Advertisement

2ನೇ ಟಿ20: ಭಾರತ ವನಿತೆಯರ ಸರಣಿ ವಿಕ್ರಮ: ಶ್ರೀಲಂಕಾ ವಿರುದ್ಧ 5 ವಿಕೆಟ್‌ ಗೆಲುವು

11:35 PM Jun 25, 2022 | Team Udayavani |

ಡಂಬುಲ: ಆತಿಥೇಯ ಶ್ರೀಲಂಕಾವನ್ನು ಸತತ 2ನೇ ಟಿ20 ಪಂದ್ಯದಲ್ಲೂ ಮಣಿಸಿದ ಹರ್ಮನ್‌ಪ್ರೀತ್‌ ನಾಯಕತ್ವದ ಭಾರತೀಯ ವನಿತಾ ತಂಡ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಶನಿವಾರದ ಮುಖಾಮುಖಿಯನ್ನು ಭಾರತ 5 ವಿಕೆಟ್‌ಗಳಿಂದ ಜಯಿಸಿತು.

Advertisement

ಇದು ಕೂಡ ಸಣ್ಣ ಮೊತ್ತದ ಹೋರಾಟವಾಗಿತ್ತು. ಟಾಸ್‌ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್‌ ಆಯ್ದುಕೊಂಡು 7 ವಿಕೆಟಿಗೆ 125 ರನ್‌ ಮಾಡಿದರೆ, ಭಾರತ 19.1 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 127 ರನ್‌ ಬಾರಿಸಿತು.

ಮೊದಲ ಮುಖಾಮುಖಿಯಲ್ಲಿ ಭಾರತ 34 ರನ್‌ ಗೆಲುವು ಸಾಧಿಸಿತ್ತು. ಅಂತಿಮ ಪಂದ್ಯ ಸೋಮವಾರ ಇದೇ ಅಂಗಳದಲ್ಲಿ ನಡೆಯಲಿದೆ.

ಲಂಕಾ ಅಮೋಘ ಆರಂಭ
ಶ್ರೀಲಂಕಾ ಆರಂಭ ಆಮೋಘ ವಾಗಿತ್ತು. ನಾಯಕಿ ಚಾಮರಿ ಅತಪಟ್ಟು (43) ಮತ್ತು ವಿಶ್ಮಿ ಗುಣರತ್ನೆ (45) 13.5 ಓವರ್‌ ನಿಭಾಯಿಸಿ ಮೊದಲ ವಿಕೆಟಿಗೆ 87 ರನ್‌ ಪೇರಿಸಿದ್ದನ್ನು ಕಂಡಾಗ ಲಂಕಾ ನೂರೈವತ್ತರ ಗಡಿ ದಾಟೀತೆಂದು ಭಾವಿಸಲಾಗಿತ್ತು. ಆದರೆ ಪೂಜಾ ವಸ್ತ್ರಾಕರ್‌ ಈ ಜೋಡಿಯನ್ನು ಬೇರ್ಪಡಿಸಿದ್ದೇ ಸೈ, ಲಂಕಾ ವಿಕೆಟ್‌ಗಳು ಬೆನ್ನು ಬೆನ್ನಿಗೆ ಉದುರತೊಡಗಿದವು. ಯಾರಿಂದಲೂ ಎರಡಂಕೆಯ ಮೊತ್ತ ದಾಖಲಿಸಲಾಗಲಿಲ್ಲ. ಉಳಿದ 7 ಮಂದಿ ಸೇರಿ ಗಳಿಸಿದ್ದು 26 ರನ್‌ ಮಾತ್ರ!

ದೀಪ್ತಿ ಶರ್ಮ 34ಕ್ಕೆ 2 ವಿಕೆಟ್‌ ಕೆಡವಿದರೆ, ರೇಣುಕಾ ಸಿಂಗ್‌, ರಾಧಾ ಯಾದವ್‌, ಪೂಜಾ ವಸ್ತ್ರಾಕರ್‌ ಮತ್ತು ನಾಯಕಿ ಕೌರ್‌ ಒಂದೊಂದು ವಿಕೆಟ್‌ ಕೆಡವಿ ಲಂಕೆಗೆ ಬಲವಾದ ಕಡಿವಾಣ ಹಾಕಿದರು.

Advertisement

ಇದನ್ನೂ ಓದಿ:ಅಭ್ಯಾಸ ಪಂದ್ಯ: ಶ್ರೇಯಸ್‌ ಅಯ್ಯರ್‌, ವಿರಾಟ್‌ ಕೊಹ್ಲಿ ಅರ್ಧ ಶತಕ

ಒತ್ತಡಕ್ಕೊಳಗಾಗದ ಭಾರತ
ಚೇಸಿಂಗ್‌ ವೇಳೆ ಭಾರತ ಯಾವುದೇ ಒತ್ತಡಕ್ಕೆ ಸಿಲುಕಲಿಲ್ಲ. ಸ್ಮತಿ ಮಂಧನಾ (39) 11ನೇ ಓವರ್‌ ತನಕ ನಿಂತು ಹೋರಾಟ ಜಾರಿಯಲ್ಲಿರಿಸಿದರು. ಈ ನಡುವೆ ತಲಾ 17 ರನ್‌ ಮಾಡಿದ ಶಫಾಲಿ ವರ್ಮ ಮತ್ತು ಎಸ್‌. ಮೇಘನಾ ವಾಪಸಾಗಿದ್ದರು. ಇಬ್ಬರೂ 10 ಎಸೆತ ಎದುರಿಸಿದ್ದರು.

ಹರ್ಮನ್‌ಪ್ರೀತ್‌ ಕೌರ್‌ ನಾಯಕಿಯ ಆಟವಾಡಿ ಅಜೇಯ 31 ರನ್‌ ಬಾರಿಸಿದರು (32 ಎಸೆತ, 2 ಬೌಂಡರಿ). ಮೊದಲ ಪಂದ್ಯದಲ್ಲಿ ಮಿಂಚಿದ ಜೆಮಿಮಾ ರೋಡ್ರಿಗಸ್‌ ಇಲ್ಲಿ ಮೂರೇ ರನ್ನಿಗೆ ನಿರ್ಗಮಿಸಿದರು. ಯಾಸ್ತಿಕಾ ಭಾಟಿಯ ನಾಯಕಿಗೆ ಉತ್ತಮ ಬೆಂಬಲವಿತ್ತು 13 ರನ್‌ ಮಾಡಿದರು. 18 ಎಸೆತಗಳ ಈ ಇನ್ನಿಂಗ್ಸ್‌ ನಲ್ಲಿ ಒಂದೂ ಬೌಂಡರಿ ಹೊಡೆತ ಇರಲಿಲ್ಲ.

34 ಎಸೆತಗಳಿಂದ 39 ರನ್‌ ಮಾಡಿದ ಮಂಧನಾ ಭಾರತೀಯ ಸರದಿಯ ಟಾಪ್‌ ಸ್ಕೋರರ್‌. ಅವರು 8 ಬೌಂಡರಿ ಬಾರಿಸಿ ಮಿಂಚಿದರು.

ಅಂತಿಮ ಓವರ್‌ನಲ್ಲಿ ಭಾರತದ ಗೆಲುವಿಗೆ ಕೇವಲ 3 ರನ್‌ ಅಗತ್ಯವಿತ್ತು. ಕವಿಶಾ ದಿಲ್ಹಾರಿ ಅವರ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿದ ಕೌರ್‌ ಜಯಭೇರಿ ಮೊಳಗಿಸಿದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-7 ವಿಕೆಟಿಗೆ 125 (ಗುಣರತ್ನೆ 45, ಅತಪಟ್ಟು 43, ದೀಪ್ತಿ 34ಕ್ಕೆ 2). ಭಾರತ-19.1 ಓವರ್‌ಗಳಲ್ಲಿ 5 ವಿಕೆಟಿಗೆ 127 (ಮಂಧನಾ 39, ಕೌರ್‌ ಔಟಾಗದೆ 31, ಶಫಾಲಿ 17, ಮೇಘನಾ 17, ಯಾಸ್ತಿಕಾ 13, ಇನೋಕಾ ರಣವೀರ 18ಕ್ಕೆ 2, ಒಶಾದಿ ರಣಸಿಂಘೆ 32ಕ್ಕೆ 2).
ಪಂದ್ಯಶ್ರೇಷ್ಠ: ಹರ್ಮನ್‌ಪ್ರೀತ್‌ ಕೌರ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next