ಗುನಾ(ಮಧ್ಯಪ್ರದೇಶ): ಮಧ್ಯಪ್ರದೇಶದ ಗುನಾ ಜಿಲ್ಲೆಯ ಅರಣ್ಯಪ್ರದೇಶದಲ್ಲಿ ಕೃಷ್ಣಮೃಗ ಬೇಟೆಗಾರರು ಮೂವರು ಪೊಲೀಸರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಶನಿವಾರ ನಸುಕಿನ ವೇಳೆ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಫ್ಲಿಪ್ ಕಾರ್ಟ್ ಕಸ್ಟಮರ್ ಕೇರ್ ಸಿಬ್ಬಂದಿ ಎಂದು ನಂಬಿಸಿ ಸಾವಿರಾರೂ ರೂ. ವಂಚನೆ
ಜೀಪ್ ನಲ್ಲಿ ತೆರಳಿದ್ದ ಪೊಲೀಸ್ ತಂಡ ಮತ್ತು ಶಸ್ತ್ರಾಸ್ತ್ರಧಾರಿ ಕಳ್ಳ ಬೇಟೆಗಾರರು ಮುಖಾಮುಖಿಯಾದ ಸಂದರ್ಭದಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿರುವುದಾಗಿ ಗುನಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಪೊಲೀಸರು ಪ್ರತಿದಾಳಿ ನಡೆಸಿದ್ದರೂ ಕೂಡಾ ದಟ್ಟಾರಣ್ಯದಲ್ಲಿ ಕಳ್ಳಬೇಟೆಗಾರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಘಟನೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಮೂವರು ಸಾವನ್ನಪ್ಪಿರುವುದಾಗಿ ಮಿಶ್ರಾ ತಿಳಿಸಿದ್ದಾರೆ.
ವನ್ಯಜೀವಿ ಕಳ್ಳ ಬೇಟೆಗಾರರ ಗುಂಡಿನ ದಾಳಿಗೆ ಸಬ್ ಇನ್ಸ್ ಪೆಕ್ಟರ್ ರಾಜ್ ಕುಮಾರ್ ಜಾಟ್ವ್, ಹೆಡ್ ಕಾನ್ಸ್ ಟೇಬಲ್ ಸಂತ್ ಕುಮಾರ್ ಮಿನಾ ಮತ್ತು ಕಾನ್ಸ್ ಟೇಬಲ್ ನೀರಜ್ ಭಾರ್ಗವ್ ಸಾವನ್ನಪ್ಪಿದ್ದು, ಪೊಲೀಸ್ ವಾಹನದ ಚಾಲಕ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.
ಗುನಾ ಅರಣ್ಯ ಪ್ರದೇಶದಲ್ಲಿ ಕೃಷ್ಣಮೃಗ ಬೇಟೆಯಾಡಲು ಕೆಲವು ಕಳ್ಳಬೇಟೆಗಾರರು ಠಿಕಾಣಿ ಹೂಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಅರಣ್ಯಪ್ರದೇಶದಲ್ಲಿ ಹಲವಾರು ಕೃಷ್ಣಮೃಗಗಳ ದೇಹದ ಭಾಗಗಳನ್ನು ವಶಪಡಿಸಿಕೊಂಡಿರುವುದಾಗಿ ಮಿಶ್ರಾ ತಿಳಿಸಿದ್ದಾರೆ.