ನವದೆಹಲಿ: ಭಾರತೀಯ ಸೇನೆಯ ಮಾಹಿತಿಯನ್ನು ಸಾಮಾಜಿಕ ಜಾಲತಾಣ(ವಾಟ್ಸಪ್)ದ ಮೂಲಕ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪದ ಮೇಲೆ ಹರ್ಯಾಣದ ಹಿಸಾರನ 3
ಕಾರ್ಮಿಕರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಭಾರತೀಯ ಸೇನೆಯ ಶಿಬಿರದ ಫೋಟೋ ಮತ್ತು ವಿಡಿಯೋಗಳು ಬಂಧಿತರ ಮೊಬೈಲ್ ನಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ಆರೋಪಿಸಿದ್ದಾರೆ. ಹಿಸಾರ್ ಕಂಟೋನ್ಮೆಂಟ್ ನಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಮೂವರನ್ನು ಕಾರ್ಮಿಕರನ್ನು ಆಗಸ್ಟ್ 1ರಂದು ಬಂಧಿಸಿರುವುದಾಗಿ ಪೊಲೀಸರು ವಿವರಿಸಿದ್ದಾರೆ.
ಪಾಕಿಸ್ತಾನ ಪರವಾಗಿ ಗೂಢಚಾರಿ ಕೆಲಸ ಮಾಡುತ್ತಿದ್ದ ಮೂವರು ಶಂಕಿತರು ಪಾಕಿಸ್ತಾನಿ ಏಜೆಂಟರನ್ನು ವಾಟ್ಸಪ್ ವಾಯ್ಸ್ ಮತ್ತು ವಿಡಿಯೋ ಕರೆ ಮೂಲಕ ಸಂಪರ್ಕದಲ್ಲಿರುವುದಾಗಿ ವರದಿ ತಿಳಿಸಿದೆ.
ಬಂಧಿತರನ್ನು ಮುಜಾಫರ್ ನಗರದ ಮಹತಾಬ್(28), ಶಾಮ್ಲಿಯ ಖಾಲಿದ್(25) ಹಾಗೂ ಮುಜಾಫರ್ ನಗರದ ರಾಗಿಬ್ (34) ಎಂದು ಗುರುತಿಸಲಾಗಿದೆ. ಹಿಸಾರ್ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.