Advertisement

3 DCM; ಜಾತಿಗೊಂದು ಡಿಸಿಎಂ ಅಗತ್ಯವಿಲ್ಲ: ಸಚಿವ ಶಿವಾನಂದ ಪಾಟೀಲ್

10:27 PM Sep 22, 2023 | Team Udayavani |

ವಿಜಯಪುರ : ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಇಬ್ಬರೂ ರಾಜ್ಯದಲ್ಲಿ ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಹೀಗಾಗಿ ಇನ್ನೂ ಮೂರು ಅಥವಾ ಜಾತಿಗೊಂದು ಮುಖ್ಯಮಂತ್ರಿ ನೇಮಕದ ಅಗತ್ಯವಿಲ್ಲ ಎಂದು ಸಕ್ಕರೆ, ಜವಳಿ ಸಚಿವ ಶಿವಾನಂದ ಪಾಟೀಲ ಪ್ರತಿಕ್ರಿಯಿಸಿದ್ದಾರೆ.

Advertisement

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಜಾತಿಗೊಬ್ಬರನ್ನು ಉಪ ಮುಖ್ಯಮಂತ್ರಿ ಮಾಡಿತ್ತು ಎಂದ ಸಚಿವ ಶಿವಾನಂದ, ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರು ಈ ವಿಷಯದಲ್ಲಿ ನೀಡಿರುವ ಹೇಳಿಕೆ ಅವರ ವಯಕ್ತಿಕ ಅಭಿಪ್ರಾಯ.

ಜಾತಿಗೆ ಒಬ್ಬರನ್ನು ಉಪ ಮುಖ್ಯಮಂತ್ರಿ ಮಾಡಿದರೆ ಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿದೆ ಎಂಬ ವಿಷಯದಲ್ಲೂ ನನಗೆ ನಂಬಿಕೆ ಇಲ್ಲ. ಇದರ ಮಧ್ಯೆ ಇಂಥ ವಿಷಯದಲ್ಲಿ ಪಕ್ಷದ ವರಿಷ್ಠರ ನಿರ್ಧಾರವೇ ಅಂತಿಮ ಎಂದರು.

ಪಂಚಮಸಾಲಿ ಸಮಾಜಕ್ಕೆ 2-ಎ ಮೀಸಲಾತಿ ನೀಡುವ ಕುರಿತ ಹೋರಾಟಕ್ಕೆ ನನ್ನ ಬೆಂಬಲ ಸದಾ ಇದ್ದೇ ಇದೆ. ಪಂಚಮಸಾಲಿ ಸಮಾಜಕ್ಕೆ 2-ಎ ಮೀಸಲು ಮಾತ್ರವಲ್ಲ ಇಡೀ ಲಿಂಗಾಯತ ಸಮುದಾಯವನ್ನು ಕೇಂದ್ರದ ಇತರೆ ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸುವ ಕುರಿತ ಹೋರಾಟಕ್ಕೂ ನನ್ನ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ನಾಲ್ಕು ಯೋಜನೆಗಳನ್ನು ಅನುಷ್ಠಾನ ಮಾಡಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಇತರೆ ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ ಮಾಡುವ ಪ್ರಶ್ನೆಯೇ ಇಲ್ಲ. ಬರುವ ಆರ್ಥಿಕ ವರ್ಷದಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದಾಗ ಎಲ್ಲ ಯೋಜನೆಗಳಿಗೂ ಅಗತ್ಯ ಅನುದಾನ ಸಿಗಲಿದೆ ಎಂದು ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡರು.

Advertisement

ಕೇಂದ್ರ ಮಧ್ಯಸ್ಥಿಕೆ ವಹಿಸಲಿ

ದೇಶದ ಅಂತಾರಾಜ್ಯಗಳ ಮಧ್ಯೆ ಇರುವ ಜಲ ವಿವಾದ ಬಗರೆ ಹರಿಸುವಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುತ್ತಿಲ್ಲ. ಪರಿಣಾಮವೇ ಕರ್ನಾಟಕ ರಾಜ್ಯ ತಮಿಳುನಾಡು ಸೇರಿದಂತೆ ನೆರೆಯ ರಾಜ್ಯಗಳೊಂದಿಗೆ ಕಾನೂನು ಹೋರಾಟ ನಡೆಸುವ ದುಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.

ಕೇಂದ್ರ ಸರ್ಕಾರ ಅಂತರ ರಾಜ್ಯಗಳ ಮಧ್ಯೆ ಇರುವ ಜಲ ವಿವಾದಗಳನ್ನು ಬಗೆ ಹರಿಸುವಲ್ಲಿ ಮಧ್ಯಸ್ಥಿಕೆ ವಹಿಸುವ ಕಾಳಜಿ ತೋರದ ಕಾರಣ ಪ್ರಕರಣಗಳು ಕೋರ್ಟ ಮೆಟ್ಟಿಲೇರುವಂತಾಗಿದೆ. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿದಲ್ಲಿ ಅಂತರ ರಾಜ್ಯಗಳ ಜಲ ವಿವಾದ ಬಗೆ ಹರಿದು, ನೀರಿನ ಬಳಕೆಯಿಂದ ರಾಜ್ಯಗಳ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದರು.

ಪರಿಣಾಮ ಕರ್ನಾಟಕ ರಾಜ್ಯ ತನ್ನ ಪಾಲಿನೆ ನೀರಿನ ಬಳಕೆಗಾಗಿ ತಮಿಳುನಾಡು, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳೊಂದಿಗೆ ಹೋರಾಟ ನಡೆಸಬೇಕಾಗಿದೆ. ಹೀಗಾದರೆ ಎಲ್ಲ ರಾಜ್ಯಗಳಿಗೂ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಷಯದಲ್ಲಿ ಸುಪ್ರೀಂ ಕೋರ್ಟ ಆದೇಶಕ್ಕೆ ಗೌರವ ಕೊಡಲೇಬೇಕಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ದೆಹಲಿಯಲ್ಲಿ ಉತ್ತರಿಸಿದ್ದಾರೆ ಎಂದರು.

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಷಯದಲ್ಲಿ ರಾಜ್ಯದ ಜಲಾಶಯಗಳಲ್ಲಿನ ನೀರಿನ ಲಭ್ಯತೆ ಕುರಿತು ರಾಜ್ಯ ಸರ್ಕಾರದ ಕಾನೂನು ತಂಡ ಸುಪ್ರೀಂ ಕೋರ್ಟ್‍ಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ ಎಂಬ ಆರೋಪ ಸರಿಯಲ್ಲ. ಈ ಹಿಂದೆ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಏನಾಗಿತ್ತು ಎಂಬುದು ನಮಗೆಲ್ಲ ಗೊತ್ತಿದೆ. ಹೀಗಾಗಿ ನ್ಯಾಯಾಲಯಕ್ಕೂ ಮಾನ್ಯತೆ ನೀಡಬೇಕಿದೆ. ರೈತರ ಹಿತವನ್ನು ಕಾಪಾಡಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next