ಪೋರಬಂದರ್: ಗುಜರಾತ್ ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಭಾರತೀಯ ವಾಯುಪಡೆಯ ಲಘು ಹೆಲಿಕಾಪ್ಟರ್ ಧ್ರುವ ಪೋರಬಂದರ್‌ನಿಂದ 45 ಕಿಮೀ ದೂರದ ಅರಬ್ಬೀ ಸಮುದ್ರದಲ್ಲಿ ಪತನಗೊಂಡಿದ್ದು, ಹೆಲಿಕಾಪ್ಟರ್ ನಲ್ಲಿದ್ದ ಇಬ್ಬರು ಕೋಸ್ಟ್ ಗಾರ್ಡ್ ಪೈಲಟ್ ಗಳು ಸೇರಿ ಒಟ್ಟು ಮೂವರು ಸಿಬ್ಬಂದಿಗಳು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಗುಜರಾತ್‌ನ ಪೋರಬಂದರ್ ಕರಾವಳಿಯ ಭಾಗವಾದ ಹರಿ ಲೀಲಾದಲ್ಲಿ ಪ್ರವಾಹದಲ್ಲಿ ಸಿಲುಕಿ ಗಾಯಗೊಂಡ ಸಿಬ್ಬಂದಿಯನ್ನು ಸ್ಥಳಾಂತರಿಸಲು ಸೆಪ್ಟೆಂಬರ್ 2 ರಂದು ರಾತ್ರಿ 11 ಗಂಟೆಗೆ ಹೆಲಿಕಾಪ್ಟರ್ ಕಳುಹಿಸಿಕೊಡಲಾಗಿತ್ತು ಈ ವೇಳೆ ಹೆಲಿಕಾಪ್ಟರ್ ಸಮುದ್ರದಲ್ಲಿ ಪತನಗೊಂಡಿದೆ ಎನ್ನಲಾಗಿದೆ. ನಾಪತ್ತೆಯಾದ ಮೂವರ ಕಾರ್ಯಾಚರಣೆಗೆ ಭಾರತೀಯ ಕೋಸ್ಟ್ ಗಾರ್ಡ್ ನಾಲ್ಕು ಹಡಗುಗಳು ಮತ್ತು 2 ವಿಮಾನಗಳನ್ನು ನಿಯೋಜಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಲಿಕಾಪ್ಟರ್ ನಲ್ಲಿ ಒಟ್ಟು ನಾಲ್ವರು ಸಿಬಂದಿಗಳಿದ್ದರು ಎಂದು ಹೇಳಲಾಗಿದ್ದು ರಕ್ಷಣಾ ತಂಡ ಓರ್ವ ಸಿಬ್ಬಂದಿಯನ್ನು ರಕ್ಷಣೆ ಮಾಡಿರುವುದಾಗಿ ಹೇಳಿಕೊಂಡಿದೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಹೆಲಿಕಾಪ್ಟರ್ ಅವಶೇಷಗಳು ಸಮುದ್ರದಲ್ಲಿ ಪತ್ತೆಯಾಗಿದ್ದು ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದ್ದು ತನಿಖೆ ಬಳಿಕವೇ ನಿಖರ ಕಾರಣ ತಿಳಿದುಬರಬೇಕಾಗಿದೆ.