ಶಿವಮೊಗ್ಗ : ಬಿಜೆಪಿಯಿಂದ ಈ ಬಾರಿ ಮೂವರು ಅಪ್ಪಂದಿರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಅವರು ಶಿಕಾರಿಪುರಕ್ಕೆ ವಿಜಯೇಂದ್ರ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.ಇನ್ನು ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ, ಸಾಗರ ಶಾಸಕ ಹಾಲಪ್ಪ ಅವರಿಗೂ ಟಿಕೆಟ್ ಸಿಗುವುದಿಲ್ಲ ಎಂದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಬಿ ರಿಪೋರ್ಟ್ ನೀಡಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಕೊಲೆಯಾದ ಹರ್ಷ ಮಾತ್ರ ಹಿಂದೂ, ಸಂತೋಷ್ ಹಿಂದೂ ಅಲ್ಲವೇ? ಹರ್ಷನಿಗೆ ಪರಿಹಾರ ನೀಡಿದರು, ಸಂತೋಷ್ ಕುಟುಂಬಕ್ಕೂ 25ಲಕ್ಷ ರೂಪಾಯಿ ಪರಿಹಾರ ನೀಡಿ. ಸಂತೋಷ್ ಪಾಟೀಲ್ ಕುಟುಂಬದ ಕಣ್ಣೀರು ಈಶ್ವರಪ್ಪಗೆ ತಟ್ಟೇ ತಟ್ಟುತ್ತದೆ. ಈಶ್ವರಪ್ಪನವರನ್ನು ತನಿಖೆ ಮಾಡದೇ ಬಿ ರಿಪೋರ್ಟ್ ಹಾಕಲಾಗಿರುವುದು ಹಾಸ್ಯಾಸ್ಪದ ಎಂದರು.
ಶಿವಮೊಗ್ಗ ಕೊಲೆಗಡುಕರ ಜಿಲ್ಲೆಯಾಗಿದೆ. ಹರ್ಷ, ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆಗಳಾಗಿವೆ. ಕೊಲೆ, ಗಾಂಜಾ ಪ್ರಕರಣಗಳು ಹೆಚ್ಚಾಗಿವೆ. ಪಾಲಿಕೆಯಲ್ಲಿನ ಭ್ರಷ್ಟಾಚಾರವನ್ನ ಬಿಜೆಪಿ ನಾಯಕರೇ ಒಪ್ಪಿದ್ದಾರೆ. ಈಶ್ವರಪ್ಪ ಅವರಿಗೆ ಗೊತ್ತಿದ್ದೇ ಇವೆಲ್ಲಾ ನಡೆಯುತ್ತಿದೆ. ಈಶ್ವರಪ್ಪನವರನ್ನ ಅವರ ಪಕ್ಷದವರೇ ಮುಗಿಸುತ್ತಾರೆ ಎಂದರು.
ಬಿಜೆಪಿಗೆ ಬಂಗಾರಪ್ಪ ಟಾನಿಕ್ ಕೊಟ್ಟರು. ಬಂಗಾರಪ್ಪ ಬಿಜೆಪಿಗೆ ಬರದಿದ್ದರೆ ಬಿಜೆಪಿ ನಾಯಕರು ಮೂಲೆಯಲ್ಲಿರುತ್ತಿದ್ದರು. ಈಶ್ವರಪ್ಪ ನಾಯಿಮೊಲೆ ಹಾಲಿದ್ದಂತೆ ಯಾರಿಗೂ ಉಪಯೋಗವಿಲ್ಲ, ಯಡಿಯೂರಪ್ಪನವರನ್ನ ಸಿಎಂ ಸ್ಥಾನದಿಂದ ಕಣ್ಣೀರು ಹಾಕಿಸಿ ಇಳಿಸಿದರು. ಬಿ ಎಲ್ ಸಂತೋಷ್, ಸಿ ಟಿ ರವಿ, ಈಶ್ವರಪ್ಪ ಸೇರಿ ಯಡಿಯೂರಪ್ಪ ರಾಜಕೀಯ ಭವಿಷ್ಯ ಹಾಳು ಮಾಡಿದರು. ಯಡಿಯೂರಪ್ಪ ಕಣ್ಣೀರಿನ ಶಾಪ ಬಿಜೆಪಿ ನಾಯಕರಿಗೆ ತಟ್ಟುತ್ತದೆ. ಯಡಿಯೂರಪ್ಪ ಸ್ಥಿತಿ ನೋಡಿದರೆ ಬೇಸರವಾಗುತ್ತದೆ ಎಂದರು.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಕಾಟಾಚಾರಕ್ಕೆ ಬಂದು ಹೋದರು,ಹಿಂದಿನ ಸಾಲಿನ ಮಳೆ ಹಾನಿ ಪರಿಹಾರ ಇನ್ನೂ ನೀಡಿಲ್ಲ. ಬಿಜೆಪಿ ನಾಯಕರು ಜನರ ಪರ ಅಲ್ಲ, ಪರ್ಸೆಂಟೇಜ್ ಪರ. ಕಾಶ್ಮೀರ್ ಫೈಲ್ಸ್ ಸಿನಿಮಾಗೆ ತೆರಿಗೆ ರದ್ದು ಮಾಡುತ್ತೀರಿ. ಅಗತ್ಯ ವಸ್ತುಗಳ ಮೇಲೆ ವ್ಯತಿರಿಕ್ತ ತೆರಿಗೆ ಹಾಕುತ್ತೀರಿ. ಗೃಹಬಳಕೆ ಸಿಲಿಂಡರ್ ಬೆಲೆ ಗಗನಕ್ಕೇರಿದ್ದು ಜನ ಪುನಃ ಸೌದೆ ಒಲೆಗೆ ಬಂದಿದ್ದಾರೆ. ಮೋದಿ ಸಾಲ ಮಾಡಿ ದೇಶವನ್ನ ಹಾಳು ಮಾಡ್ತಿದ್ದಾರೆ. ಮೋದಿ ಶ್ರೀಲಂಕಾ ತರಹದ ದೇಶ ದಿವಾಳಿ ಮಾಡದಿದ್ದರೆ ಸಾಕು ಎಂದರು.
ಶಿವಮೊಗ್ಗ ಪೊಲೀಸ್ ಠಾಣೆಗಳು ಬಿಜೆಪಿ ಕಚೇರಿಗಳಾಗಿವೆ. ಹರ್ಷ ಕೊಲೆಗೆ ಪೊಲೀಸ್ ವೈಫಲ್ಯ ಕಾರಣ, ಶಾಸಕ ಈಶ್ವರಪ್ಪ ನೇರ ಕಾರಣ. ಸರಳ ವಾಸ್ತು ಗುರೂಜಿ ಸಾಯಿಸಿದ್ದು ಮುಸ್ಲಿಮರಾಗಿದ್ದರೆ ಬೇರೇನೋ ಕಥೆಯಾಗಿರುತ್ತಿತ್ತು ಎಂದರು.