Advertisement

ಅದೊಂದು ಕಾರಣಕ್ಕೆ 2ನೇ ಬಾರಿ ಲಾಕ್‌ಡೌನ್‌!

11:46 AM Jul 09, 2020 | mahesh |

ಮೆಲ್ಬರ್ನ್: ಆಸ್ಟ್ರೇಲಿಯಾದ ಅತೀ ದೊಡ್ಡ ನಗರಗಳಲ್ಲಿ ಒಂದಾದ ಮೆಲ್ಬರ್ನ್ ಕೋವಿಡ್‌ ವಿಚಾರದಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸುತ್ತಿದ್ದರೆ ಈ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ.  ಆಸ್ಟ್ರೇಲಿಯಾದ ಹೆಚ್ಚಿನ ನಗರಗಳು ಲಾಕ್‌ಡೌನ್‌ ಬಳಿಕ ತೆರೆದುಕೊಂಡು ಯಥಾಸ್ಥಿತಿಗೆ ಮರಳಿದ್ದರೆ ಮೆಲ್ಬರ್ನ್ ಮಾತ್ರ ಜನರನ್ನು ಮನೆಯೊಳಗೇ ಕೂರುವಂತೆ ಹೇಳಿ ಮತ್ತೆ ಲಾಕ್‌ಡೌನ್‌ ಘೋಷಿಸಬೇಕಾಯಿತು.

Advertisement

ಇದಕ್ಕೆ ಕಾರಣವಾಗಿದ್ದು ವಿದೇಶಗಳಿಂದ ಬಂದ ಆಸ್ಟ್ರೇಲಿಯಾ ಪ್ರಜೆಗಳನ್ನು ನಿರ್ವಹಣೆ ಮಾಡುವಲ್ಲಿ ಎಡವಿದ್ದು! ಕಳೆದೊಂದು ತಿಂಗಳಲ್ಲಿ ವಿಕ್ಟೋರಿಯಾ ರಾಜ್ಯದ ರಾಜಧಾನಿ ಮೆಲ್ಬರ್ನ್ನಲ್ಲಿ ಅತೀ ಹೆಚ್ಚು ಕೇಸುಗಳು ದಾಖಲಾಗಿವೆ. ಈ ಕಾರಣ ಅನಿವಾರ್ಯವಾಗಿ ಲಾಕ್‌ಡೌನ್‌ ಘೋಷಿಸಲಾಗಿದೆ. 6 ವಾರಗಳ ಲಾಕ್‌ಡೌನ್‌ ಘೋಷಣೆಯಿಂದ ಆರ್ಥಿಕವಾಗಿ ತೀವ್ರವಾಗಿ ಪೆಟ್ಟು ಬೀಳಬಹುದು ಎಂದು ತಿಳಿದಿದ್ದರೂ, ಲಾಕ್‌ಡೌನ್‌ ಮಾಡಲೇಬೇಕಾಗಿದೆ. ಆದರೂ ಜನಜೀವನ, ಆರ್ಥಿಕ ದೃಷ್ಟಿಯಿಂದ ರಾಜ್ಯದ ಮುಖ್ಯಮಂತ್ರಿ ಡೇನಿಯಲ್‌ ಆಂಡ್ರೂಸ್‌ ಅವರು ಅಗತ್ಯ ಕೆಲಸ, ಓದು, ವೈದ್ಯಕೀಯ ಕೆಲಸಗಳಿಗೆ ಜನರು ಹೊರಗೆ ಹೋಗಬಹುದು ಎಂದು ಅನುಮತಿ ನೀಡಿದ್ದಾರೆ.

ವಿದೇಶಗಳಿಂದ ಬಂದವರನ್ನು ಸೂಕ್ತವಾಗಿ ಕ್ವಾರಂಟೈನ್‌ಗೆ ಒಳಪಡಿಸುವುದರಲ್ಲಿ, ಸೋಂಕು ಪೀಡಿತರನ್ನು ನಿರ್ವಹಣೆ ಮಾಡುವುದರಲ್ಲಿ ಸ್ಥಳೀಯಾಡಳಿತ ಎಡವಿದೆ ಎನ್ನಲಾಗಿದೆ.  ಇದರೊಂದಿಗೆ ಕೋವಿಡ್‌ ಪೀಡಿತರನ್ನು ರವಾನಿಸುವಾಗ ಸೂಕ್ತ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳದಿರುವುದು, ಅವರ ಕುಟುಂಬಸ್ಥರಿಗೆ ಭೇಟಿಗೆ ಅವಕಾಶ ನೀಡಿದ್ದು, ಕೆಲವೊಂದು ಕೇಂದ್ರಗಳಲ್ಲಿ ಕೋವಿಡ್‌ ರೋಗಿಗಳು, ಜನಸಾಮಾನ್ಯರಿಗೆ ಮುಖಾಮುಖೀಯಾಗಿರುವಂತೆ ಆಗಿದ್ದು ಇತ್ಯಾದಿ ಕಾರಣಗಳನ್ನು ಆಸ್ಟ್ರೇಲಿಯಾದ ಹೆರಾಲ್ಡ್‌ ಸನ್‌ ಪತ್ರಿಕೆ ಬೊಟ್ಟು ಮಾಡಿದೆ.

ಇದರೊಂದಿಗೆ ಕೋವಿಡ್‌ ಕೇಂದ್ರಗಳಲ್ಲಿ ಕರ್ತವ್ಯ ನಿರತರಾಗಿದ್ದ ಗಾರ್ಡ್‌ಗಳು ಸಿಗರೆಟ್‌ ಲೈಟರ್‌ಗಳನ್ನು ಹಂಚಿಕೊಂಡಿದ್ದು, ಒಟ್ಟಿಗೆ ಕಾರುಗಳಲ್ಲಿ ಹೋಗಿ ಬರುತ್ತಿದ್ದುದರಿಂದ ಸೋಂಕು ಅವರ ಸಮುದಾಯದಲ್ಲೂ ಹಬ್ಬಲು ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next