ಕೋಲ್ಕತಾ: ಭಾರತೀಯ ಜನತಾ ಪಕ್ಷದ ಸಂಸದ ಅರ್ಜುನ್ ಸಿಂಗ್ ಅವರ ಮನೆ ಸಮೀಪ ಬುಧವಾರ (ಸೆ.08) ನಸುಕಿನ ವೇಳೆ ಮೂರು ಬಾಂಬ್ ಗಳನ್ನು ಎಸೆದಿರುವ ಘಟನೆ ಕೋಲ್ಕತಾದಲ್ಲಿ ನಡೆದಿದೆ. ಆದರೆ ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಹಸುಗೂಸನ್ನು ಪೊದೆಗೆಸೆದು ಹೋದ ಕ್ರೂರಿಗಳು | ಸ್ಥಳಿಯರಿಂದ ಮಗುವಿನ ರಕ್ಷಣೆ
ಬಿಜೆಪಿ ಸಂಸದ ಸಿಂಗ್ ಅವರ ನಿವಾಸದ ಬಳಿ ಬಾಂಬ್ ದಾಳಿ ನಡೆಸಿದವರು ಬಹುಶಃ ಪಶ್ಚಿಮಬಂಗಾಳದ ಆಡಳಿತಾರೂಢ ತೃಣಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಂಬುದಾಗಿ ಬಿಜೆಪಿ ಅಧ್ಯಕ್ಷ ದಿಲೀಫ್ ಘೋಷ್ ಆರೋಪಿಸಿದ್ದಾರೆ.
ಕೋಲ್ಕತಾದಿಂದ ನೂರು ಕಿಲೋ ಮೀಟರ್ ದೂರದಲ್ಲಿರುವ ಜಗತ್ದಾಲ್ ಪ್ರದೇಶದಲ್ಲಿರುವ ಬಿಜೆಪಿ ಸಂಸದ ಸಿಂಗ್ ಮನೆ ಸಮೀಪ ಬಾಂಬ್ ಗಳನ್ನು ಎಸೆಯಲಾಗಿತ್ತು. ಇಂದು ಮುಂಜಾನೆ 6.30 ಸುಮಾರಿಗೆ ಬೈಕ್ ನಲ್ಲಿ ಆಗಮಿಸಿದ್ದ ಮೂವರು ಮೂರು ಬಾಂಬ್ ಗಳನ್ನು ಎಸೆದಿರುವುದಾಗಿ ವರದಿ ಹೇಳಿದೆ.
ಬಾಂಬ್ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸಂಸದ ಅರ್ಜುನ್ ಸಿಂಗ್ ದೆಹಲಿಯಲ್ಲಿದ್ದು, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬುಧವಾರ ಸಂಜೆ ಸಿಂಗ್ ಕೋಲ್ಕತಾಗೆ ವಾಪಸ್ ಆಗುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ.
ಪಶ್ಚಿಮಬಂಗಾಳದಲ್ಲಿನ ನಿಷ್ಕಾರಣದ ಹಿಂಸಾಚಾರ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಬೆಳ್ಳಂಬೆಳಗ್ಗೆಯೇ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ನಿವಾಸದ ಹೊರಭಾಗದಲ್ಲಿ ಬಾಂಬ್ ದಾಳಿ ನಡೆಸಿರುವುದು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಆತಂಕ ಮೂಡಿಸಿರುವುದಾಗಿ ಪಶ್ಚಿಮಬಂಗಾಳ ಗವರ್ನರ್ ಜಗ್ ದೀಪ್ ಧಾನ್ಕಾರ್ ತಿಳಿಸಿದ್ದಾರೆ.