Advertisement

ಬಂಟ್ವಾಳ ತಾಲೂಕಿನ 3 ಗ್ರಾ.ಪಂ. ಕೈಬಿಡಲು ತೀರ್ಮಾನ

05:00 AM Oct 09, 2019 | mahesh |

ಬಂಟ್ವಾಳ: ಮಂಗಳೂರು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡು ಉಳ್ಳಾಲ ತಾಲೂಕನ್ನು ಈ ಹಿಂದಿನ ಸರಕಾರ ಘೋಷಣೆ ಮಾಡಿದ್ದರೂ ಬಂಟ್ವಾಳ ತಾಲೂಕಿನ 3 ಗ್ರಾ.ಪಂ. ವ್ಯಾಪ್ತಿಯಿಂದ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಅವನ್ನು ಕೈಬಿಟ್ಟು, 2 ನಗರ ಸ್ಥಳೀಯಾಡಳಿತ ಮತ್ತು 18 ಗ್ರಾ.ಪಂ.ಗಳನ್ನು ಒಳಗೊಂಡ ಉಳ್ಳಾಲ ತಾಲೂಕು ರಚನೆಗೆ ಸಿದ್ಧತೆ ನಡೆದಿದೆ.

Advertisement

ಕಳೆದ ಫೆಬ್ರವರಿಯಲ್ಲಿ ಯು.ಟಿ. ಖಾದರ್‌ ಸಚಿವರಾಗಿದ್ದ ವೇಳೆ ರಾಜ್ಯ ಸರಕಾರ ಉಳ್ಳಾಲ ತಾಲೂಕು ಘೋಷಣೆ ಮಾಡಿತ್ತು. ಬಂಟ್ವಾಳ ತಾಲೂಕಿನಲ್ಲಿದ್ದು, ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಪುದು, ತುಂಬೆ ಮತ್ತು ಮೇರಮಜಲು ಗ್ರಾ.ಪಂ.ಗಳನ್ನು ಉಳ್ಳಾಲ ತಾಲೂಕಿನಿಂದ ಕೈಬಿಡಲಾಗಿತ್ತು.ಆದರೆ ಬಳಿಕ ತುಂಬೆಯಿಂದ ಸಜೀಪಕ್ಕೆ ಕೆಆರ್‌ಡಿಸಿಎಲ್‌ ಮೂಲಕ 22 ಕೋ.ರೂ.ಗಳಲ್ಲಿ ಸೇತುವೆಯೊಂದರ ಪ್ರಸ್ತಾವ ಬಂದಾಗ ಈ 3 ಗ್ರಾ.ಪಂ. ಗಳನ್ನು ಉಳ್ಳಾಲಕ್ಕೆ ಸೇರಿಸುವ ಕುರಿತು ಮಾತುಗಳು ಕೇಳಿಬಂದಿದ್ದವು. ಆದರೆ ಈ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ವಿರೋಧದ ಮಾತುಗಳು ಕೇಳಿಬಂದಿದ್ದು, ಪ್ರಸ್ತುತ ಕೈಬಿಡಲು ನಿರ್ಧರಿಸಲಾಗಿದೆ.

2 ನಗರ, 18 ಗ್ರಾಮೀಣ ಸ್ಥಳೀಯಾಡಳಿತ 
ಉಳ್ಳಾಲ ತಾಲೂಕು ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ 2 ನಗರ ಸ್ಥಳೀಯ ಸಂಸ್ಥೆಗಳು ಮತ್ತು 18 ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಸೇರ್ಪಡೆಯಾಗಲಿವೆ.

ಸುತ್ತು ಬಳಸಿ ಪ್ರಯಾಣ
ಸದ್ಯ ಬಂಟ್ವಾಳ ತಾಲೂಕಿನ ಪುದು, ಮೇರಮಜಲು ಮತ್ತು ತುಂಬೆ ಗ್ರಾ.ಪಂ.ಗಳು ಉಳ್ಳಾಲಕ್ಕೆ ಸೇರ್ಪಡೆ ಯಾದಲ್ಲಿ ತಾಲೂಕು ಕಚೇರಿ ಸಂಪರ್ಕಿಸಬೇಕಾದರೆ ಮೆಲ್ಕಾರ್‌ಗೆ ತೆರಳಿ ಬಳಿಕ ಮುಡಿಪು ರಸ್ತೆ ಅಥವಾ ಪಂಪ್‌ವೆಲ್‌ಗೆ ತೆರಳಿ ತೊಕ್ಕೊಟ್ಟು ಮೂಲಕ ಸುತ್ತು ಬಳಸಿ ತೆರಳಬೇಕಿದೆ.

ಬಂಟ್ವಾಳ ತಾಲೂಕು ಕೇಂದ್ರವನ್ನು ಸಂಪರ್ಕಿಸಲು 5-10 ಕಿ.ಮೀ. ಒಂದೇ ಹೆದ್ದಾರಿಯಲ್ಲಿ ಸಾಗಿದರೆ ಸಾಕಾಗುತ್ತದೆ. ಹೀಗಾಗಿ ಅವರು ತಮ್ಮನ್ನು ಬಂಟ್ವಾಳ ದಲ್ಲೇ ಉಳಿಸಬೇಕು ಎಂಬ ತೀರ್ಮಾನಕ್ಕೆ ಬಂದಿದ್ದು, ಈ 3 ಗ್ರಾ.ಪಂ.ಗಳನ್ನು ಕೈಬಿಡಲು ತೀರ್ಮಾನಿಸಿದೆ.
ತಾಲೂಕು ಅನುಷ್ಠಾನ ಸದ್ಯ ನೋಟಿಫಿಕೇಶನ್‌ ಹಂತದಲ್ಲಿದ್ದು, ಈಗಿನ ಸರಕಾರ ಉತ್ಸುಕತೆ ತೋರಿದರೆ ವಿಶೇಷ ತಹಶೀಲ್ದಾರ್‌ ನೇಮಿಸುವ ಕಾರ್ಯ ನಡೆಯಲಿದೆ. ಬಳಿಕ ಉಳ್ಳಾಲ ಹೋಬಳಿ ಘೋಷಣೆ ಮಾಡಿ ತಾಲೂಕು ಅನುಷ್ಠಾನ ನಡೆಯಬೇಕಿದೆ.

Advertisement

ತಾಲೂಕು ಆದಲ್ಲಿ ತಾಲೂಕು ಕಚೇರಿಗೆ ಇನ್ನಿತರ ಇಲಾಖೆಗಳು ಬರಬೇಕಿರುವುದರಿಂದ ಸಾಕಷ್ಟು ಸ್ಥಳಾವಕಾಶ ಅಗತ್ಯ. ನಗರ ಪ್ರದೇಶದಲ್ಲಿ ಅದು ಲಭ್ಯವಾಗದೆ ಇದ್ದರೆ ತಾಲೂಕು ಕೇಂದ್ರ ಗ್ರಾಮೀಣ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯೂ ಇದೆ.

ಮೂರು ಗ್ರಾ.ಪಂ. ಕೈಬಿಡಲು ತೀರ್ಮಾನ
ಬಂಟ್ವಾಳ ತಾಲೂಕಿನ ಮೂರು ಗ್ರಾ.ಪಂ.ಗಳ ಜನರಿಗೆ ತೊಂದರೆಯಾಗಲಿದೆ ಎಂಬ ದೃಷ್ಟಿಯಿಂದ ಉಳ್ಳಾಲ ತಾಲೂಕಿನ ಪಟ್ಟಿಯಿಂದ ಪುದು, ಮೇರಮಜಲು, ತುಂಬೆಗಳನ್ನು ಕೈಬಿಡುವ ಕುರಿತು ತೀರ್ಮಾನಿಸಲಾಗಿದೆ. ತಾಲೂಕು ರಚನೆಯ ಪ್ರಸ್ತಾಪ ಸದ್ಯಕ್ಕೆ ನೋಟಿಫಿಕೇಶನ್‌ ಹಂತದಲ್ಲಿದ್ದು, ಮುಂದೆ ವಿಶೇಷ ತಹಶೀಲ್ದಾರ್‌ ನೇಮಕ ಕಾರ್ಯ ನಡೆಯಲಿದೆ.
-ಯು.ಟಿ. ಖಾದರ್‌
ಶಾಸಕರು, ಮಂಗಳೂರು ವಿಧಾನಸಭಾ ಕ್ಷೇತ್ರ

ಹೆಚ್ಚು ಗ್ರಾ.ಪಂ.  ಹೆಗ್ಗಳಿಕೆಗೆ ಕುತ್ತು!
ಪ್ರಸ್ತುತ ದ.ಕ. ಜಿಲ್ಲೆಯ ಎಲ್ಲ ತಾಲೂಕುಗಳ ಪೈಕಿ ಮಂಗಳೂರು 55 ಗ್ರಾ.ಪಂ.ಗಳನ್ನು ಹೊಂದಿದ್ದು, 2ನೇ ಅತಿಹೆಚ್ಚು ಗ್ರಾ.ಪಂ. ಹೊಂದಿರುವ ತಾಲೂಕು ಎಂಬ ಹೆಗ್ಗಳಿಕೆ ಹೊಂದಿತ್ತು. ಮಂಗಳೂರಿನ 11 ಗ್ರಾ.ಪಂ.ಗಳು ಉಳ್ಳಾಲಕ್ಕೆ ಸೇರಿದರೆ ಸಂಖ್ಯೆ 44ಕ್ಕೆ ಇಳಿಯಲಿದ್ದು, ಆಗ ಬೆಳ್ತಂಗಡಿ (48 ಗ್ರಾ.ಪಂ.ಗಳು) 2ನೇ ಸ್ಥಾನಕ್ಕೇರಲಿದೆ. ಪ್ರಸ್ತುತ 58 ಗ್ರಾ.ಪಂ.ಗಳನ್ನು ಹೊಂದಿರುವ ಬಂಟ್ವಾಳ ತಾಲೂಕಿನ 7 ಗ್ರಾ.ಪಂ.ಗಳು ಉಳ್ಳಾಲ ಸೇರಿದರೂ ಅದರ ಅತಿಹೆಚ್ಚು ಗ್ರಾ.ಪಂ. ಇರುವ ತಾಲೂಕು ಎಂಬ ಹೆಗ್ಗಳಿಕೆಗೆ ಕುತ್ತು ಬಾರದು.

Advertisement

Udayavani is now on Telegram. Click here to join our channel and stay updated with the latest news.

Next