Advertisement

ಪದವಿ ತರಗತಿ ಆರಂಭಕ್ಕೆ ಇನ್ನೂ 3 ತಿಂಗಳು!

02:02 AM Jun 12, 2022 | Team Udayavani |

ಮಂಗಳೂರು: ಮಾಸಾಂತ್ಯಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡರೂ ಪದವಿ ತರಗತಿಗೆ ಸೇರಬೇಕಾದರೆ ವಿದ್ಯಾರ್ಥಿಗಳು ಕನಿಷ್ಠ 3 ತಿಂಗಳು ಕಾಯಬೇಕು. ಯಾಕೆಂದರೆ ಮಂಗಳೂರು ವಿಶ್ವ ವಿದ್ಯಾ ನಿಲಯ ವ್ಯಾಪ್ತಿಯಲ್ಲಿ 2022-23ರ ಶೈಕ್ಷಣಿಕ ವರ್ಷ ಆರಂಭವಾಗುವುದು ಅಕ್ಟೋಬರ್‌ ಒಂದರಿಂದ!

Advertisement

ವಿ.ವಿ.ಯ 2021-22ನೇ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ 2, 4 ಮತ್ತು 6ನೇ ಸೆಮಿಸ್ಟರ್‌ನ ತರಗತಿ ಗಳು ಆ. 30ಕ್ಕೆ ಕೊನೆಗೊಳ್ಳಲಿವೆ. ಸೆ. 2ರಿಂದ ಪರೀಕ್ಷೆ. ಹೀಗಾಗಿ ಅಷ್ಟು ಸಮಯ ಹೊಸ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಸಿಗದು. ಒಂದು ವೇಳೆ ದಾಖಲಾತಿಯಾದರೂ 3 ತಿಂಗಳು ಕಲಿಕೆಯಿಂದ ದೂರ ವಿರಬೇಕಾಗುತ್ತದೆ.

ಆನ್‌ಲೈನ್‌ ಆರಂಭವಾಗಲಿ
ಪ್ರಸಕ್ತ ವರ್ಷ ಸಂಕ್ರ ಮಣದ ಕಾಲ. ಹೀಗಾಗಿ ದ್ವಿತೀಯ ಪಿಯು ಫಲಿತಾಂಶ ಬಂದ ತತ್‌ಕ್ಷಣವೇ ಕಾಲೇಜಿಗೆ ವಿದ್ಯಾರ್ಥಿಗಳ ದಾಖಲಾತಿ ಮಾಡಿ ಆನ್‌ಲೈನ್‌ ತರಗತಿ ಪ್ರಾರಂಭಿಸಲು ಅವಕಾಶ ಸಿಕ್ಕಿದರೆ ಉತ್ತಮ ಅಥವಾ ಕ್ರೀಡಾ ಚಟುವಟಿಕೆಗೆ ಆದ್ಯತೆ ನೀಡ ಬಹುದು. ಕೊರೊನಾ 4ನೇ ಅಲೆ ಬಾರದಿದ್ದರೆ ಮುಂದಿನ ಶೈಕ್ಷಣಿಕ ವರ್ಷ ಹಿಂದಿನಂತೆ ಹಳಿಗೆ ಬರಲಿದೆ ಎಂದು ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಶೇಖರ ಹೆಬ್ಟಾರ್‌ ಸಿ. ಹೇಳಿದ್ದಾರೆ.

ಯಾಕೆ ಸಮಸ್ಯೆ?
ಸಾಮಾನ್ಯವಾಗಿ ಜೂನ್‌ನಲ್ಲಿ ಪದವಿ ತರಗತಿಗಳು ಆರಂಭ ವಾಗುತ್ತವೆ. ಆದರೆ ಕೊರೊನಾ ಕಾರಣ ಎರಡು ವರ್ಷಗಳಿಂದ ಶೈಕ್ಷಣಿಕ ವೇಳಾಪಟ್ಟಿಯೇ ಅದಲು ಬದಲಾಗಿದೆ. ಜೂನ್‌ನಲ್ಲಿ ಮುಗಿಯ ಬೇಕಿದ್ದ ಪದವಿ ತರಗತಿ ಗಳು ಈಗಲೂ ನಡೆಯುತ್ತಿವೆ. ಹೀಗಾಗಿ ಮುಂದಿನ 3 ತಿಂಗಳು ಕಾಲೇಜಿನಲ್ಲಿ ಹೊಸ ತರಗತಿಗೆ ಕೊಠಡಿ ಅಲಭ್ಯ ಮತ್ತು ಉಪನ್ಯಾಸಕರ ಕೊರತೆಯೂ ಆಗಲಿದೆ. ಇದರಿಂದಾಗಿ ಪದವಿ ಮೊದಲ ವರ್ಷದ ವಿದ್ಯಾರ್ಥಿಗಳು ಪಾಠಕ್ಕಾಗಿ ಕಾಯಲೇಬೇಕಾದ ಅನಿವಾರ್ಯ ಇದೆ. ಈ ಬಾರಿ ಅಕ್ಟೋಬರ್‌ನಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾದರೆ ಮುಂದಿನ ವರ್ಷಕ್ಕೆ ಎಲ್ಲವೂ ಹಿಂದಿನಂತೆಯೇ ಸಹಜ ಸ್ಥಿತಿಗೆ ಬರಲಿವೆ ಎಂಬುದು ಉಪನ್ಯಾಸಕರೊಬ್ಬರ ಅಭಿಪ್ರಾಯ.

ದಾಖಲಾತಿಗೆ ಅನುಮತಿ: ವಿ.ವಿ. ಚಿಂತನೆ
ಕೆಲವು ಸ್ವಾಯತ್ತ ಕಾಲೇಜುಗಳು ಈಗಾಗಲೇ ಪದವಿ ದಾಖಲಾತಿ ಆರಂಭಿಸಿವೆ. ಸರಕಾರಿ, ಪದವಿ ಕಾಲೇಜುಗಳಲ್ಲಿ ದ್ವಿತೀಯ ಪಿಯು ಫಲಿತಾಂಶಕ್ಕೆ ಕಾಯಲಾಗುತ್ತಿದೆ. ಆ ವೇಳೆಗೆ ವಿ.ವಿ.ಯಿಂದ ಅನುಮತಿ ದೊರೆಯದಿದ್ದರೆ ವಿದ್ಯಾರ್ಥಿಗಳು, ಕಾಲೇಜುಗಳಿಗೆ ಸಮಸ್ಯೆ ಯಾಗಲಿದೆ. ಇದನ್ನು ಮನಗಂಡ ವಿ.ವಿ.ಯು ಪಿಯು ಫಲಿತಾಂಶ ಬಂದ ತತ್‌ಕ್ಷಣವೇ ವಿದ್ಯಾರ್ಥಿಗಳ ದಾಖಲಾತಿಗೆ ಅನುಮತಿ ನೀಡುವ ಮಹತ್ವದ ತೀರ್ಮಾನ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದೆ.

Advertisement

ಪ್ರಸಕ್ತ ಶೈಕ್ಷಣಿಕ ವರ್ಷ ಪೂರ್ಣ
ಗೊಳ್ಳುವ ಮುನ್ನ ದ್ವಿ. ಪಿಯು ಫಲಿತಾಂಶ ಬಂದರೆ ಕಾಲೇಜುಗಳಲ್ಲಿ ತರಗತಿ ಕೋಣೆ, ಉಪನ್ಯಾಸಕರ ಲಭ್ಯತೆ ಸಹಿತ ಕೆಲವು ಸವಾಲುಗಳು ಎದುರಾಗಲಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
– ಪ್ರೊ| ಪಿ.ಎಸ್‌. ಯಡಪಡಿತ್ತಾಯ, ಮಂಗಳೂರು ವಿ.ವಿ. ಕುಲಪತಿ

-  ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next