್ಷರಾಗಿದ್ದು, ಕೆಎಎಸ್‌ ದರ್ಜೆಯ ಅಧಿಕಾರಿಯನ್ನು ನೇಮಿಸಿದರೆ ಕಾಮಗಾರಿ ಅನುಷ್ಠಾನ ಸುಲಭವಾಗುತ್ತದೆ. ಹಣಕಾಸು ನಿರ್ವಹಣೆಯೂ ಸುಲಲಿತವಾಗುವುದು ಎಂದರು. ಈಗಾಗಲೇ ಆ ಚಿಂತನೆಯಿದ್ದು, ಮತ್ತೂಮ್ಮೆ ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿದರು.

Advertisement

ಸಣ್ಣ ದೇಗುಲಗಳಿಗೆ ಸಹಕಾರ; ಅವಕಾಶವಿಲ್ಲ!
ಮುಜರಾಯಿ ಇಲಾಖೆ ಅಧಿಕಾರಿಗಳು ಮಾತನಾಡಿ, ಆರ್ಥಿಕವಾಗಿ ಸದೃಢ ಮುಜರಾಯಿ ದೇವಾಲಯಗಳಿಂದ ಸಣ್ಣ ದೇವಾಲಯಗಳಿಗೆ ದೇಣಿಗೆ ಅಥವಾ ಸಂಘ-ಸಂಸ್ಥೆಗಳಿಗೆ ನೆರವಿನ ಬೇಡಿಕೆ ಹೆಚ್ಚುತ್ತಿದ್ದು, ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಜಿಲ್ಲಾಧಿಕಾರಿ ಅನುಮತಿ ಪಡೆದು ನೀಡಲಾಗುತ್ತಿದೆ. ಸರಕಾರವೇ ಸೂಕ್ತ ಮಾರ್ಗಸೂಚಿ ರಚಿಸಿದರೆ ಅನುಕೂಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next