ನವದೆಹಲಿ:ಭಾರತದಲ್ಲಿ ಮಾರಣಾಂತಿಕ ಕೋವಿಡ್ 19 ಸೋಂಕು ತೀವ್ರ ಕಳವಳ ಮೂಡಿಸಿರುವ ಬೆನ್ನಲ್ಲೇ ಕಳೆದ 24ಗಂಟೆಗಳಲ್ಲಿ ದಾಖಲೆಯ 3.86 ಲಕ್ಷ ಕೋವಿಡ್ ಪ್ರಕರಣ ಪತ್ತೆಯಾಗಿದ್ದು, 3,498 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ(ಏ.30) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲು’ಕೈ’ : ಬಿಜೆಪಿಗೆ 6 ಸ್ಥಾನ
ದಾಖಲೆ ಪ್ರಮಾಣದ ಸೋಂಕು ಭಾರತದಲ್ಲಿ ಪತ್ತೆಯಾಗುತ್ತಿದ್ದು, ಆಕ್ಸಿಜನ್, ಮೆಡಿಕಲ್ ಉಪಕರಣಗಳ ಕೊರತೆಯ ಹಿನ್ನೆಲೆಯಲ್ಲಿ ಜಗತ್ತಿನ ಹಲವಾರು ದೇಶಗಳು ನೆರವಿನ ಹಸ್ತ ನೀಡಿದೆ. ಅಮೆರಿಕದ ಬೃಹತ್ ಸೇನಾ ವಿಮಾನ 400 ಆಕ್ಸಿಜನ್ ಸಿಲಿಂಡರ್ ಗಳನ್ನು ಹೊತ್ತೊಯ್ದು ಭಾರತಕ್ಕೆ ಆಗಮಿಸುತ್ತಿದೆ.
ದೇಶದಲ್ಲಿ ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 2,08,330ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ ಒಂಬತ್ತು ದಿನಗಳಿಂದ ದೇಶದಲ್ಲಿ ಮೂರು ಲಕ್ಷಕ್ಕೂ ಅಧಿಕ ಹೊಸ ಕೋವಿಡ್ ಸೋಂಕು ಪತ್ತೆಯಾಗುತ್ತಿದೆ. ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣ 1.87ಕೋಟಿಗೆ ಹೆಚ್ಚಳವಾಗಿದೆ.
ಜಗತ್ತಿನಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣ ಹೊಂದಿರುವ ದೇಶಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಭಾರತ ಎರಡನೇ ಹಾಗೂ ಬ್ರೆಜಿಲ್ ಮೂರನೇ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ.