ಮಂಡ್ಯ: ರೋಗ ನಿರೋಧಕ ಚುಚ್ಚುಮದ್ದು ನೀಡಿದ 24 ಗಂಟೆಯಲ್ಲಿ ಮೃತಪಟ್ಟ 2 ಹಸುಗೂಸುಗಳ ಕುಟುಂಬಕ್ಕೆ ತಲಾ 3 ಲಕ್ಷ ರೂ. ಪರಿಹಾರ ಘೋಷಣೆಯಾಗಿದೆ.
ತಾಲೂಕಿನ ಚಿಂದಗಿರಿ ದೊಡ್ಡಿ ಗ್ರಾಮದ ಪ್ರಿಯಾಂಕ- ರವಿ ದಂಪತಿಗೆ ಸೇರಿದ ಪ್ರೀತಂ ಹಾಗೂ ಹೇಮಾವತಿ-ರವಿ ಅವರಿಗೆ ಸೇರಿದ ಭುವನ್ ಮೃತ ಮಕ್ಕಳು.
ಚುಚ್ಚುಮದ್ದಿನಿಂದ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಜೆಡಿಎಸ್ ಮುಖಂಡರು, ಸಾರ್ವಜನಿಕರು ಅಹೋ ರಾತ್ರಿ ಧರಣಿ ನಡೆಸುತ್ತಿದ್ದರು. ಮಿಮ್ಸ್ ವೈದ್ಯಕೀಯ ಅಧೀಕ್ಷಕರ ಬಳಿ ಧರಣಿ ನಡೆಸುತ್ತಿದ್ದವರನ್ನು ಡೀಸಿ ಎನ್. ಮಂಜುಶ್ರೀ, ಎಸ್‌ಪಿ ಜಿ.ರಾಧಿಕಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ನಟರಾಜ್ ಭೇಟಿ ನೀಡಿ ಹೋರಾಟಗಾರರ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ, ಹೋರಾಟ ಕೈಬಿಡದೆ ಪರಿಹಾರಕ್ಕೆ ಪಟ್ಟು ಹಿಡಿದರು. ಸಂಸದ ಸಿ.ಎಸ್.ಪುಟ್ಟರಾಜು ಭಾನುವಾರ ಬೆಳಗಿನ ಜಾವ 2.30ರ ಸಮಯಕ್ಕೆ ಜಿಲ್ಲಾಸ್ಪತ್ರೆಗೆ ಆಗಮಿಸಿ ಮಾತುಕತೆ ನಡೆಸಿದರು. ಅಷ್ಟರಲ್ಲಿ ಹೋರಾಟಗಾರರು ನಾಪತ್ತೆಯಾಗಿದ್ದರು. ಮಿಮ್ಸ್ ವೈದ್ಯ ಡಾ.ಅಶ್ವಿನ್ ಮೃತ ಹಸುಗೂಸುಗಳ ಪಂಚನಾಮೆ ನಡೆಸಿ ಬಳಿಕ ಪೋಷಕರ ವಶಕ್ಕೆ ನೀಡಿದರು.
ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಪರಿಹಾರ ನೀಡಲು ಸಮ್ಮತಿಸಿತು. ಅಷ್ಟರಲ್ಲಿ ಸ್ಥಳದಲ್ಲಿ ಹೋರಾಟಗಾರರು ಇರಲಿಲ್ಲ. ಮುಖಂಡರಿಗಾಗಿ ಡೀಸಿ, ಎಸ್‌ಪಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮುಂಜಾನೆವರೆಗೂ ಕಾದು ಕುಳಿತರು. ರಾಜ್ಯಸರ್ಕಾರ 1 ಲಕ್ಷ ರೂ. ಸೇರಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ, ಜೆಡಿಎಸ್‌ನಿಂದ 1 ಲಕ್ಷ ರೂ., ಜೆಡಿಎಸ್ ಮುಖಂಡ ಡಾ.ಎಚ್.ಕೃಷ್ಣ ಹಾಗೂ ಮುಡಾ ಅಧ್ಯಕ್ಷ ಮುನಾವರ್‌ಖಾನ್ ವೈಯಕ್ತಿವಾಗಿ ಒಂದೊಂದು ಲಕ್ಷ ರೂ. ಪರಿಹಾರ ಘೋಷಿಸಿದರೂ ನಾಯಕರಿಲ್ಲದೆ ಅದನ್ನು ಒಪ್ಪಲು ಸಾಧ್ಯವಿಲ್ಲ ಮುಖಂಡರು ಪಟ್ಟು ಹಿಡಿದರು.