Advertisement

2nd PUC ಪರೀಕ್ಷೆ-2 ಫಲಿತಾಂಶ ಪ್ರಕಟ; ಶೇ. 35.25 ವಿದ್ಯಾರ್ಥಿಗಳು ಉತ್ತೀರ್ಣ

11:22 PM May 21, 2024 | keerthan |

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ- 2ರ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಕಳೆದ ಎಪ್ರಿಲ್ 29ರಿಂದ ಮೇ 16ರವರೆಗೆ ರಾಜ್ಯದ 301 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 1,49,824 ವಿದ್ಯಾರ್ಥಿಗಳು ಪರೀಕ್ಷೆ 2ಕ್ಕೆ ನೋಂದಾಯಿಸಿಕೊಂಡಿದ್ದರು. ಅವರಲ್ಲಿ 1,48,942 ವಿದ್ಯಾರ್ಥಿಗಳು ಹಾಜರಾಗಿದ್ದು, 52,505 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅಂದರೆ ಶೇ. 35.25ರಷ್ಟು ಫಲಿತಾಂಶ ಬಂದಿದೆ.

Advertisement

ಪರೀಕ್ಷೆ-2ರ ಫಲಿತಾಂಶವನ್ನು https://karresults.nic.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳಲು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪರೀಕ್ಷೆ – 1 ಮತ್ತು ಪರೀಕ್ಷೆ – 2 ರಲ್ಲಿ ವಿಷಯವಾರು ಗಳಿಸಿದ ಅತಿ ಹೆಚ್ಚು ಅಂಕಗಳನ್ನು ಪರಿಗಣಿಸಿ ಅಂತಿಮ ಫಲಿತಾಂಶವನ್ನು https://kseab.karnataka.gov.in ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು ಎಂದು ಇಲಾಖೆ ಪ್ರಕಟಿಸಿದೆ.

ಬೆಂಗಳೂರಿನ ಯಶ್ವತಪುರದ ವಿದ್ಯಾಶ್ರೀ ಅವರು ಕನ್ನಡ ವಿಷಯದಲ್ಲಿ ಮೊದಲ ಪರೀಕ್ಷೆಗಿಂತ ಎರಡನೇ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂದರೆ 51 ಅಂಕಗಳನ್ನು ಹೆಚ್ಚು ಪಡೆದಿದ್ದಾರೆ. ಪರೀಕ್ಷೆ 1ರಲ್ಲಿ ಅವರು 24 ಅಂಕ ಪಡೆದಿದ್ದರೆ, ಪರೀಕ್ಷೆ 2ರಲ್ಲಿ ಅವರು 75 ಮಾರ್ಕ್ ಪಡೆದಿದ್ದಾರೆ.

ಭೌತಶಾಸ್ತ್ರ ವಿಭಾಗದಲ್ಲಿ ಅತಿ ಹೆಚ್ಚು, 23689 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 14065 ವಿದ್ಯಾರ್ಥಿಗಳು ಧನಾತ್ಮಕ ಅಂಕ ಪಡೆದಿದ್ದಾರೆ. ರಸಾಯನ ಶಾಸ್ತ್ರ ವಿಭಾಗದಲ್ಲಿ 20226 ವಿದ್ಯಾರ್ಥಿಗಳು ಬರೆದಿದ್ದು, 7127 ವಿದ್ಯಾರ್ಥಿಗಳು ಹೆಚ್ಚುವರಿ ಅಂಕ ಪಡೆದಿದ್ದಾರೆ.

ಉತ್ತರ ಪತ್ರಿಕೆಯ ಸ್ಕ್ಯಾನಿಂಗ್‌ ಪ್ರತಿಗಾಗಿ ಮೇ 21ರಿಂದ 23ರವರೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕಡ್ಡಾಯವಾಗಿ ಸ್ಕ್ಯಾನಿಂಗ್‌ ಪ್ರತಿ ತೆಗೆದುಕೊಂಡವರಿಗೆ ಮಾತ್ರ ಮರುಮೌಲ್ಯಮಾಪನ ಹಾಗೂ ಮರುಎಣಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಮೇ 22ರಿಂದ 25ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

Advertisement

ಪರೀಕ್ಷೆ-3: ವೇಳಾಪಟ್ಟಿ ಪ್ರಕಟ
ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ-3ರ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ಪ್ರಕಟಿಸಿದೆ. ಜೂನ್‌ 24ರಿಂದ ಪರೀಕ್ಷೆ ಆರಂಭಗೊಳ್ಳಲಿದ್ದು ಜುಲೈ 5ರ ವರೆಗೆ ಪರೀಕ್ಷೆ ನಡೆಯಲಿದೆ.

ಮೊದಲೆರಡು ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು, ಅಂಕ ಸುಧಾರಣೆ ಬಯಸುವವರು ಈ ಪರೀಕ್ಷೆ ಬರೆಯಬಹುದಾಗಿದೆ.

ಜೂ. 24-ಕನ್ನಡ, ಅರೇಬಿಕ್‌, ಜೂ. 25-ಇಂಗ್ಲಿಷ್‌, ಜೂ. 26-ಸಮಾಜಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಜೂ. 27-ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಜೂ. 28-ಅರ್ಥಶಾಸ್ತ್ರ, ರಸಾಯನಶಾಸ್ತ್ರ, ಜು. 1-ಗೃಹ ವಿಜ್ಞಾನ, ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜು. 2-ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ, ಜು. 3-ಭೂಗೋಳಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ, ಜು. 4-ಹಿಂದಿ, ಜು. 5-ತೃತೀಯ ಭಾಷೆ ಮತ್ತು ಎನ್‌ಎಸ್‌ಕ್ಯೂಎಫ್ ವಿಷಯದ ಪರೀಕ್ಷೆ ನಡೆಯಲಿದೆ. ಎನ್‌ಎಸ್‌ಕ್ಯೂಎಫ್ ವಿಷಯಗಳ ಪರೀಕ್ಷೆ ಅಪರಾಹ್ನ 2.15ರಿಂದ ಸಂಜೆ 4.30ರ ವರೆಗೆ ನಡೆಯಲಿದೆ. ಉಳಿದೆಲ್ಲ ವಿಷಯಗಳ ಪರೀಕ್ಷೆ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ವರೆಗೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next