Advertisement
ಪ್ರಕರಣದ ತನಿಖೆಗೆ ಪೊಲೀಸರಿಗೆ ಸೂಚನೆ ನೀಡಿದ್ದು, ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಮೂರು ವಿಶೇಷ ತಂಡ ರಚಿಸಲಾಗಿದೆ. ಆದಷ್ಟು ಬೇಗ ದುಷ್ಕರ್ಮಿಗಳನ್ನು ಪತ್ತೆ ಮಾಡಲಾಗುವುದು. ಈ ವಿಚಾರದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಗೌರಿ ಲಂಕೇಶ್ ಅವರು ರಕ್ಷಣೆ ಕೋರಿ ಪೊಲೀಸರಿಗೆ ಮನವಿ ಸಲ್ಲಿಸಿರಲಿಲ್ಲ. ಯಾರೇ ರಕ್ಷಣೆ ಕೋರಿದರೂ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಲಬುರ್ಗಿ ಹತ್ಯೆಗೆ ಮುನ್ನ ಪನ್ಸಾರೆ, ದಾಬೋಲ್ಕರ್ ಹತ್ಯೆ ನಡೆಯಿತು. ಪನ್ಸಾರೆ, ದಾಬೋಲ್ಕರ್ ಹತ್ಯೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಕಲಬುರ್ಗಿ ಹತ್ಯೆ ಸಿಐಡಿ ತನಿಖೆ ನಡೆಯುತ್ತಿದೆ. ಸಿಬಿಐ ಜತೆ ಸಂಪರ್ಕ ಸಾಧಿಸಲು ನಮ್ಮ ಸಿಐಡಿ ತಂಡಕ್ಕೂ ಸೂಚಿಸಲಾಗಿದೆ ಎಂದು ಹೇಳಿದರು.
ಹಂತಕರ ಪತ್ತೆಗಾಗಿ ಸಿಸಿಬಿ ಜಂಟಿ ಆಯುಕ್ತ ಸತೀಶ್ ಕುಮಾರ್, ಚಿಕ್ಕಪೇಟೆ ಹಾಗೂ ಕೆಂಗೇರಿ ಉಪವಿಭಾಗದ ಎಸಿಪಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ತನಿಖೆಯ ಬೆನ್ನತ್ತಿದ ತಂಡ ಗೌರಿ ಲಂಕೇಶ್ ಅವರ ನಿವಾಸದಲ್ಲಿದ್ದ ಎರಡು ಸಿಸಿಕ್ಯಾಮರಾಗಳು, ಸಮೀಪದ ಮನೆಗಳಲ್ಲಿ ಅಳವಡಿಸಲಾಗಿದ್ದ ಸಿಸಿಕ್ಯಾಮರಾ ಹಾಗೂ ಸುತ್ತಮುತ್ತಲ 10 ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾ ಫೂಟೇಜ್‌ಗಳನ್ನು ವಶಪಡಿಸಿಕೊಂಡಿದೆ. ಸಿಸಿಟಿವಿ ಫೂಟೇಜ್‌ನಲ್ಲಿ ಮೂವರು ದುಷ್ಕರ್ಮಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ದೃಶ್ಯಗಳು ಲಭ್ಯವಾಗಿದ್ದು, ಅವರ ರೇಖಾಚಿತ್ರಗಳನ್ನು ಬಿಡಿಸುವ ಕಾರ್ಯದಲ್ಲಿ ಪೊಲೀಸರು ಮಗ್ನರಾಗಿದ್ದಾರೆ. ಅಲ್ಲದೆ, ದುಷ್ಕರ್ಮಿಗಳಿದ್ದ ಬೈಕ್‌ನ ನೋಂದಣಿ ಸಂಖ್ಯೆ ಕೂಡ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಭೀಕರ ದೃಶ್ಯ ನೋಡಿದವರು ಅಸ್ವಸ್ಥೆ! : ಗೌರಿ ಲಂಕೇಶ್ ಮೇಲೆ ಗುಂಡಿನ ದಾಳಿ ನಡೆದ ಭೀಕರ ದೃಶ್ಯವನ್ನು ನೋಡಿದ ಎದುರುಗಡೆ ಮನೆಯ ಅಪಾರ್ಟ್‌ಮೆಂಟ್ ನಿವಾಸಿಯೊಬ್ಬರು ಅಸ್ವಸ್ಥರಾಗಿದ್ದಾರೆ.
Related Articles
ಸಾಮಾಜಿಕ, ವೈಚಾರಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಗೌರಿ ಲಂಕೇಶ್ ಅವರಿಗೆ ಜೀವ ಬೆದರಿಕೆಯಿತ್ತೆ ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಇದನ್ನು ಪುಷ್ಟೀಕರಿಸುವಂತೆ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರು ಹೇಳಿಕೆ ನೀಡಿದ್ದು, ಪೊಲೀಸರು ಆ ನಿಟ್ಟಿನಲ್ಲೂ ತನಿಖೆ ನಡೆಸುತ್ತಿದ್ದಾರೆ.
Advertisement
ಜನಪರವಾದ ಹೋರಾಟಗಳಲ್ಲಿ ಸಕ್ರಿಯರಾಗಿದ್ದ ಅವರು ನಕ್ಸಲರ ಪರ ಸಹಾನುಭೂತಿಯುಳ್ಳವರಾಗಿದ್ದರು. ನಕ್ಸಲ್ ಚಟುವಟಿಕೆ ತೊರೆದವರನ್ನು ಸರ್ಕಾರದೊಂದಿಗೆ ಮುಖಾಮುಖೀಯಾಗಿಸಿ ಮುಖ್ಯ ವಾಹಿನಿಗೆ ತರುವ ಕಾರ್ಯಕ್ಕೂ ನೆರವಾಗುತ್ತಿದ್ದರು. ಇದರಿಂದ ಹೋರಾಟಗಾರರ ವಲಯದ ಮೆಚ್ಚುಗೆಗೆ ಪಾತ್ರವಾಗಿದ್ದರೆ, ಇನ್ನೊಂದು ವರ್ಗದ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿಯ ಹಗೆತನವನ್ನು ಎದುರಿಸುತ್ತಿದ್ದರು ಎನ್ನಲಾಗಿದೆ.
ಅಹೋರಾತ್ರಿ ಪ್ರತಿಭಟನೆ
ಗೌರಿ ಲಂಕೇಶ್ ಅವರ ಹತ್ಯೆ ಖಂಡಿಸಿ ಎಸ್‌ಎಫ್ಐ, ಡಿವೈಎಫ್ಐ, ಜೆಎಂಎಸ್, ಸಿಐಟಿಯು ಹಾಗೂ ಕೆಪಿಆರ್‌ಎಸ್ ಸೇರಿದಂತೆ ವಿವಿಧ ವಿದ್ಯಾರ್ಥಿ, ಕಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳು ಗೌರಿ ನಿವಾಸ ಹಾಗೂ ಕಾರ್ಪೋರೇಷನ್ ವೃತ್ತದ ಬಳಿ ಮಂಗಳವಾರ ಅಹೋರಾತ್ರಿ ಪ್ರತಿಭಟನೆ ನಡೆಸಿದವು. ಇದೇ ವೇಳೆ, ಗೌರಿ ಲಂಕೇಶ್ ಅವರ ರಾಜರಾಜೇಶ್ವರಿ ನಗರದ ನಿವಾಸದ ಬಳಿ ಹಾಗೂ ಅವರ ಪಾರ್ಥಿವ ಶರೀರ ಇಟ್ಟಿದ್ದ ವಿಕ್ಟೋರಿಯಾ ಆಸ್ಪತ್ರೆ ಬಳಿಯೂ ವಿವಿಧ ಸಂಘಟನೆಗಳ ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು ಪ್ರತಿಭಟನೆ ನಡೆಸಿ ಘಟನೆಯನ್ನು ಖಂಡಿಸಿದರು. ಮನೆ ಹತ್ತಿರ ಇದ್ದವರು ಗೌರಿ ಪಾರ್ಥಿವ ಶರೀರ ತರುವವರೆಗೂ ಜಾಗ ಬಿಡಲ್ಲ ಎಂದು ಪಟ್ಟು ಹಿಡಿದರು. ಕಾರ್ಪೋರೇಷನ್ ವೃತ್ತದ ಬಳಿ ನಡೆದ ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ, ಸಾಹಿತಿ ಕೆ.ನೀಲಾ, ಸಾಹಿತಿ ವಿಜಯಮ್ಮ, ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, ಎಸ್‌ಎಫ್ಐ ರಾಜ್ಯಾಧ್ಯಕ್ಷ ಅಂಬರೀಷ್, ಕಾರ್ಯದರ್ಶಿ ಗುರುರಾಜ ದೇಸಾಯಿ, ಜೆಎಂಎಸ್ ರಾಜ್ಯಾಧ್ಯಕ್ಷೆ ಗೀತಾ ಮತ್ತಿತರರು ಇದ್ದರು. ಭೀಕರ ದೃಶ್ಯಾವಳಿ ಕಂಡ ಸ್ಥಳೀಯರು
ಗೌರಿ ಲಂಕೇಶ್ ಕಾರು ನಿಲ್ಲಿಸಿ ಮನೆಯ ಗೇಟ್ ತೆಗೆದು ಹೋಗುತ್ತಿದ್ದಂತೆ ಎಡಭಾಗದ ರಸ್ತೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಗನ್ ತೆಗೆದುಕೊಂಡು ಗೌರಿ ಲಂಕೇಶ್ ಎದೆಭಾಗಕ್ಕೆ ಹಾರಿಸಿದ್ದಾರೆ. ಈ ಭೀಕರ ದೃಶ್ಯಾವಳಿಗಳನ್ನು ಎದುರುಗಡೆ ಇರುವ ಅಪಾರ್ಟ್‌ಮೆಂಟ್‌ನ ಮೊದಲ ಫ್ಲ್ಯಾಟ್‌ನಲ್ಲಿದ್ದವರು ನೋಡಿ ದಿಗ್ಭ್ರಾಂತರಾಗಿ ಆ್ಯಂಬುಲೆನ್ಸ್ ಹಾಗೂ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಗೌರಿ ಲಂಕೇಶ್ ಶೂಟೌಟ್ ಪ್ರಕರಣ ರಾಜ್ಯದಲ್ಲಿ ಎರಡನೇ ಕ್ರೂರ ಹತ್ಯೆ. ಕಲಬುರ್ಗಿ ಹತ್ಯೆ ಬಳಿಕ ಇದು ಎರಡನೇ ಕೊಲೆ. ಇದು ಅತ್ಯಂತ ಹೇಯವಾದುದು. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
– ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ. ಸತ್ಯದ ಬಾಯಿಯನ್ನು ಮುಚ್ಚಿಸುವುದು ಸಾಧ್ಯವೇ ಇಲ್ಲ. ಗೌರಿ ಯಾವತ್ತೂ ನಮ್ಮ ಹೃದಯದಲ್ಲಿಯೇ ನೆಲೆಸಿರುತ್ತಾರೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ.
– ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ ಗೌರಿ ಲಂಕೇಶ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ವಿಚಾರ ಮತ್ತು ಎಂದಿಗೂ ಒಪ್ಪಲಾಗದ ನೀಚ ಕೃತ್ಯ.
– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಹತ್ಯೆ ಖಂಡನೀಯ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸೂಕ್ತ ತನಿಖೆ ನಡೆಸಲಿ. ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಬೇಕು.
– ಜಗದೀಶ ಶೆಟ್ಟರ್, ವಿಧಾನಸಭೆ ಪ್ರತಿಪಕ್ಷ ನಾಯಕ ಪ್ರಗತಿಪರ ಚಿಂತಕರು, ಸಮಾಜದ ಶೋಷಿತ ವರ್ಗದ ಶಕ್ತಿಯಾಗಿದ್ದ ಗೌರಿ ಅವರ ಹತ್ಯೆ ಕನ್ನಡ ನಾಡಿಗೆ ಮಾಡಿದ ದ್ರೋಹವಾಗಿದೆ. ಇದರ ಹಿಂದಿರುವ ದುಷ್ಟ ಶಕ್ತಿಗೆ ಶಿಕ್ಷೆಯಾಗಬೇಕು.
– ಯು.ಟಿ.ಖಾದರ್, ಆಹಾರ ಸಚಿವ ಕಲಬುರಗಿ ಹತ್ಯೆ ಮಾದರಿಯಲ್ಲಿಯೇ ಗೌರಿ ಹತ್ಯೆ ಮಾಡಿರುವ ಸಾಧ್ಯತೆಯಿದೆ. ಗೌರಿ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ ದುಷ್ಕರ್ಮಿಗಳನ್ನು ಪತ್ತೆಗೆ ಕ್ರಮ ಕೈಗೊಳ್ಳಬೇಕು.
– ಮೇಧಾಪಾಟ್ಕರ್, ಸಾಮಾಜಿಕ ಹೋರಾಟಗಾರ್ತಿ ಗೌರಿ ಅವರನ್ನು ಹತ್ಯೆ ಮಾಡಲಾಯಿತು ಎಂಬ ವಿಚಾರ ಕೇಳಿ ಆಘಾತ, ಬೇಸರವಾಯಿತು. ಈ ಘಟನೆ ಖಂಡಿಸುತ್ತೇನೆ. ಈ ಬಗ್ಗೆ ನ್ಯಾಯಬೇಕು ಮಾತ್ರವಲ್ಲದೆ ಇದೊಂದು ಎಚ್ಚರಿಕೆ ಸಂದೇಶ
– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ ಪ್ರೊ.ಎಂ.ಎಂ.ಕಲಬುರಗಿಯವರನ್ನು ಹತ್ಯೆ ಮಾಡಿದಂತೆ ಇದೂ ನಡೆದಿದೆ. ಕರ್ನಾಟಕದಲ್ಲಿ ಪ್ರಗತಿಪರ ಚಿಂತನೆಗಳು ಬಲಿಷ್ಠಗೊಳ್ಳುತ್ತಿರುವಂತೆಯೇ ಈ ದುರಂತ ನಡೆದಿದೆ.
– ಪಿಣರಾಯಿ ವಿಜಯನ್, ಕೇರಳ ಸಿಎಂ ವಿಚಾರಗಳನ್ನು ಚರ್ಚೆಗಳ ಮೂಲಕ ಸೋಲಿಸಲು ಸಾಧ್ಯವಾಗದೇ ಇದ್ದಾಗ ಆ ಧ್ವನಿಯನ್ನೇ ಅಡಗಿಸುವ ಹೇಡಿತನದ ಕೃತ್ಯವೇ ಗೌರಿ ಲಂಕೇಶ್ ಅವರ ಹತ್ಯೆ.
– ನರೇಂದ್ರ ನಾಯಕ್, ವಿಚಾರವಾದಿ. ವೈಚಾರಿಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದೊಡ್ಡ ಹತ್ಯೆ. ಇದೊಂದು ಫ್ಯಾಸಿಸ್ಟ್ ಮನೋಭಾವನೆಯ ಹೇಡಿತನದ ಕೃತ್ಯ.
– ಎಸ್.ಜಿ. ಸಿದ್ದರಾಮಯ್ಯ, ಸಾಹಿತಿ ಆಗಸ್ಟ್ 30ಕ್ಕೆ ಕಲಬುರ್ಗಿಯವರ ಹತ್ಯೆಯಾಗಿ 2 ವರ್ಷ ಆಗಿತ್ತು. ಆ ಘಟನೆ ಮರೆಯುವ ಮುಂಚೆಯೇ ಮತ್ತೂಂದು ಹತ್ಯೆ ನಡೆದಿರುವುದು ಆಘಾತ ತಂದಿದೆ. ಇದು ಪ್ರಜಾಪ್ರಭುತ್ವದ ಅಧಃಪತನ.
– ವಸುಂಧರಾ ಭೂಪತಿ, ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಪ್ರಗತಿಪರರನ್ನು, ಸತ್ಯ ಹೇಳುವವರನ್ನು ಎಲ್ಲರನ್ನೂ ಕೊಲ್ತಾರೆ. ಗೌರಿ ಸತ್ತಿಲ್ಲ. ಆಕೆಯ ವಿಚಾರಧಾರೆಗಳು ಹೆಮ್ಮರವಾಗಿ ಬೆಳೆದು ಜೀವಿಸುತ್ತವೆ.
– ವಿಮಲಾ, ಮಹಿಳಾ ಹೋರಾಟಗಾರ್ತಿ ಗೌರಿ ಲಂಕೇಶ್ ಕನ್ನಡದ ಒಬ್ಬ ದಿಟ್ಟ ಮಹಿಳೆ. ಅವರ ಹತ್ಯೆ ದೊಡ್ಡ ಆಘಾತ ನೀಡಿದೆ. ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. ನಂಬಲು ಸಾಧ್ಯವಾಗುತ್ತಿಲ್ಲ. ಕಾರ್ಮೋಡ ಕವಿದಂತಾಗಿದೆ.
– ಕೆ.ಎಲ್. ಅಶೋಕ್, ಕರ್ನಾಟಕ ಕೋಮುಸೌಹಾರ್ದ ವೇದಿಕೆ ಮುಖಂಡ ಗೌರಿ ಲಂಕೇಶ್ ಅವರ ಹತ್ಯೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರ ಶೀಘ್ರವೇ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಬೇಕು.
– ವಿ.ನಾಗರಾಜ್, ಆರೆಸ್ಸೆಸ್ ಕಲಬುರ್ಗಿ ಹತ್ಯೆ ರೀತಿಯಲ್ಲೇ ಗೌರಿ ಹತ್ಯೆ ನಡೆದಿದೆ. ದೇಶದ ಈಗಿನ ಕಲುಷಿತ ವಾತಾವರಣ ಗಮನಿಸಿದರೆ ಹಿಂದಿನ ಕೊಲೆಗಳಿಗೂ ಹಾಗೂ ಈಗಿನ ಹತ್ಯೆಗೂ ಸಂಬಂಧ ಇರುವುದನ್ನು ಊಹೆ ಮಾಡಬಹುದು.
– ಪ್ರೊ. ಚಂದ್ರಶೇಖರ್ ಪಾಟೀಲ್, ಸಾಹಿತಿ. ಸೈದ್ಧಾಂತಿಕ ಭಿನ್ನಾಭಿಪ್ರಾಯವಿದ್ದರೂ ಗೌರಿ ಲಂಕೇಶ್ ನನಗೆ ವರ್ಷಗಳಿಂದ ಸ್ನೇಹಿತೆಯಾಗಿದ್ದರು, ನೆರೆಯವರಾಗಿದ್ದರು. ಅವರ ಹತ್ಯೆ ಆಘಾತಕಾರಿ.
– ಮಾಳವಿಕಾ ಅವಿನಾಶ್ ಆಗ ದಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿ.ಈಗ ಗೌರಿ ಲಂಕೇಶ್. ಒಂದೇ ರೀತಿಯ ವ್ಯಕ್ತಿಗಳ ಹತ್ಯೆಯಾಗುತ್ತಿದೆ ಎಂದರೆ ಕೊಲೆಗಡುಕರು ಎಂಥಹ ವ್ಯಕ್ತಿಗಳು?
– ಜಾವೇದ್ ಅಖ್ತರ್ ನಾನು ಬಹಳ ಮೆಚ್ಚಿಕೊಳ್ಳುತ್ತಿದ್ದ ವ್ಯಕ್ತಿ ಇನ್ನಿಲ್ಲ ಎನ್ನುವುದು ಕೇಳಿ ಆಘಾತವಾಗಿದೆ. ಇತ್ತೀಚಿನ ದಿನಗಳಲ್ಲಿ ಮಾನವ ಹಕ್ಕುಗಳು, ವಾಕ್ ಸ್ವಾತಂತ್ರ್ಯದಲ್ಲಿ ತೀವ್ರ ಕುಸಿತವಾಗುತ್ತಿದೆ.
– ನಂದಿತಾ ದಾಸ್ ಜನರನ್ನು ಮತ್ತು ಬದುಕನ್ನು ಅತಿಯಾಗಿ ಪ್ರೀತಿಸುತ್ತಿದ್ದ ಗೌರಿ, ಕೋಮುವಾದಿಗಳ ಬಗ್ಗೆ ಇನ್ನಿಲ್ಲದ ಸಿಟ್ಟು ಇಟ್ಟುಕೊಂಡಿದ್ದರು.
– ನೂರ್ ಶ್ರೀಧರ್, ಮಾಜಿ ನಕ್ಸಲ್ ಹೋರಾಟಗಾರ. ನಡೆದದ್ದು ಏನು ಅಂತ ಗೊತ್ತಾಗಬೇಕು. ತನಿಖೆಯನ್ನು ಸಿಬಿಐಗೆ ಕೊಡಿ, ರಾಜ್ಯ ಪೊಲೀಸರಿಗೆ ಕೊಡಿ ಎನ್ನುವ ರಾಜಕೀಯ ಬೇಡ. ಸತ್ಯಗೊತ್ತಾಗಲಿ.
– ಪ್ರಕಾಶ್ ಬೆಳವಾಡಿ, ರಂಗಕರ್ಮಿ ಹಲವು ನ್ಯಾಯಯುತ ವಿಚಾರಗಳಿಗೆ ನಿರ್ಭೀತಿಯಿಂದ ಹೋರಾಟ ಮಾಡಿದವರು. ಅಂಥವರನ್ನು ಹತ್ಯೆ ಮಾಡಿರುವುದು ಖಂಡನೀಯವೇ ಸರಿ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
– ಭಾರತೀಯ ಪತ್ರಿಕಾ ಮಂಡಳಿ