ಕಲಬುರಗಿ: ಕಳೆದ 55 ದಿನಗಳಿಂದ ಬಂದ್ ಆಗಿದ್ದ ಮದ್ಯ ಮಾರಾಟ ಸೋಮವಾರ ಮಧ್ಯಾಹ್ನ ನಂತರ ಶುರುವಾದರೂ ಸಂಜೆ 7ರ ಹೊತ್ತಿಗೆ ಜಿಲ್ಲೆಯಾದ್ಯಂತ 3.55 ಕೋಟಿ ರೂ.ಗೂ ಅಧಿಕ ಮೊತ್ತದ ಮದ್ಯ ಮಾರಾಟವಾಗಿದೆ.
ಎಲ್ಲ ಕಡೆ ಬೆಳಗ್ಗೆ 9ರಿಂದ ಮದ್ಯ ಮಾರಾಟ ಶುರುವಾದರೆ ಕಲಬುರಗಿಯಲ್ಲಿ ಜಿಲ್ಲಾಧಿಕಾರಿ ಬೆಳಗ್ಗೆ 11ಕ್ಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮಾಲೋಚಿಸಿ ತದನಂತರ ತೀರ್ಮಾನ ಪ್ರಕಟಿಸಿದರು. ಆ ನಂತರವೇ ಜಿಲ್ಲಾದ್ಯಂತ ಮಾರಾಟ ಪ್ರಕ್ರಿಯೆ ಶುರುವಾಯಿತು.
ಬೆಳಗ್ಗೆ 9ಕ್ಕೆ ಅಂಗಡಿಗಳು ತೆರೆದು ಮದ್ಯ ನೀಡಲಾಗುತ್ತದೆ ಎನ್ನುವುದನ್ನು ತಿಳಿದ ಮದ್ಯವ್ಯಸನಿಗಳು ಬೆಳಗ್ಗೆ 7ರಿಂದಲೇ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ ಜಿಲ್ಲಾಧಿಕಾರಿಗಳು ಇನ್ನೂ ಆದೇಶ ನೀಡಿಲ್ಲವೆಂಬ ವಿಷಯ ಅರಿತ ಕೆಲವರು ಜಾಗ ಖಾಲಿ ಮಾಡಿ ಮತ್ತೆ ಮಧ್ಯಾಹ್ನ ಸುಡು ಬಿಸಿಲನ್ನು ಲೆಕ್ಕಿಸದೇ ಸರದಿಯಲ್ಲಿ ನಿಂತು ಎಣ್ಣೆ ಪಡೆದರು.
ಬಿಸಿಲಲ್ಲಿ ಒಂದು ಕಿ.ಮೀ ದೂರದಷ್ಟು ಸರದಿಯಲ್ಲಿ ಜನ ನಿಂತಿದ್ದರು. ಮದ್ಯ ತೆಗೆದುಕೊಂಡು ಹೋಗಲು ಹಲವರು ಬ್ಯಾಗ್ ತೆಗೆದುಕೊಂಡು ಬಂದಿದ್ದರೆ ಇನ್ನು ಕೆಲವರು ಸಹಾಯಕರನ್ನು ಕರೆದುಕೊಂಡು ಬಂದಿದ್ದರು. ಸಾಮಾಜಿಕ ಅಂತರ ಕಣ್ಮರೆ: ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಅಂತಹ ಮದ್ಯದಂಗಡಿಗಳ ಪರವಾನಗಿ ರದ್ದುಪಡಿಸುವುದಾಗಿ ಅಬಕಾರಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದರು. ಆದರೆ ಅಬಕಾರಿ ಅಧಿಕಾರಿಗಳ ಆದೇಶ-ಎಚ್ಚರಿಕೆ ಕವಡೆ ಕಾಸಿಗೆ ಕಿಮ್ಮತ್ತಿಲ್ಲ ಎನ್ನುವಂತೆ ಮದ್ಯದಂಗಡಿಗಳ ಎದುರು ಮದ್ಯವ್ಯಸನಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಒಬ್ಬರ ಹಿಂದೆ ಒಬ್ಬರು ಹಿಂದೆ ನೂಕು ನುಗ್ಗಲು ಎನ್ನುವಂತೆ ನಿಂತಿದ್ದು ಬಹುತೇಕ ಎಲ್ಲ ಅಂಗಡಿಗಳ ಮುಂದೆ ಕಂಡು ಬಂತು.
ಕೆಲವೆಡೆಯಂತೂ ಜನರನ್ನು ನಿಯಂತ್ರಿಸಲು ಪೊಲೀಸ್‌ರು ಹರಸಾಹಸಪಟ್ಟರು. ಡಿಸಿ ಸಭೆಯತ್ತ ನೆಟ್ಟ ಎಲ್ಲರ ಚಿತ್ತ: ಸೋಮವಾರ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಶರತ್ ಬಿ. ಅವರು ಕರೆದ ಸಭೆಯಲ್ಲೇ ಮದ್ಯ ಮಾರಾಟ ಸಂಬಂಧವಾಗಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ಮಾಹಿತಿ ಅರಿತ ಮದ್ಯ ದಂಧೆಕೋರರು, ಮದ್ಯ ವ್ಯಸನಿಗಳು ಆ ಕಡೆಯಿಂದ ಈಕಡೆಗೆ ಹಾಗೂ ಈ ಕಡೆಯಿಂದ ಆ ಕಡೆಗೆ ಅಲೆದಾಡುತ್ತಿರುವುದು ಕಂಡು ಬಂತು. ಒಟ್ಟಾರೆ ಬೆಳಗ್ಗೆ 9ರಿಂದಲೇ ಮಾರಾಟ ಶುರುವಾಗಿದ್ದರೆ ಇನ್ನಷ್ಟು ಮೊತ್ತದ ಮದ್ಯ ಮಾರಾಟವಾಗುತ್ತಿತ್ತು ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.