ಸುರ್ಯಪೇಟ್(ತೆಲಂಗಾಣ):ವಧು ಮತ್ತು ವರನ ಸಂಬಂಧಿಕರು ಮಾರಾಮಾರಿ ಹೊಡೆದಾಡಿಕೊಂಡ ಪರಿಣಾಮ ಮದುವೆ ಸಂಭ್ರಮ ರಣಾಂಗಣವಾದ ಘಟನೆ ತೆಲಂಗಾಣದ ಸುರ್ಯಪೇಟ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಮದುವೆ ಮನೆಯಲ್ಲಿ ನಡೆದ ಗಲಾಟೆಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ವರದಿ ಹೇಳಿದೆ.
ಕೋಡಾಡ್ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಶಿವರಾಮ್ ರೆಡ್ಡಿ ಎಎನ್ ಐಗೆ ದೂರವಾಣಿಯಲ್ಲಿ ತಿಳಿಸಿರುವ ಮಾಹಿತಿ ಪ್ರಕಾರ, ಸುರ್ಯಪೇಟ್ ಜಿಲ್ಲೆಯ ಕೋಡಾಡ ಮಂಡಲ್ ನ ನಿವಾಸಿ ಅಜಯ್ ಹಾಗೂ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಇಂದ್ರಜಾ ಜತೆ ಮದುವೆ ನಿಶ್ಚಯವಾಗಿತ್ತು.
ಅಕ್ಟೋಬರ್ 29ರಂದು ಮದುವೆ ಸಮಾರಂಭದಲ್ಲಿ ಮದುವೆ ದಿಬ್ಬಣವನ್ನು ಗ್ರಾಮದ ಹೊರಗೆ ತೆಗೆದುಕೊಂಡು ಹೋಗುವ ವಿಚಾರದಲ್ಲಿ ವಧು ಮತ್ತು ವರನ ಕುಟುಂಬದ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಈ ವಾಗ್ವಾದ ನಂತರ ವಿಕೋಪಕ್ಕೆ ತಿರುಗಿದ್ದು ಮದುವೆ ಮನೆಯಲ್ಲಿದ್ದ ಕುರ್ಚಿಗಳಲ್ಲೇ ಹೊಡೆದಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ್ದೇವು. ಘಟನೆಯಲ್ಲಿ ಮೂವರು ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೇವು. ಈ ಬಗ್ಗೆ ದೂರು ದಾಖಲಿಸುವಂತೆ ತಿಳಿಸಿದ್ದೇವು. ಅದರಂತೆ ಶುಕ್ರವಾರ ಪೊಲೀಸ್ ಠಾಣೆಗೆ ಆಗಮಿಸಿದ ಕುಟುಂಬದ ಸದಸ್ಯರು, ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಿನ್ನೆ ನಡೆದ ಘಟನೆ ಬಗ್ಗೆ ನಾವೇ ಬಗೆಹರಿಸಿಕೊಂಡಿದ್ದು, ದೂರು ದಾಖಲಿಸುವುದಿಲ್ಲ ಎಂದು ತಿಳಿಸಿರುವುದಾಗಿ ಸರ್ಕಲ್ ಇನ್ಸ್ ಪೆಕ್ಟರ್ ರೆಡ್ಡಿ ವಿವರಿಸಿದ್ದಾರೆ.