Advertisement

ಇಂದಿನಿಂದ 3 ದೇಸಿ ಕಾನೂನು ಜಾರಿ; ಏನೆಲ್ಲ ಹೊಸತು?

01:52 AM Jul 01, 2024 | Team Udayavani |

ಹೊಸದಿಲ್ಲಿ: ವಸಹಾತುಶಾಹಿಯ ಪಳೆಯುಳಿಕೆಯಂತಿದ್ದ ಮೂರು ಕ್ರಿಮಿನಲ್‌ ಕಾಯ್ದೆಗಳಿಗೆ ಬದಲಾವಣೆ ತಂದು ಪರಿಚಯಿಸ ಲಾದ ಹೊಸ ಕಾನೂನುಗಳು ಸೋಮವಾರದಿಂದ ದೇಶಾದ್ಯಂತ ಜಾರಿಯಾಗಲಿವೆ.

Advertisement

ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಬದಲಿಗೆ ಭಾರ ತೀಯ ನ್ಯಾಯ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಬದಲಿಗೆ ಭಾರ ತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಸಾಕ್ಷ್ಯ ಕಾಯ್ದೆಯ ಬದಲಿಗೆ ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೆ ಬರಲಿವೆ.

ಈ ಮೊದಲು ಜಾರಿಯಲ್ಲಿದ್ದ ಕ್ರಿಮಿನಲ್‌ ಕಾನೂನುಗಳು ಬ್ರಿಟಿಷ್‌ ಕಾಲದವುಗಳಾಗಿದ್ದವು. ಇವುಗಳಲ್ಲಿ ವಸಾಹಾತುಶಾಹಿ ಮನಃಸ್ಥಿತಿ ತುಂಬಿತ್ತು ಎಂಬ ಕಾರಣಕ್ಕೆ ಹಾಗೂ ಜನರಿಗೆ ತ್ವರಿತವಾಗಿ ನ್ಯಾಯ ಒದಗಿಸಬೇಕು ಎಂಬ ಉದ್ದೇಶ ದಿಂದ ಹೊಸ ಕಾನೂನುಗಳನ್ನು ರಚನೆ ಮಾಡ ಲಾಗಿತ್ತು. ಯಾವುದೇ ಠಾಣೆಯಲ್ಲಿ ಎಫ್ಐಆರ್‌ ರಚನೆ ಮಾಡಬಹುದಾದ ಅವಕಾಶ (ಜೀರೋ ಎಫ್ಐಆರ್‌), ಅಪರಾಧ ಪ್ರಕರಣಗಳಲ್ಲಿ ಕಡ್ಡಾಯವಾಗಿ ವೀಡಿಯೋ ಚಿತ್ರೀಕರಣ, ಆನ್‌ಲೈನ್‌ನಲ್ಲಿ ದೂರು ದಾಖಲು, ಎಸ್‌ಎಂಎಸ್‌ ಮೂಲಕ ಎಲೆಕ್ಟ್ರಾನಿಕ್‌ ಸಮನ್ಸ್‌ ಮುಂತಾದ ಅವಕಾಶಗಳನ್ನು ಈ ಹೊಸ ಕಾನೂನುಗಳು ನೀಡುತ್ತವೆ.

45 ದಿನಗಳಲ್ಲಿ ಶಿಕ್ಷೆ ಘೋಷಣೆ
ವಿಚಾರಣೆ ಮುಗಿದ 45 ದಿನಗಳ ಒಳಗೆ ಅಪರಾಧಿಗಳಿಗೆ ಶಿಕ್ಷೆ ಘೋಷಣೆ ಮಾಡಬೇಕು. ಅಲ್ಲದೆ ಮೊದಲ ವಿಚಾರಣೆ ನಡೆದ 60 ದಿನಗಳ ಒಳಗೆ ಆರೋಪಗಳನ್ನು ಪಟ್ಟಿ ಮಾಡಬೇಕು ಎಂಬುದನ್ನು ಹೊಸ ಕಾನೂನುಗಳಲ್ಲಿ ಸೇರ್ಪಡೆ ಮಾಡಲಾಗಿದೆ. ಇದು ತ್ವರಿತ ನ್ಯಾಯದಾನಕ್ಕೆ ಸಹಾಯಕವಾಗಲಿದೆ. ಜತೆಗೆ ಅತ್ಯಾಚಾರಕ್ಕೆ ತುತ್ತಾದ ಮಹಿಳೆಯ ಹೇಳಿಕೆಯನ್ನು ಮಹಿಳಾ ಪೊಲೀಸರೇ ದಾಖಲಿಸಬೇಕು ಎಂಬುದನ್ನು ಇದರಲ್ಲಿ ಸೇರಿಸಲಾಗಿದೆ. ಐಪಿಸಿಯಲ್ಲಿ ದಾಖಲಾದ ಅಪರಾಧಗಳಾದ ಮದುವೆಯಾಗುವುದಾಗಿ ಸುಳ್ಳು ಭರವಸೆ, ಅಪ್ರಾಪ್ತ ವಯಸ್ಸಿನವರ ಮೇಲೆ ಸಾಮೂಹಿಕ ಅತ್ಯಾಚಾರ, ಗುಂಪುಹಲ್ಲೆ ಮತ್ತು ಸರಗಳ್ಳತನಗಳನ್ನು ಅಪರಾಧಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಮೂರು ಹೊಸ ಕಾನೂನುಗಳನ್ನು ಜಾರಿ ಮಾಡಲು ಕೇಂದ್ರ ಸರಕಾರ ಭರದ ಸಿದ್ಧತೆಗಳನ್ನು ಕೈಗೊಂಡಿದೆ. ಎನ್‌ಸಿಆರ್‌ಬಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತರಬೇತಿಯನ್ನು ನೀಡಲಾಗಿದೆ. ಸಹಾಯಕ ತಂಡಗಳು ಮತ್ತು ಕಾಲ್‌ ಸೆಂಟರ್‌ಗಳನ್ನು ತೆರೆಯಲಾಗಿದೆ. ದೇಶದ 17,500ಕ್ಕೂ ಹೆಚ್ಚು ಪೊಲೀಸ್‌ ಠಾಣೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Advertisement

ಏನಿತ್ತು? ಏನಾಯಿತು?
-ಭಾರತೀಯ ದಂಡ ಸಂಹಿತೆ – ಭಾರತೀಯ ನ್ಯಾಯ ಸಂಹಿತೆ
-ಅಪರಾಧ ಪ್ರಕ್ರಿಯಾ ಸಂಹಿತೆ – ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ
-ಸಾಕ್ಷ್ಯ ಕಾಯ್ದೆ – ಭಾರತೀಯ ಸಾಕ್ಷ್ಯ ಅಧಿನಿಯಮ

ಏನೆಲ್ಲ ಹೊಸತು?
-ಶೂನ್ಯ ಎಫ್ಐಆರ್‌
-ಕಡ್ಡಾಯ ವೀಡಿಯೋ ಚಿತ್ರೀಕರಣ
-ಆನ್‌ಲೈನ್‌ ಮೂಲಕ ದೂರು ದಾಖಲು
-ಎಸ್‌ಎಂಎಸ್‌ ಮೂಲಕ ಸಮನ್ಸ್‌
-45 ದಿನಗಳ ಒಳಗೆ ಶಿಕ್ಷೆ ಘೋಷಣೆ
-60 ದಿನಗಳ ಒಳಗೆ ಆರೋಪಪಟ್ಟಿ ಸಲ್ಲಿಕೆ

Advertisement

Udayavani is now on Telegram. Click here to join our channel and stay updated with the latest news.

Next