ಸುವರ್ಣ ವಿಧಾನಸೌಧ, ಬೆಳಗಾವಿ: ಚಳಿಗಾಲದ ಅಧಿವೇಶನದ 2 ನೇ ದಿನವೂ “ವ್ಯರ್ಥಕಲಾಪ’ ದೃಶ್ಯ ಕಂಡು ಬಂದಿದೆ.
ಡಿವೈಎಸ್‌ಪಿ ಎಂ.ಕೆ.ಗಣಪತಿ ಪ್ರಕರಣ ಕ್ಕೆ ಸಂಬಂಧಿಸಿ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಕಾರಣ ಸದನವನ್ನು ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ನಾಳೆಗೆ ಮುಂದೂಡಿದರು.
ಬೆಳಗ್ಗೆ ನಿಲುವಳಿ ಸೂಚನೆ ಮನವಿಯನ್ನು ಸ್ಪೀಕರ್ ತಿರಸ್ಕರಿಸಿದ್ದರು, ಗದ್ದಲ ಏರ್ಪಟ್ಟಾಗ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದ್ದರು. ಮಧ್ಯಾಹ್ನವೂ ಪ್ರತಿಭಟನೆ ಮುಂದುವರಿದಾಗ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.
ಗದ್ದಲದ ನಡುವೆಯೂ 2 ವಿಧೇಯಕಗಳನ್ನು ಮಂಡಿಸಲಾಗಿದ್ದು ಎಸ್‌ಸಿ, ಎಸ್‌ಟಿ ಬಡ್ತಿ ಮೀಸಲಾತಿ ವಿಧೇಯಕ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ತಿದ್ದುಪಡಿ ವಿಧೇಯಕ 2017 ನ್ನು ಕಾನೂನು ಸಚಿವ ಟಿ.ಬಿ ಜಯಚಂದ್ರ ಮಂಡಿಸಿದರು.
ರಾಜ್ಯ ಸರ್ಕಾರದ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ನಡೆಸುತ್ತಿರುವ ಪ್ರತಿಭಟನೆಯ ಕುರಿತು ಚರ್ಚೆಗಳು ನಡೆದು ಗದ್ದಲ ಏರ್ಪಟ್ಟಿತು.
ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿ ನಾನು ಓರ್ವ ನಾಗರಿಕನಾಗಿ ಯಾರಾದರೂ ನನ್ನಿಂದ ಸಾವನ್ನಪ್ಪಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.