Advertisement

ಎಸ್‌ಐ ಸಹಿತ ಮೂವರು ಪೊಲೀಸರ ಬಂಧನ

07:53 AM Jun 04, 2018 | Team Udayavani |

ಉಡುಪಿ: ಪೆರ್ಡೂರಿನ ಶೇನರಬೆಟ್ಟುವಿನಲ್ಲಿ ಜಾನುವಾರು ಮಾರಾಟಗಾರ ಜೋಕಟ್ಟೆಯ ಹಸನಬ್ಬ (62) ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪ್ರಕರಣಕ್ಕೆ ಸಂಬಂಧಿಸಿ ಹಿರಿಯಡಕ ಎಸ್‌ಐ ಸಹಿತ ಮೂವರು ಪೊಲೀಸರನ್ನು ಬಂಧಿಸಲಾಗಿದೆ. ಹಿರಿಯಡಕ ಠಾಣೆಯ ಉಪ ನಿರೀಕ್ಷಕ ಡಿ.ಎನ್‌. ಕುಮಾರ್‌, ಜೀಪು ಚಾಲಕ ಗೋಪಾಲ್‌ ಮತ್ತು ಹೆಡ್‌ಕಾನ್ಸ್‌ಟೆಬಲ್‌ ಮೋಹನ್‌ ಕೊತ್ವಾಲ್‌ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರ ವಿಚಾರಣೆಯಲ್ಲಿ ಕೆಲವೊಂದು ವಿಷಯಗಳನ್ನು ಬಾಯ್ಬಿಟ್ಟಿದ್ದು, ತಮ್ಮ ಭಾಗಿದಾರಿಕೆಯನ್ನು ಒಪ್ಪಿಕೊಂಡಿದ್ದಾರೆ.

Advertisement

ಘಟನೆಯ ಹಿನ್ನೆಲೆ
ಹಸನಬ್ಬ ಅವರ ಅಣ್ಣ ಮಹಮ್ಮದ್‌ ಇಸ್ಮಾಯಿಲ್‌ ಅವರು ಮೇ 30ರಂದು ಸಂಜೆ 4 ಗಂಟೆಗೆ ಹಿರಿಯಡಕ ಠಾಣೆಗೆ ಬಂದು ದೂರು ನೀಡಿದ್ದರು. ಪೆರ್ಡೂರಿನ ಶೇನರಬೆಟ್ಟಿನಲ್ಲಿ ಬಜ ರಂಗ ದಳದ ಕಾರ್ಯಕರ್ತ ಸೂರಿ ಯಾನೆ ಸೂರ್ಯ ಮತ್ತಿತರರು ಸ್ಕಾರ್ಪಿಯೋ ವಾಹನ ಅಡ್ಡಗಟ್ಟಿ ಅಣ್ಣನಿಗೆ ಮಾರ ಣಾಂತಿಕವಾಗಿ ಥಳಿಸಿದ್ದಾರೆ. ಜೀವ ಭಯ ದಿಂದ ಇನ್ನಿಬ್ಬರು ಓಡಿ ಹೋಗಿ ದ್ದರು. ತಂಡದವರ ಹಲ್ಲೆಯಿಂದಲೇ ಹಸನಬ್ಬ ಸತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಪೊಲೀಸರ ಸಾಥ್‌
ಪ್ರಮುಖ ಆರೋಪಿಗಳ ಬಂಧನದ ಬಳಿಕ ಪೊಲೀಸರ ಭಾಗಿದಾರಿಕೆ ಸ್ಪಷ್ಟಗೊಳ್ಳುತ್ತಿದ್ದಂತೆ ಪ್ರಕರಣದ ತನಿಖಾಧಿಕಾರಿಯನ್ನಾಗಿ ಎಎಸ್‌ಪಿ ಅವರನ್ನು ನೇಮಿಸಲಾಗಿತ್ತು. ಅವರ ನೇತೃತ್ವದಲ್ಲಿ ತನಿಖೆ ನಡೆಸಿದಾಗ ಮೇ 29-30ರ ರಾತ್ರಿ 1 ಗಂಟೆ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಸ್ಥಳೀಯರ ತಂಡ ಹಾಗೂ ಹಿರಿಯಡಕ ಪೊಲೀಸರು ಸೇರಿಕೊಂಡು ಶೇನರಬೆಟ್ಟು ಬಳಿ ಬೆಳಗ್ಗೆ 4 ಗಂಟೆಗೆ ಸ್ಕಾರ್ಪಿಯೋ ವಾಹನ ವನ್ನು ತಡೆದು ನಿಲ್ಲಿಸಿದ್ದರು. ಆ ಸಂದರ್ಭ ಆರೋಪಿಗಳ ತಂಡ ಹಸನಬ್ಬ ಅವರನ್ನು ಚೆನ್ನಾಗಿ ಥಳಿಸಿತ್ತು ಎಂದು ತಿಳಿದುಬಂದಿದೆ.

ಪ್ರಮುಖ ಆರೋಪಿಗಳ ಬಂಧನದ ಬಳಿಕ…
ಬಳ್ಳಾರಿ ಪೊಲೀಸರ ಸಹಕಾರದಿಂದ ಜೂ. 1ರಂದು ಪ್ರಮುಖ ಆರೋಪಿ ಗಳಾದ ಸುರೇಶ್‌ ಮೆಂಡನ್‌ ಅಲಿ ಯಾಸ್‌ ಸೂರಿ (42), ಎಚ್‌. ಪ್ರಸಾದ್‌, ಕೊಂಡಾಡಿ (30) ಅವರನ್ನು ಬಂಧಿಸ ಲಾಗಿತ್ತು. ಜೂ. 2ರಂದು ಉಡುಪಿಗೆ ಕರೆತಂದು ವಿಚಾ ರಣೆ ನಡೆಸಲಾಗಿತ್ತು. ಜೂ. 2ರಂದು ಮತ್ತಿಬ್ಬರು ಆರೋಪಿಗಳಾದ ಉಮೇಶ್‌ ಶೆಟ್ಟಿ (28) ಮತ್ತು ರತನ್‌ (22)ನನ್ನು ಬಂಧಿಸಲಾಗಿತ್ತು. ಇವರೆಲ್ಲರ ವಿಚಾರಣೆಯಲ್ಲಿ ಕಂಡುಕೊಂಡಂತೆ ಮೂವರು ಪೊಲೀಸರನ್ನು ಬಂಧಿಸಲಾಗಿದ್ದು, ಅವರು ಕೂಡ ಎಲ್ಲ ವಿಚಾರಗಳನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣ ವನ್ನು ಸಮರ್ಪಕವಾಗಿ ನಿಭಾಯಿಸದ ಹಿನ್ನೆಲೆಯಲ್ಲಿ ಹಿರಿಯಡಕ ಠಾಣೆಯ ಪಿಎಸ್‌ಐಯನ್ನು ಗುರುವಾರವೇ ಎಸ್‌ಪಿ ಅಮಾನತು ಮಾಡಿದ್ದರು.

ಪೊಲೀಸ್‌ ಜೀಪಿನಲ್ಲಿ  ಸಾವು !
ಹಲ್ಲೆಗೊಳಗಾಗಿದ್ದ ಹಸನಬ್ಬ ಅವರನ್ನು ಹಿರಿಯಡಕ ಪೊಲೀಸರು ಇಲಾಖಾ ಜೀಪಿನಲ್ಲಿ ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದರು. ಹಾಗೆಯೇ ದನ ಸಾಗಾಟದ ವಾಹನವನ್ನು ಆರೋಪಿ ಸೂರಿ ಯಾನೆ ಸುರೇಶ ಹಾಗೂ ಇತರರು ಠಾಣೆಗೆ ತಂದಿದ್ದರು. ಈ ಸಂದರ್ಭ ಪೊಲೀಸ್‌ ಜೀಪಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಹಸನಬ್ಬ ಮೃತಪಟ್ಟಿದ್ದರು. ವಿಷಯ ತಿಳಿಯುತ್ತಲೇ ಪೊಲೀಸರು ಅಲ್ಲಿಗೆ ಬಂದಿದ್ದ ಆರೋಪಿಗಳ ಪೈಕಿ ಪ್ರಸಾದ್‌ ಕೊಂಡಾಡಿ ಹಾಗೂ ಇತರರ ಜತೆಗೆ ಮೃತದೇಹವನ್ನು ಕೃತ್ಯ ನಡೆದ ಸ್ಥಳದಿಂದ ಸುಮಾರು 1 ಕಿ.ಮೀ. ದೂರ ಇಟ್ಟು ಬಂದಿದ್ದರು. ಬಳಿಕ ಬೆಳಗ್ಗೆ 9.45ರ ಸುಮಾರಿಗೆ ದನದ ವಾಹನವನ್ನು ತಡೆಗಟ್ಟಿದ ಸಮಯ ಹಸನಬ್ಬ ಓಡಿ ತಪ್ಪಿಸಿಕೊಂಡಿದ್ದರು. ಭಯದಿಂದ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

Advertisement

ಬಂಧಿತರ ಸಂಖ್ಯೆ 10ಕ್ಕೆ ಏರಿಕೆ
ಜೂ. 3ರಂದು ಮತ್ತೆ ಮೂವರು ಆರೋಪಿಗಳಾದ ಪೆರ್ಡೂರಿನ ಚೇತನ್‌ (22), ಶೈಲೇಶ್‌ ಶೆಟ್ಟಿ (20) ಮತ್ತು ಗಣೇಶ ನಾಯ್ಕ (24) ಅವರನ್ನು ಬಂಧಿಸಲಾಗಿದ್ದು, ಒಟ್ಟು ಬಂಧಿತರ ಸಂಖ್ಯೆ 10ಕ್ಕೆ ಏರಿದೆ. ಇನ್ನೂ ಹಲವರ ಬಂಧನ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next