ಬೆಳಗಾವಿ/ಗೋಕಾಕ: ರಾಜ್ಯ ಸಣ್ಣ ಕೈಗಾರಿಕಾ ಸಚಿವ ರಮೇಶ ಜಾರಕಿಹೊಳಿ ಹಾಗೂ ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳಕರ ಸೇರಿದಂತೆ ಕಾಂಗ್ರೆಸ್‌ನ ಪ್ರಭಾವಿ ನಾಯಕರ ಮನೆ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಶುಕ್ರವಾರ ರಾತ್ರಿವರೆಗೂ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರಿಸಿದ್ದಾರೆ.
ಈ ಮಧ್ಯೆ, ದಾಳಿ ಸಂದರ್ಭದಲ್ಲಿ ಮನೆಯಲ್ಲಿ ಇಲ್ಲದ ಸಚಿವ ರಮೇಶ ಜಾರಕಿಹೊಳಿ ಶುಕ್ರವಾರ ಬೆಳಗಿನ ಜಾವ ಗೋಕಾಕಕ್ಕೆ ಬಂದಿದ್ದಾರೆ. ನಿವಾಸದಲ್ಲಿ ತಂಗಿರುವ ಅವರು ಅಧಿಕಾರಿಗಳ ಪ್ರಶ್ನೆಗೆ ಮಾಹಿತಿ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಸತತ 36 ಗಂಟೆಗೂ ಹೆಚ್ಚು ಕಾಲ ದಾಖಲೆಗಳ ಪರಿಶೀಲನೆ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ದಾಳಿ ವೇಳೆ ಯಾವ ದಾಖಲೆಗಳು, ಯಾವ ವಸ್ತುಗಳು ಸಿಕ್ಕಿವೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಗೋಕಾಕನಲ್ಲಿರುವ ಸಚಿವ ರಮೇಶ ಜಾರಕಿಹೊಳಿ, ಸಹೋದರ ಲಖನ್ ಜಾರಕಿಹೊಳಿ, ಸಚಿವರ ಆಪ್ತ ಅಲಿ ಅತ್ತಾರ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮುಲ್ಲಾ ಮನೆಯಲ್ಲೂ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರಿದಿದೆ.
ಬೆಳಗಾವಿಯ ಕುವೆಂಪು ನಗರದ ಲಕ್ಷ್ಮಿ ಹೆಬ್ಟಾಳಕರ ಮನೆಯಲ್ಲೂ ಪರಿಶೀಲನೆ ಕಾರ್ಯ ಮುಂದುವರಿದಿದೆ. ಸುಮಾರು 12 ಜನರ ತಂಡದ ಅಧಿಕಾರಿಗಳು ಗುರುವಾರ ರಾತ್ರಿ ಇಡೀ ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಲಕ್ಷ್ಮೀ ಹೆಬ್ಟಾಳಕರ ಒಡೆತನದ ಯರಗಟ್ಟಿ ಸಮೀಪದ ಸತ್ತಿಗೇರಿ ಹರ್ಷಾ ಶುಗರ್ ಸಕ್ಕರೆ ಕಾರ್ಖಾನೆಗೆ ಐಟಿ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ಭೇಟಿ ನೀಡಿ ಅಲ್ಲಿಯ ಕೆಲ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.