ಮಥುರಾ: ದೆಹಲಿ ಮೂಲದ ಉದ್ಯಮಿ, ಪತ್ನಿ ಹಾಗೂ ಮಗಳ ಮೃತದೇಹ ಕಾರಿನೊಳಗೆ ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದ ಯುಮುನಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆ ತೆರಳಿದ್ದ ದೆಹಲಿ ಮೂಲದ ಉದ್ಯಮಿ ತನಗೆ ತಾನು ಗುಂಡು ಹೊಡೆದುಕೊಳ್ಳುವ ಮೊದಲು ಪತ್ನಿ ಹಾಗೂ ಮಗಳಿಗೆ ಕಾರಿನೊಳಗೆ ಗುಂಡಿಟ್ಟು ಹತ್ಯೆಗೈದಿರುವುದಾಗಿ ವರದಿ ತಿಳಿಸಿದೆ. ಕಾರಿನೊಳಗೆ ಗಂಭೀರವಾಗಿ ಗಾಯಗೊಂಡಿರುವ ಮಗ ಪತ್ತೆಯಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಉದ್ಯಮಿ ನೀರಜ್ ಅಗರ್ವಾಲ್, ಪತ್ನಿ ನೇಹಾ (35ವರ್ಷ), ಪುತ್ರಿ ಧನ್ಯಾ(6ವರ್ಷ) ಮೃತದೇಹ ಕಾರಿನ ಹಿಂಭಾಗದ ಸೀಟಿನಲ್ಲಿದ್ದು, ಪುತ್ರ ಶೌರ್ಯ(10ವರ್ಷ) ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ ಎಂದು ವರದಿ ತಿಳಿಸಿದೆ.
ಯುಮುನಾ ಎಕ್ಸ್ ಪ್ರೆಸ್ ವೇನಲ್ಲಿ ಪಹರೆ ನಡೆಸುತ್ತಿದ್ದ ಪೊಲೀಸರು ಆಗಮಿಸಿದ ವೇಳೆ ಈ ಘಟನೆ ಪತ್ತೆಯಾಗಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಮೀನಾ ತಿಳಿಸಿದ್ದಾರೆ. ಜಾರಿ ನಿರ್ದೇಶನಾಲಯದ ದೀರ್ಘಾವಧಿ ವಿಚಾರಣೆಯಿಂದ ನೀರಜ್ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆಂದು ದೂರಲಾಗಿದೆ.
ಘಟನೆಯ ಹಿಂದೆ ಆತ್ಮಹತ್ಯೆ ಮತ್ತು ಕೊಲೆಯ ಎರಡು ರೀತಿ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಎಕೆ ಮೀನಾ ತಿಳಿಸಿದ್ದಾರೆ. ತನ್ನ ಮಗ ಯವತ್ತೂ ಇಂತಹ ಅಪರಾಧ ಎಸಗಿಲ್ಲ. ಇದೊಂದು ವಿರೋಧಿಗಳು ನಡೆಸಿದ ಹತ್ಯೆ ಎಂದು ನೀರಜ್ ತಂದೆ ದಿನೇಶ್ ಚಂದ್ರ ಅಗರ್ವಾಲ್ ಆರೋಪಿಸಿದ್ದಾರೆ.