Advertisement

ಉಜಿರೆ ಆಸುಪಾಸು ಮೂರು ಕಡೆ ಬೆಂಕಿ ಪ್ರಕರಣ

10:37 PM Mar 03, 2023 | Team Udayavani |

ಬೆಳ್ತಂಗಡಿ: ಉಜಿರೆಯ ಎರಡು ಕಡೆ ಮತ್ತು ಮುಂಡಾಜೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದ ಘಟನೆ ಶುಕ್ರವಾರ ನಡೆದಿದೆ.

Advertisement

ಮುಂಡಾಜೆ ಗ್ರಾಮದ ಕಡಂಬಳ್ಳಿ ಸಮೀಪ ಗುಡ್ಡದಲ್ಲಿ ಬೆಂಕಿ ಉಂಟಾಗಿ ಭೀತಿಯ ವಾತಾವರಣ ಸೃಷ್ಟಿಯಾಯಿತು. ವಿದ್ಯುತ್‌ ಪರಿವರ್ತಕದಿಂದ ಸಿಡಿದ ಕಿಡಿಗಳಿಂದ ಉಂಟಾದ ಬೆಂಕಿ ಸಮೀಪದ ಗುಡ್ಡವನ್ನು ಆವರಿಸಿ, ರಬ್ಬರ್‌ ತೋಟಕ್ಕೂ ನುಗ್ಗಿತು.

ತಕ್ಷಣ ಸ್ಪಂದಿಸಿದ ಸ್ಥಳೀಯ ಐವತ್ತಕ್ಕಿಂತ ಅದಕ್ಕೆ ಮಂದಿ ಬೆಂಕಿ ಇನ್ನಷ್ಟು ಹರಡದಂತೆ ಕ್ರಮ ಕೈಗೊಂಡ ಕಾರಣದಿಂದ ರಬ್ಬರ್‌ ತೋಟಕ್ಕೆ ಹೆಚ್ಚಿನ ಹಾನಿ ಉಂಟಾಗಿಲ್ಲ. ಬೆಂಕಿ ಉಂಟಾದ ಪರಿಸರದ ಸುತ್ತ ಮನೆಗಳು ಇದ್ದು, ಗಾಳಿಯು ಬೀಸುತ್ತಿದ್ದ ಕಾರಣ ಜನರಲ್ಲಿ ಭಯದ ವಾತಾವರಣ ಉಂಟಾಯಿತು. ಗುಡ್ಡದ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ಸಂಜೆ ವೇಳೆಗೆ ಆಗಮಿಸಿದ ಅಗ್ನಿಶಾಮಕದಳ ನಂದಿಸಿತು.

ಉಜಿರೆಯ ನಿನ್ನಿಗಲ್ಲು ಪ್ರದೇಶದ ಅರಣ್ಯದಲ್ಲಿ ಬೆಂಕಿ ಕಂಡುಬಂದಿದ್ದು ಐದಾರು ಎಕರೆ ಪ್ರದೇಶಕ್ಕೆ ಹರಡಿತು. ಅಗ್ನಿಶಾಮಕ ದಳ, ಶೌರ್ಯ ವಿಪತ್ತು ತಂಡದ ಸದಸ್ಯರು ಹಾಗೂ ಸ್ಥಳೀಯರ ಸಹಕಾರದಲ್ಲಿ ಬೆಂಕಿಯನ್ನು ಹತೋಟಿಗೆ ತರಲಾಯಿತು. ಇದರಿಂದ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ.

ಉಜಿರೆ ಹಳೆಪೇಟೆಯ ಹೆದ್ದಾರಿ ಸಮೀಪವಿರುವ ಲಾಡ್ಜ್ ಒಂದರ ಹಿಂಭಾಗದಲ್ಲಿ ಬೆಂಕಿ ಕಂಡುಬಂದಿದ್ದು ಅಗ್ನಿಶಾಮಕ ದಳದ ಸಹಕಾರದಲ್ಲಿ ನಂದಿಸಲಾಯಿತು.
ಸಮಯಕ್ಕೆ ಸಿಗದ ಅಗ್ನಿಶಾಮಕ ವಾಹನ.

Advertisement

ಮುಂಡಾಜೆಯ ಕಡಂಬಳ್ಳಿ ಪರಿಸರದಲ್ಲಿ ಬೆಂಕಿ ಕಂಡುಬಂದ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲು ಬಿಎಸ್ಸೆಎನ್ನೆಲ್‌ನ ನೆಟ್‌ವರ್ಕ್‌ ಸಮಸ್ಯೆ ಅಡ್ಡಿಯಾಯಿತು. ಇದರಿಂದ ಅಗತ್ಯ ದೂರವಾಣಿ ಸಂಖ್ಯೆಗಳಿಗೆ ಕರೆ ಸಿಗದೆ ಪರದಾಟ ನಡೆಸಬೇಕಾಯಿತು. ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿಯ ಮೊಬೈಲ್‌ ಸಂಖ್ಯೆಯನ್ನು ಸಂಗ್ರಹಿಸಿ ಕರೆ ಮಾಡಲಾಯಿತು. ಆದರೆ ಅಲ್ಲಿರುವ ಎರಡು ವಾಹನಗಳು ಬೇರೆಡೆಗೆ ತೆರಳಿದ್ದ ಕಾರಣದಿಂದ ಸಮಯಕ್ಕೆ ಸೇವೆ ದೊರೆಯದೆ ಬೆಂಕಿ ಪ್ರಕರಣ ನಡೆದ ಸುಮಾರು ಮೂರು ಗಂಟೆಗಳ ಬಳಿಕವಷ್ಟೇ ವಾಹನ ಆಗಮಿಸಿತು.

ಡಿ.ಎಫ್‌.ಒ. ಭೇಟಿ
ಮುಂಡಾಜೆಯ ಕಡಂಬಳ್ಳಿ ಹಾಗೂ ಇನ್ನಿತರ ಬೆಂಕಿ ಅನಾಹುತ ಉಂಟಾದ ಸ್ಥಳಗಳಿಗೆ ಜಿಲ್ಲಾ ಅಗ್ನಿಶಾಮಕ ದಳದ ಡಿ ಎಫ್ ಒ ಭರತ್‌ ಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು. ಮೆಸ್ಕಾಂ ಜೆಇ ಕೃಷ್ಣೇಗೌಡ, ಸಮಾಜಸೇವಕ ಸಚಿನ್‌ ಭಿಡೆ ಮತ್ತಿತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next