ಗ್ವಾಲಿಯರ್ : ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ ಮೂವರು ಸಾವನ್ನಪ್ಪಿ, 7 ಜನರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರಿನ ಝೊರಾಸಿ ಘಾಟ್‍ನಲ್ಲಿ ಮಂಗಳವಾರ ನಡೆದಿದೆ.
ಇಂದು ಮುಂಜಾನೆ ದೆಹಲಿಯಿಂದ ಮಧ್ಯಪ್ರದೇಶದ ಟಿಕ್ಮಘರಕ್ಕೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿದೆ. ಬಸ್‍ನಲ್ಲಿ 100 ಜನರು ಪ್ರಯಾಣಿಸುತ್ತಿದ್ದರು. ಅವರ ಪೈಕಿ ಮೂವರು ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಹಾಗೂ ಏಳು ಜನರು ಗಾಯಗೊಂಡಿದ್ದಾರೆ. ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಬಸ್ ಪಲ್ಟಿಯಾಗುತ್ತಿದ್ದಂತೆ ಪ್ರಾಣ ಉಳಿಸಿಕೊಳ್ಳುವ ದಾವಂತದಲ್ಲಿ ಕೆಲವರು ರಸ್ತೆ ಮೇಲೆ ಹಾರಿದ್ದಾರೆ. ಬಸ್‍ನಲ್ಲಿ ಸಿಲುಕಿಕೊಂಡವರು ಕಿಟಕಿಗಳಿಂದ ಹೊರ ಬರುತ್ತಿರುವ ದೃಶ್ಯಗಳು ಕಂಡು ಬಂದಿವೆ.
ಇನ್ನು ಮಧ್ಯಪ್ರದೇಶದಿಂದ ಸಾವಿರಾರು ಜನ ವಲಸೆ ಕಾರ್ಮಿಕರು ಕೂಲಿ ಕೆಲಸಕ್ಕಾಗಿ ನವದೆಹಲಿಗೆ ಬಂದು ನೆಲೆಸಿದ್ದಾರೆ. ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಸೋಮವಾರವಷ್ಟೇ ಒಂದು ವಾರಗಳ ಕಾಲ ದೆಹಲಿಯಲ್ಲಿ ನೈಟ್ ಲಾಕ್ ಡೌನ್ ಘೋಷಿಸಲಾಗಿದೆ. ಮಿತಿಮೀರಿ ಹಬ್ಬುತ್ತಿರುವ ಕೋವಿಡ್‍ನಿಂದ ಮುಂದೆಯೂ ಕೂಡ ಪೂರ್ಣಪ್ರಮಾಣದ ಲಾಕ್‍ಡೌನ್ ಹೇರಬಹುದೆನ್ನುವ ಭಯದಲ್ಲಿ ವಲಸೆ ಕಾರ್ಮಿಕರು ತಮ್ಮ ತವರೂರಿನತ್ತ ಮುಖ ಮಾಡಿದ್ದಾರೆ. ಇಂದು ಅಪಘಾತಕ್ಕಿಡಾದ ಬಸ್‍ನಲ್ಲಿ 100 ಜನರು ಪ್ರಯಾಣಿಸುತ್ತಿದ್ದರು.