Advertisement

ಸೈಕ್ಲಿಸ್ಟ್‌ ಗೆ 3 ಲಕ್ಷ ರೂ. ನೆರವು ನೀಡಿದ ಎಂ.ಬಿ. ಪಾಟೀಲ

06:43 PM Sep 20, 2022 | Shwetha M |

ವಿಜಯಪುರ: ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸೈಕ್ಲಿಂಗ್‌ ಕ್ರೀಡಾಪಟುವಿಗೆ ನೆರವಾಗುವ ಮೂಲಕ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಆರ್ಥಿಕ ಸಹಾಯ ಹಸ್ತ ಚಾಚಿದ್ದಾರೆ.

Advertisement

ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೆಬ್ಟಾಳಟ್ಟಿ ಗ್ರಾಮದ ಭಾವನಾ ಪಾಟೀಲ ಸೈಕ್ಲಿಂಗ್‌ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರುತ್ತಿದ್ದು, ಸೈಕ್ಲಿಂಗ್‌ ಕ್ರೀಡಾ ಕೂಟಗಳಲ್ಲಿ ಸ್ವಂತ ಸೈಕಲ್‌ ಇಲ್ಲದೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಈ ವಿಷಯ ತಿಳಿದ ಎಂ. ಬಿ. ಪಾಟೀಲ ಅವರು ಯುವ ಪ್ರತಿಭಾವಂತ ಸೈಕ್ಲಿಂಗ್‌ ಕ್ರೀಡಾಪಟು ಭಾವನಾ ಪಾಟೀಲ ಅವರಿಗೆ 3 ಲಕ್ಷ ರೂ. ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ಸದ್ಯಕ್ಕೆ ಭಾವನಾ ಪಾಟೀಲ ಸೈಕ್ಲಿಂಗ್‌ ತರಬೇತಿಗಾಗಿ ಮೈಸೂರಿನಲ್ಲಿದ್ದು, ನಗರದಲ್ಲಿರುವ ತಮ್ಮ ಮನೆಗೆ ಕ್ರೀಡಾಪಟುವಿನ ತಂದೆ ಮಹಾದೇವ ಪಾಟೀಲ ಮತ್ತು ತಾಯಿ ಶ್ರೀದೇವಿ ಪಾಟೀಲ ಅವರನ್ನು ಕರೆಸಿಕೊಂಡ ಶಾಸಕ ಎಂ.ಬಿ.ಪಾಟೀಲ ಆರ್ಥಿಕ ನೆರವಿನ ಚೆಕ್‌ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಬಿ.ಪಾಟೀಲ, ಜಿಲ್ಲೆಯ ಪ್ರತಿಭಾವಂತ ಯುವ ಸೈಕ್ಲಿಸ್ಟ್‌ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.

ನೆರವಿನ ಚೆಕ್‌ ಸ್ವೀಕರಿಸಿ ಮಾತನಾಡಿದ ಭಾವನಾಳ ತಂದೆ ಮಹಾದೇವ ಪಾಟೀಲ, ನಮ್ಮ ಮಗಳಿಗೆ ಸೈಕ್ಲಿಂಗ್‌ ಕ್ರೀಡೆಯಲಿ ಎಲ್ಲಿಲ್ಲದ ಆಸಕ್ತಿ ಇದ್ದು, ಸೈಕ್ಲಿಂಗ್‌ನಲ್ಲಿ ಸಾಧನೆ ಮಾಡುವ ಗುರಿಯೊಂದಿಗೆ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾಳೆ. ಈಗಾಗಲೇ ಏನೆಲ್ಲ ಕೊರತೆಗಳ ಮಧ್ಯೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾನಾ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿದ್ದಾಳೆ ಎಂದರು.

Advertisement

ಆರ್ಥಿಕ ಸಂಕಷ್ಟದ ನಮಗೆ ನಮಗೆ ಆಕೆಯ ಗುರಿ-ಸಾಧನೆಗೆ ಅಗತ್ಯ ಇರುವ ಲಕ್ಷಾಂತರ ರೂ. ಮೊತ್ತದ ಉತ್ತಮ ಸೈಕಲ್‌ ಕೊಡಿಸಲು ಸಾಧ್ಯವಾಗದ ದುಸ್ಥಿತಿ ಎದುರಾಗಿತ್ತು. ನಮ್ಮ ಮಗಳ ಪ್ರತಿಭೆಗೆ ಪ್ರೋತ್ಸಾಹ ನೀಡಲು ಎಂ.ಬಿ .ಪಾಟೀಲ ಅವರು ದೇವರ ರೂಪದಲ್ಲಿ ಬಂದು ಸಹಾಯ ಮಾಡಿದ್ದಾರೆ. ಅವರಿಗೆ ನಮ್ಮ ಕುಟುಂಬ ಸದಾ ಋಣಿಯಾಗಿರುತ್ತದೆ ಎಂದರು.

ಡಭಾವನಾ ತಾಯಿ ಶ್ರೀದೇವಿ ಪಾಟೀಲ ಮಾತನಾಡಿ, ನನ್ನ ಪತಿ ಮಹಾದೇವ ಪಾಟೀಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೂರು ಮಕ್ಕಳ ನಮ್ಮ ಕುಟುಂಬ ನಿರ್ವಹಣೆಗೆ ಇದು ಕೊಂಚ ಸಹಕಾರಿ ಆಗಿದೆ. ಆದರೆ ಹಿರಿಯ ಮಗಳೇ ಭಾವನಾಳಿಗೆ ಬಾಲ್ಯದಿಂದಲೇ ಸೈಕಲ್‌ ತುಳಿಯುವುದು ಎಂದರೆ ಎಲ್ಲಿಲ್ಲದ ಪ್ರೀತಿ. ಪರಿಣಾಮವೇ ಸೈಕ್ಲಿಂಗ್‌ನಲ್ಲಿ ಸಾಧಕರಿಂದ ಮಾರ್ಗದರ್ಶನ ಪಡೆದು, ಈಗ ಉತ್ತಮ ಸಾಧನೆ ಮಾಡುತ್ತಿದ್ದಾಳೆ ಎಂದರು.

ಆದರೆ ಮುಂದಿನ ತಿಂಗಳು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಉತ್ತಮ ಗುಣಮಟ್ಟದ ಸ್ವಂತ ಸೈಕಲ್‌ ಇರಲಿಲ್ಲ. ಹೊಸ ಸೈಕಲ್‌ ಕೊಡಿಸಲು ನಮ್ಮಲ್ಲಿ ಆರ್ಥಿಕ ಶಕ್ತಿ ಇರಲಿಲ್ಲ. ನಮ್ಮ ಮಗಳ ವಿಷಯ ತಿಳಿದ ಎಂ.ಬಿ.ಪಾಟೀಲ ಅವರು ನಮಗೆ 3 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ. ಈ ಮೂಲಕ ಸೈಕ್ಲಿಂಗ್‌ ಕ್ಷೇತ್ರದಲ್ಲಿ ನಮ್ಮ ಮಗಳು ಹೆಚ್ಚಿನ ಸಾಧನೆ ಮಾಡಲು ನೆರವಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಬಿ.ಎಲ್‌.ಡಿ.ಇ ಮುಖ್ಯ ಆಡಳಿತಾಕಾರಿ ಡಾ. ಆರ್‌.ವಿ.ಕುಲಕರ್ಣಿ, ನಿರ್ದೇಶಕ ಸಂ. ಗು.ಸಜ್ಜನ, ಕ್ರೀಡಾ ನಿರ್ದೇಶಕ ಎಸ್‌.ಎಸ್‌.ಕೋರಿ, ಕೈಲಾಸ ಹಿರೇಮಠ, ಅಶೋಕ ಕಾಖಂಡಕಿ, ಶ್ರೀಶೈಲ ತಪಸೆ, ಸಿದ್ದರಾಯ ಪ್ರಧಾನಿ, ಈಶ್ವರಪ್ಪ ಬಂಗಾರಿ, ಹೊನಮಲಪ್ಪ ಹಟ್ಟಿ, ಈಶ್ವರ ಅಳ್ಳಗಿ, ಮಲ್ಲು ತುಂಗಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next